ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಮಧ್ಯಾಹ್ನ ಅಂತ್ಯಕ್ರಿಯೆ
ಬಹುಭಾಷಾ ನಟಿ ಲೀಲಾವತಿ ಶುಕ್ರವಾರ(ಡಿಸೆಂಬರ್ 8) ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿಗೆ 85 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ಲೀಲಾವತಿಯವರ ಉಸಿರಾಟ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.
600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗ ಅಮೂಲ್ಯ ಕೊಡುಗೆ ನೀಡಿದ್ದ ಲೀಲಾವತಿ ಪುತ್ರ ವಿನೋದ್ ರಾಜ್‌ನ ಅಗಲಿದ್ದಾರೆ. ಇಂದು(ಡಿಸೆಂಬರ್ 9) ನಟಿ ಲೀಲಾವತಿ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಚಿತ್ರರಂಗದ ಕಲಾವಿದರು ಹಾಗೂ ಅಭಿಮಾನಿಗಳಿಗಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನೆಲಮಂಗಲದ ನಿವಾಸ ಬಳಿ ಮಾತ್ರವಲ್ಲದೇ ರವೀಂದ್ರ ಕಲಾಕ್ಷೇತ್ರದಲ್ಲೂ ಅಂತಿಮ ದರ್ಶನ ನಮನ ಸಲ್ಲಿಸಬಹುದು.

ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಿದ್ಧತೆ ನಡೀತಿದೆ. ರಾತ್ರಿಯೇ ವೇದಿಕೆ ಸಿದ್ದಪಡಿಸಿ, ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಸಾರ್ವಜನಿಕರಿಗೆ, ವಿಐಪಿಗಳುಗೆ ಪತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನು ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಸಿನಿಮಾ ಕಲಾವಿದರು ಕಲಾಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಕಲಾಕ್ಷೇತ್ರಕ್ಕೆ ಆಗಮಿಸಿ ಲೀಲಾವತಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ.
ನೆಲಮಂಗಲದ ಜ್ಯೂನಿಯರ್ ಕಾಲೇಜಿನ ಅಂಬೇಡ್ಕರ್ ಮೈದಾನದಲ್ಲಿ ಈಗಾಗಲೇ ಲೀಲಾವತಿಯವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲೀಲಾವತಿಯವರಯ ಪಾರ್ಥೀವ ಶರೀರಕ್ಕೆ ವಿನೋದ್ ರಾಜ್, ಪತ್ನಿ ಅನು ಹಾಗೂ ಮೊಮ್ಮಗ ಪುಷ್ಪನಮನ ಸಲ್ಲಿಸಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಲೀಲಾವತಿಯವರಿಗೆ ಅಂತಿಮ ನಮನ ಸಲ್ಲಿಸಲು ಬರುತ್ತಿದ್ದಾರೆ. ತಾಯಿಯ ಪಾರ್ಥೀವ ಶರೀರದ ಮುಂದೆ ಪುತ್ರ ವಿನೋದ್ ರಾಜ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಅವರಿಗೆ ಹಲವರು ಸಾಂತ್ವನ ಹೇಳುತ್ತಿದ್ದಾರೆ.
10 ಗಂಟೆ ಸುಮಾರಿಗೆ ಕಲಾಕ್ಷೇತ್ರಕ್ಕೆ ಲೀಲಾವತಿಯವರ ಪಾರ್ಥೀವ ಶರೀರ ರವಾನೆಯಾಗುತ್ತದೆ. ಒಂದು ಗಂಟೆಗೂ ಹೆಚ್ಚು ಸಮಯದ ಕಲಾಕ್ಷೇತ್ರದಲ್ಲಿ ಕಲಾವಿದರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಅವಕಾಶವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಅಶೋಕ್ ಸೇರಿದಂತೆ ಸಾಕಷ್ಟು ಗಣ್ಯರು ಬಂದು ಅಂತಿಮ ನಮನ ಸಲ್ಲಿಸಲಿದ್ದಾರೆ.
ಎರಡು ಗಂಟೆ ವೇಳೆಗೆ ಲೀಲಾವತಿಯವರ ಪಾರ್ಥೀವ ಶರೀರವನ್ನು ನೆಲಮಂಗಲದ ಸೋಲದೇವನಹಳ್ಳಿಗೆ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗುತ್ತಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಲೀಲಾವತಿಯವರ ತೋಟದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ.
ಒಟ್ಟು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಲೀಲಾವತಿಯವರು ಕನ್ನಡದಲ್ಲೇ 400 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ತಮ್ಮ ಅದ್ಭುತ ಅಭಿನಯದಿಂದ ಸಿನಿರಸಿಕರ ಮನಗೆದ್ದಿದ್ದರು. ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಜೋಡಿ ಮೋಡಿ ಮಾಡಿತ್ತು. ಇನ್ನು ಸಹ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿದ ಲೀಲಾವತಿ ಮುಂದೆ ನಾಯಕಿಯಾಗಿ ಮಿಂಚಿದರು. ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಿ ರಂಜಿಸಿದರು.
2009ರಲ್ಲಿ ಬಂದ 'ಯಾರದು' ಕೊನೆಯದಾಗಿ ನಟಿಸಿದ್ದರು. ಬಳಿಕ ಚಿತ್ರರಂಗದಿಂದ ದೂರಾಗಿದ್ದ ಹಿರಿಯ ನಟಿ ನೆಲಮಂಗಲದ ಸಮೀಪ ಸೋಲದೇವನಹಳ್ಳಿಯಲ್ಲಿ ಪುತ್ರ ವಿನೋದ್ ರಾಜ್ ಜೊತೆ ವಾಸವಾಗಿದ್ದರು. ಪುತ್ರ ವಿನೋದ್ ರಾಜ್ ನಟಿಸಿದ 'ಕಾಲೇಜ್ ಹೀರೊ', 'ಕನ್ನಡದ ಕಂದ', 'ಶುಕ್ರ' ಹಾಗೂ 'ಯಾರದು' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.


Click it and Unblock the Notifications











