Ghost Vs Leo: "ನಮ್ಮಲ್ಲಿರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು": ದರ್ಶನ್ ಹೇಳಿಕೆ ವೈರಲ್
ಕರ್ನಾಟಕದಲ್ಲಿ ಮತ್ತೆ ಪರಭಾಷಾ ಸಿನಿಮಾಗಳ ಆರ್ಭಟ ನಡೀತಿದೆ. ತಮಿಳಿನ 'ಲಿಯೋ' ಸಿನಿಮಾ ದೊಡ್ಡಮಟ್ಟದಲ್ಲಿ ಈ ವಾರ ರಿಲೀಸ್ ಆಗುತ್ತಿದೆ. ಕನ್ನಡದ 'ಘೋಸ್ಟ್' ಸಿನಿಮಾಗಿಂತಲೂ ತಮಿಳಿನ 'ಲಿಯೋ' ಸಿನಿಮಾ ಇಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರಲ್ಲಿ 45ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 'ಲಿಯೋ' ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ 'ಘೋಸ್ಟ್' ಚಿತ್ರಕ್ಕ ಸಿಕ್ಕಿರುವುದು ಕೇವಲ 25 ಚಿತ್ರಮಂದಿರ ಮಾತ್ರ. ಇನ್ನು 'ಘೋಸ್ಟ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಿಳಿನ 'ಲಿಯೋ' ಚಿತ್ರಕ್ಕೆ ರೆಸ್ಪಾನ್ಸ್ ಜೋರಾಗಿದೆ. ಟಿಕೆಟ್ ಬೆಲೆ 500ರಿಂದ 2000 ರೂ.ಗೆ ಹೆಚ್ಚಿಸಿದ್ದರೂ ಕೂಡ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ನಟ ದರ್ಶನ್ ಹೇಳಿದ್ದ ಹಳೇ ವಿಡಿಯೋ ವೈರಲ್ ಆಗ್ತಿದೆ.

ಎರಡು ವರ್ಷಗಳ ಹಿಂದೆ 'ರಾಬರ್ಟ್' ಚಿತ್ರವನ್ನು ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಮಾಡಲು ಅಲ್ಲಿ ಮಂದಿ ಹಿಂದೇಟು ಹಾಕಿದ್ದರು. ತೆಲುಗಿನಲ್ಲಿ ಬೇರೆ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಾಗಾಗಿ 'ರಾಬರ್ಟ್' ಸಿನಿಮಾ ಬಿಡುಗಡೆಗೆ ಅವಕಾಶಕ್ಕೆ ಕೊಡುವುದಿಲ್ಲ ಎಂದಿದ್ದರು. ಇದನ್ನು ವಿರೋಧಿಸಿ ನಟ ದರ್ಶನ್ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಕದ ತಟ್ಟಿದ್ದರು. ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ್ದರು. "ನಮ್ಮಲ್ಲಿರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು" ಎಂದಿದ್ದರು.
'ತೆಲುಗು ಚಿತ್ರರಂಗದವರು ಹೇಳುತ್ತಿರುವುದು, ನಾಲ್ಕು ಯಾವುದೊ ಸಣ್ಣ ಸಿನಿಮಾಗಳಿವೆ. ನಿಮ್ಮ ಹೀರೋಗಳು ಬಂದರೆ ನಮಗೆ ಇಲ್ಲಿ ಕಷ್ಟ ಆಗುತ್ತೆ ಅಂತ. ಆದರೆ ಅವರ ಹೀರೋಗಳು ಬಂದು ಇಲ್ಲಿ ತೊಂದರೆ ಕೊಡುತ್ತಿಲ್ಲವಾ, ನಾವು ಆ ತೊಂದರೆ ತಗೋತಿವಿ. ಅಂದ್ಮೇಲೆ ಕನ್ನಡದ ಸಿನಿಮಾಗಳಿಗೆ ಯಾಕೆ ಅವಕಾಶ ನೀಡುತ್ತಿಲ್ಲ" ಎಂದು ದರ್ಶನ್ ಪ್ರಶ್ನಿಸಿದ್ದರು.
"ನಮ್ಮಲ್ಲಿ ಇರುವವರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು. ತಮಿಳು ಅಥವಾ ತೆಲುಗಿನವರಿಗೆ ಇರುವ ಭಾಷಾ ಅಭಿಮಾನ ನಮ್ಮರಿಗೆ ಕಿಂಚಿತ್ತು ಇಲ್ಲ. ಇದನ್ನು ನಾನು ಓಪನ್ ಆಗಿ ಹೇಳುತ್ತೇನೆ. ತಮಿಳು, ತೆಲುಗಿನವರು ಬಂದ್ರೆ ಅವರ ಜೊತೆ ತಮಿಳು, ತೆಲುಗಿನಲ್ಲೇ ಮಾತನಾಡುತ್ತಾರೆ. ಅವರು ಕನ್ನಡದಲ್ಲಿ ಮಾತನಾಡುತ್ತಾರಾ?" ಎಂದು ಕೇಳಿದ್ದರು.

"ಪರಭಾಷಿಕರಿಗೆ ನಾವು ಅವರ ಮಾರ್ಕೆಟ್ ಕಬಳಿಸುತ್ತೇವೆ ಎನ್ನುವ ಭಯ ಶುರುವಾಗಿದೆ. ಅವರು ನಿಧಾನವಾಗಿ ಒಂದೊಂದೇ ಸಿನಿಮಾ ಮೂಲಕ ಕರ್ನಾಟಕಕ್ಕೆ ಎಂಟ್ರಿ ಕೊಟ್ರು. ಇದೀಗ ಗ್ರ್ಯಾಂಡ್ ಆಗಿ ಬರ್ತಿದ್ದಾರೆ. ನಾವು ಈಗ ಹಾಗೆ ಮಾಡೋಣ. ನನ್ನದು 50 ಸಿನಿಮಾಗಳು ಆಯಿತು. ನನ್ನ ಕತೆ ಬಿಡಿ. ಇವತ್ತು ನಮ್ಮ ಯಂಗ್ ಸ್ಟರ್ಸ್‌ಗಳ ಕತೆ ಏನು? ಎಂದು ದರ್ಶನ್ ಹೇಳಿದ್ದರು.
ಇತ್ತೀಚೆಗೆ ಕಾವೇರಿ ಹೋರಾಟದ ವಿಚಾರ ಬಂದಾಗಲೂ ಕರ್ನಾಟಕದಲ್ಲಿ 'ಜೈಲರ್' ಸಿನಿಮಾ ಕಲೆಕ್ಷನ್ ಬಗ್ಗೆ ದರ್ಶನ್ ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಕರ್ನಾಟಕದಲ್ಲಿ 'ಲಿಯೋ' ಸಿನಿಮಾ ಆರ್ಭಟ ನೋಡುತ್ತಿರುವವರು ರಾಜ್ಯದಲ್ಲಿ ಕನ್ನಡ ಸಿನಿಮಾಗಳ ಕತೆ ಮುಗೀತು ಎಂದು ಚರ್ಚೆ ಮಾಡಲು ಆರಂಭಿಸಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳು ಬರದೇ ಥಿಯೇಟರ್‌ಗಳಿ ಖಾಲಿ ಹೊಡೀತಿವೆ. ಹಾಗಾಗಿ ಥಿಯೇಟರ್ ಮಾಲೀಕರು ಜನ ಯಾವ ಚಿತ್ರಕ್ಕೆ ಬರ್ತಾರೋ ಆ ಸಿನಿಮಾ ಪ್ರದರ್ಶಿಸುತ್ತಿದ್ದಾರೆ ಎನ್ನುವ ವಾದವೂ ಇದೆ.
'ಲಿಯೋ' ಜೊತೆಗೆ ತಮಿಳಿನ 'ಘೋಸ್ಟ್' ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ ಯಾವುದೇ ಕ್ಲ್ಯಾಶ್ ಇಲ್ಲ. ಅವರ ಸಿನಿಮಾ ಕೂಡ ಚೆನ್ನಾಗಿ ಪ್ರದರ್ಶನ ಕಾಣಲಿ. ನಮ್ಮ ಸಿನಿಮಾ ಕೂಡ ಗೆಲ್ಲಬೇಕು. ಬೇಕಿದ್ದರೆ ಅವರಿಗೆ ಹೆಚ್ಚು ಚಿತ್ರಮಂದಿರ ಬಿಟ್ಟುಕೊಡೊಣ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. 'ಲಿಯೋ' ಮಾತ್ರವಲ್ಲ ತೆಲುಗಿನ 'ಭಗವಂತ್ ಕೇಸರಿ' ಹಾಗೂ 'ಟೈಗರ್ ನಾಗೇಶ್ವರರಾವ್' ಸಿನಿಮಾಗಳು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿವೆ.


Click it and Unblock the Notifications