ನಾನು ಸಾಯೋದ್ರೋಳಗೆ ಒಂದಷ್ಟು ಮಾಡಿ ನಿಮಗೆ ಕೊಟ್ಟುಬಿಟ್ಟು ಸತ್ತರೆ ಸಾಕಾಗಿದೆ ನನಗೆ-ಗುರುಪ್ರಸಾದ್ ಆಡಿಯೋ ವೈರಲ್..!
ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು ಗುರು ಪ್ರಸಾದ್. ಮಠ, ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಜನ ಮನ ಗೆದ್ದ ಗುರು ಪ್ರಸಾದ್ ತಮ್ಮ ಬದುಕಿನಲ್ಲಿ ಶಿಸ್ತು ರೂಢಿಸಿಕೊಂಡಿದ್ದರೆ ಗುರು ಪ್ರಸಾದ್ ಇನ್ನೂ ಎತ್ತರೆತ್ತರಕ್ಕೆ ಬೆಳೆಯಬಹುದಿತ್ತು. ಆದರೆ, ದುರಾದೃಷ್ಟವಶಾತ್ ಹಾಗಾಗಲಿಲ್ಲ. ಮಾನಸಿಕ ಖಿನ್ನತೆಗೆ ಜಾರಿದ್ದ ಗುರುಪ್ರಸಾದ್ ಕಳೆದ ವರ್ಷ ನೇಣಿಗೆ ಕೊರಳೊಡ್ಡಿದರು. ಚಿರನಿದ್ರೆಗೆ ಜಾರಿದರು.
ಇಂಥಾ ಗುರು ಪ್ರಸಾದ್ ಆರು ವರ್ಷದ ಹಿಂದೆ ತಮ್ಮ ಮೊದಲನೇ ಪತ್ನಿ ಆರತಿ ಅವರಿಂದ ದೂರವಾಗಿದ್ದರು. ಹೆಚ್ಚು ಕಡಿಮೆ ಹದಿನಾರು ವರ್ಷ ಜೊತೆಯಾಗಿ ಸಂಸಾರ ನಡೆಸಿದ್ದ ಗುರು ಪ್ರಸಾದ್ ತಮ್ಮ ಹೆಂಡ್ತಿಯ ಜೊತೆ ಸಂಬಂಧವನ್ನು ಕಡಿದುಕೊಂಡಿದ್ದರು. ಆರತಿ ಅವರಿಂದ ದೂರವಾದ ಗುರುಪ್ರಸಾದ್ 2023ರ ಆಸು ಪಾಸಿನಲ್ಲಿ ಹೆಚ್ಚು ಕಡಿಮೆ ಮಗಳ ವಯಸ್ಸಿನ ಸುಮಿತ್ರಾ ಅವರನ್ನು ಮದುವೆಯಾಗಿದ್ದರು. ಅವರಿಗೂ ಕೂಡ ಹೆಣ್ಣು ಮಗುವನ್ನು ಪ್ರಾಪ್ತಿ ಮಾಡಿದ್ದರು. ಹೋಗಲಿ ಸುಮಿತ್ರಾ ಅವರ ಜೊತೆಯಾದರು ಗುರುಪ್ರಸಾದ್ ನೆಮ್ಮದಿಯಿಂದ ಬಾಳ್ವೆ ನಡೆಸಿದ್ದರೆ ಆ ಕಥೆ ಬೇರೆಯಾಗುತ್ತಿತ್ತು.

ಆದರೆ ಗುರುಪ್ರಸಾದ್ ತಮ್ಮ ಎರಡನೇ ಪತ್ನಿ ಸುಮಿತ್ರಾ ಅವರನ್ನು ತಮ್ಮ ಅರಾಜಕ ಬದುಕಿನ ಭಾಗವಾಗಿಸಿಕೊಂಡಿದ್ದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಅವರ ಪತ್ನಿ ಸುಮಿತ್ರಾ ಜೊತೆ ಮಾತನಾಡಿದ್ದ ಆಡಿಯೋ ಲೀಕ್ ಆಗಿದೆ. ವೈರಲ್ ಆಗಿದೆ.
ವೈರಲ್ ಆದ ಆಡಿಯೋದಲ್ಲಿ ಗುರುಪ್ರಸಾದ್ ಅವರಿಗೆ ಕರೆ ಮಾಡಿರುವ ಸುಮಿತ್ರಾ ಮಗಳ ಜೊತೆ ಮಾತನಾಡುವಂತೆ ಕೇಳಿಕೊಂಡಿದ್ದರು. ನಾನು ದುಡ್ಡು ಕೇಳಲು ಫೋನ್ ಮಾಡಿಲ್ಲ ಎಂದು ಹೇಳಿದ್ದರು. ಇದಕ್ಕೆ ಹತಾಶರಾಗಿ ಮಾತನಾಡಿದ್ದ ಗುರು ಪ್ರಸಾದ್ ನನಗೆ ಇರುವ ಒತ್ತಡದ ಕಲ್ಪನೆ ನಿಮಗೆ ಇಲ್ಲ ಎಂದು ನಾನು ಅವತ್ತೇ ಹೇಳಿದೀನಿ, ನೀವು ತುಂಬಾ ಕಿಲಾಡಿ ಎಂದುಕೊಂಡಿದ್ದೀರಾ, ನೋಡಿ ದರ್ಶನ್ ಎಪಿಸೋಡ್ ಎಲ್ಲ ನೋಡಿ ನಾನು ಆ ತರ ಇರಬೇಕಿತ್ತು ಆದರೆ ನಾನು ಹಂಗಿಲ್ಲ, ನನ್ ಹತ್ರ ದುಡ್ಡಿಲ್ಲ , ದುಡ್ಡಿದ್ದರೂ ನಾನು ಹಂಗೆಲ್ಲ ಮಾಡಲ್ಲ, ನಾನು ಸರಿಯಾಗಿ ಯೋಚನೆ ಮಾಡ್ತೀನಿ, ಸರಿಯಾಗಿ ಹೇಳ್ತೀನಿ, ತಾಳ್ಮೆ ಬೇಕು ಇಂತಹ ಟೈಮ್‌ನಲ್ಲಿ ಅಂತ ನನಗೆ ಗೊತ್ತು ಇಲ್ಲಿ ಒತ್ತಡಗಳು ಏನೇನೂ ಇವೆಯಂತ, ಎಲ್ಲ ರೆಕಾರ್ಡ್ ಆಗ್ತಿದೆ ಇವೆಲ್ಲ ಇಟ್ಕೊಳ್ಳಿ, ನೀವು ಇದುವರೆಗೆ ಮಾಡಿರೋದ್ರಿಂದ ನನಗೆ ಎಷ್ಟು ಲಾಸ್ ಆಗಿದೆ ಎನ್ನುವ ಕಲ್ಪನೆ ಕೂಡ ನಿಮಗೆ ಇಲ್ಲ, ನನ್ನ ಎಲ್ಲ ಮೊಬೈಲ್ ನಂಬರ್‌ಗಳನ್ನು ಇಟ್ಕೊಂಡಿದ್ರೀ, ಇನ್ನೊಂದು ಮಗದೊಂದು ಎಲ್ಲವೂ ಗೊತ್ತು ನಿಮಗೆ, ನನ್ನ ದರಿದ್ರ ಹೋಗ್ತಾನೇ ಇಲ್ಲ, ಅದು ನಿಮಗೆ ಗೊತ್ತು ಆದರೂ ನನ್ನ ಕಂಟ್ರೋಲ್ ತಗೋಬೇಕು, ಆದರೆ ನನ್ನ ಕಂಟ್ರೋಲ್ ತಗೊಳ್ಳೋಕಾಗಲ್ಲ, ಇದ್ದರೆ ನಾನು ಸಾಯೋದ್ರೋಳಗೆ ಒಂದಷ್ಟು ಮಾಡಿ ಕೊಟ್ಟುಬಿಟ್ಟು ಸತ್ತರೆ ಸಾಕಾಗಿದೆ ನನಗೆ, ಅದೊಂದೆ ಟಾರ್ಗೆಟ್ ಇಟ್ಕೊಂಡಿರೋದು ನಾನು ಎಂದು ಹೇಳಿದ್ದರು.
ಮುಂದುವರೆದು ಊಟಕ್ಕೂ ಗತಿ ಇಲ್ಲ, ಏನೇನೋ ಮಾಡ್ಕೊಂಡು ಕುಂತಿದೀನಿ, ನನ್ ಕೆಲಸ ಮುಗಿಸಿ, ಕೊಡೋರಿಗೆ ಕೊಟ್ಟುಬಿಟ್ಟು, ನಿಮಗೊಂದಿಷ್ಟು ಉಳಿಸಿ ನಿಮಗೆ ಮತ್ತು ಮಗಳಿಗೆ ದುಡ್ಡು ಕೊಟ್ಟು ಬಿಟ್ಟು ಅವತ್ತು ರಾತ್ರಿಯೇ ಸಾಯಬೇಕೆಂದು ನನ್ನ ಆಸೆ ಎಂದು ಹೇಳಿದ್ದಾರೆ. ನನ್ನ ಬಿಪಿ ರೈಸ್ ಮಾಡಿಸಬೇಡಿ, ನಾನು ತುಂಬಾ ಸುಸ್ತಲ್ಲಿ ಇದೀನ್ರೀ ಎಂದಿದ್ದ ಗುರುಪ್ರಸಾದ್ ಬದುಕೋಕೂ ಆಗದೇ ಸಾಯೋಕೂ ಆಗದೇ ಇದ್ದೀನಿ, ಬ್ಯುಸಿನೆಸ್ ಆಗೋವರೆಗೆ ಈ ಟೈಮ್‌ನಲ್ಲಿ ತಾಳ್ಮೆಯಿಂದ ಇರಬೇಕು ಅಂತ ಹೇಳಿದೀನಿ, ಒಂದೊಂದು ರೂಪಾಯಿಗೂ ಸಾಯ್ತಿದ್ದೀನಿ, ಹೀಗಿದೆ ನನ್ನ ಪರಿಸ್ಥಿತಿ, ಮಧ್ಯಾಹ್ನದ ಹೊತ್ತು ಇಷ್ಟೆಲ್ಲ ಮೂಡ್ ಕೆಡಿಸಿಕೊಂಡರೆ ಕೆಲಸ ಮಾಡೋಕಾಗಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು.


Click it and Unblock the Notifications











