"ನಟಿ ಲೀಲಾವತಿ ಪತಿ ಮಹಾಲಿಂಗ ಭಾಗವತರ್.. ವಿನೋದ್ ರಾಜ್‌ಗೆ ಮದ್ವೆ ಆಗಿ ಒಬ್ಬ ಮಗನಿದ್ದಾನೆ": ಬಾಂಬ್ ಸಿಡಿಸಿದ ನಿರ್ದೇಶಕ
ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಪುತ್ರ ವಿನೋದ್ ರಾಜ್ ಎನ್ನುವ ವಿವಾದವೊಂದು ದಶಕಗಳಿಂದ ಸದ್ದು ಮಾಡುತ್ತಿದೆ. ಆದರೆ ಬಹುತೇಕರು ಇದು ಕಟ್ಟು ಕಥೆ ಎಂದೇ ಹೇಳುತ್ತಾರೆ. ಲೀಲಾವತಿ ಅವರಿಗೆ ಮಹಾಲಿಂಗ ಭಾಗವತರ್ ಎಂಬುವವರ ಜೊತೆ ಮದುವೆ ಆಗಿತ್ತು. ಆ ದಂಪತಿ ಮಗ ವಿನೋದ್ ರಾಜ್ ಎನ್ನುತ್ತಾರೆ. ಇದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ನಿರ್ದೇಶಕ ಪ್ರಕಾಶ್ ರಾಜ್ ಮೇಹು ಡಾ. ರಾಜ್‌ಕುಮಾರ್ ಕುಟುಂಬಕ್ಕೆ ಒಂದ್ಕಾಲದಲ್ಲಿ ಬಹಳ ಆಪ್ತರಾಗಿದ್ದರು. ಅಣ್ಣಾವ್ರ ಜೊತೆಗೂ ಒಡನಾಟದಲ್ಲಿದ್ದರು. ದೊಡ್ಮನೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನದಲ್ಲಿ ತಾವೇ ಖುದ್ದು ಡಾ. ರಾಜ್‌ಕುಮಾರ್ ಬಳಿ "ಅಣ್ಣಾ ಲೀಲಾವತಿಯವರು ಎಲ್ಲಾ ಕಡೆ ವಿನೋದ್ ರಾಜ್ ನಿಮ್ಮ ಮಗ ನಿಮ್ಮ ಮಗ ಎಂದು ಹೇಳ್ಕೊಂಡು ಓಡಾಡುತ್ತಿದ್ದಾರೆ. ಏನಣ್ಣಾ?" ಎಂದು ಕೇಳಿದ್ದಾಗಿ ಹೇಳಿದ್ದರು. ಅದಕ್ಕೆ ಅಣ್ಣಾವ್ರ ಉತ್ತರ ಏನು ಅನ್ನುವುದನ್ನು ವಿವರಿಸಿದ್ದರು.

ಇದೀಗ ಪ್ರಕಾಶ್ ರಾಜ್ ಮೇಹು ವಿವಾದಕ್ಕೆ ಸಾಕ್ಷಿ ಸಿಕ್ಕಿದೆ ನೋಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. "ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ ಅಂತವರಿಗೆ ಇದು ಸತ್ಯ ಸಾಕ್ಷಿ. ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದಕ್ಕೆ ಸಾಕ್ಷಿ ಇಲ್ಲಿದೆ ನೋಡಿ. ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚೆನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ" ಎಂದಿದ್ದಾರೆ.
ಲೀಲಾವತಿ ಹಾಗೂ ಮಹಾಲಿಂಗ ಭಾಗವತರ್ ಮದುವೆ ಆಗಿದೆ ಅನ್ನುವುದು ಅಷ್ಟೇ ಅಲ್ಲ, ವಿನೋದ್ ರಾಜ್‌ಗೂ ಮದುವೆ ಆಗಿದೆ ಎಂದಿದ್ದಾರೆ. "ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾ ಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ.

"ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ "ಅವರು ಯಾರೋ ಅಭಿಮಾನಿಗಳು" ಅಂದು ಬಿಡುತ್ತಿದ್ದರು. ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ. ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು. ಆದ್ದರಿಂದ ಇಂದು ಇದನ್ನು ಬಹಿರಂಗ ಪಡಿಸಿದ್ದೇನೆ" ಎಂದು ಪ್ರಕಾಶ್ ರಾಜ್ ಮೇಹು ಬರೆದುಕೊಂಡಿದ್ದಾರೆ. ಈ ಬಗ್ಗೆ ಲೀಲಾವತಿ ಹಾಗೂ ವಿನೋದ್ ರಾಜ್ ಪ್ರತಿಕ್ರಿಯೆ ನೀಡುತ್ತಾರಾ ಕಾದು ನೋಡಬೇಕು.
ಈ ಬಗ್ಗೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್ ಮೇಹು "ಅದು ನನ್ನದೇ ಫೇಸ್ಬುಕ್ ಪೇಜ್. ನಾನೇ ಸತ್ಯವನ್ನು ಸಾಕ್ಷಿ ಸಮೇತ ಪ್ರಪಂಚದ ಮುಂದಿಟ್ಟಿದ್ದೇನೆ" ಎಂದು ಹೇಳಿದ್ದಾರೆ.


Click it and Unblock the Notifications











