ದ್ವೇಷ, ಅಸೂಯೆ ಬಿಟ್ಟು ಎಲ್ಲರನ್ನೂ ಪ್ರೀತಿಸೋಣ; ಫ್ಯಾನ್‌ವಾರ್ ಮಾಡುವವರಿಗೆ ರಾಘಣ್ಣನ ಕ್ಲಾಸ್!
ಇತ್ತೀಚಿನ ದಿನಗಳಲ್ಲಿ ಚಂದನವನದಲ್ಲಿ ಫ್ಯಾನ್ ವಾರ್ ಎಂಬ ಕೆಟ್ಟ ಪ್ರವೃತ್ತಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದು ಇಂಡಸ್ಟ್ರಿಗೆ ಇದು ಮಾರಕವಾಗಿ ಪರಿಣಮಿಸಿದೆ. ಆರ್ಥಿಕವಾಗಿ ನಷ್ಟವಲ್ಲದಿದ್ದರೂ ಈ ಫ್ಯಾನ್ ವಾರ್‌ಗಳಿಂದ ನಟರು, ನಟಿಯರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಾರೆ. ಇನ್ನು ಕೇವಲ ನಟ ಹಾಗೂ ನಟಿಯರು ಮಾತ್ರವಲ್ಲದೇ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರನ್ನು ಹೀನಾಯವಾಗಿ ಟ್ರೋಲ್ ಮಾಡಿದ್ದೂ ಸಹ ಉಂಟು.
ಇನ್ನು ಚೆನ್ನಾಗಿಲ್ಲದ ಚಿತ್ರವನ್ನು ಚೆನ್ನಾಗಿಲ್ಲ ಎನ್ನುವವರನ್ನು ಹಾಗೂ ಚಿತ್ರದ ಕಲೆಕ್ಷನ್ ಬಗ್ಗೆ ನಿಖರವಾದ ಅಂಕಿ ಅಂಶವನ್ನು ನೀಡುವವರನ್ನೂ ಸಹ ಹಲವು ಬಾರಿ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ ಈ ಫ್ಯಾನ್ ವಾರ್ ಪ್ರಿಯರು. ಇತ್ತೀಚೆಗಂತೂ ನಟರ ಫೋಟೊಗಳನ್ನು ಅತಿ ಕೆಟ್ಟ ರೀತಿಯಲ್ಲಿ ಎಡಿಟ್ ಮಾಡಿ, ಅವರ ಕುಟುಂಬದ ಮಹಿಳೆಯರ ಫೋಟೊಗಳನ್ನೂ ಸಹ ಕೆಟ್ಟದಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಬರಹ ಬರೆದುಕೊಂಡು ಅದನ್ನೂ ಸಹ ಮಹಾ ಸಾಧನೆ ಎಂಬಂತೆ ವರ್ತಿಸುವ ಅವಿವೇಕಿಗಳ ಗುಂಪು ಹೆಚ್ಚಾಗಿಬಿಟ್ಟಿದೆ.
ಚಿತ್ರಮಂದಿರಗಳಿಗೆ ಬಂದು ದುಡ್ಡು ಕೊಟ್ಟು ಸಿನಿಮಾ ನೋಡಿ ತಮ್ಮ ನಟರನ್ನು ಹೆಚ್ಚಾಗಿ ಪ್ರೀತಿಸುವ ನಿಜವಾದ ಅಭಿಮಾನಿಗಳೇ ಸುಮ್ಮನೆ ತಾವಾಯಿತು, ತಮ್ಮ ಪಾಡಾಯಿತು ಎಂದು ಇರಬೇಕಾದರೆ ಕೆಲ ಕಿಡಿಗೇಡಿಗಳು ಮಾತ್ರ ಮೂರು ಹೊತ್ತು ಸಾಮಾಜಿಕ ಜಾಲತಾಣದಲ್ಲಿ ಕೀ ಬೋರ್ಡ್ ಕುಟ್ಟುತ್ತಾ ಹೇಳಲಾಗದಂತಹ ಪದ ಬಳಕೆ ಮಾಡಿ ನಿಂದಿಸುತ್ತಾ ಸಮಯ ಹಾಳುಮಾಡಿಕೊಳ್ಳುವ ಜತೆಗೆ ನೆಟ್ಟಿಗರು ಕೆರಳುವಂತೆ ಮಾಡುತ್ತಿದ್ದಾರೆ. ಈ ರೀತಿಯ ಕೆಟ್ಟ ಬೆಳವಣಿಗೆಯ ಕುರಿತು ಈಗಾಗಲೇ ಹಲವು ನಟರು ಹೇಳಿಕೆಗಳನ್ನು ನೀಡಿದ್ದು, ಫ್ಯಾನ್ ವಾರ್ ಮಾಡಬೇಡಿ, ನಾವು ಚೆನ್ನಾಗಿಯೇ ಇದ್ದೇವೆ, ನೀವು ಕಿತ್ತಾಡಿಕೊಂಡು ಸಮಯ ಹಾಳು ಮಾಡಿಕೊಳ್ಳಬೇಡಿ ಎಂಬ ಹೇಳಿಕೆ ನೀಡಿದ್ದಾರೆ. ಇನ್ನು ಪ್ರೇಮಿಗಳ ದಿನಾಚರಣೆ ಕುರಿತು ರಾಘವೇಂದ್ರ ರಾಜ್‌ಕುಮಾರ್ ಹಂಚಿಕೊಂಡಿರುವ ವಿಶೇಷ ಪೋಸ್ಟ್ ಕೂಡ ಅಂತಹ ಫ್ಯಾನ್ ವಾರ್‌ಗಳ ವಿರುದ್ಧವಾಗಿರುವಂತೆ ತೋರುತ್ತಿದೆ.

ದ್ವೇಷ - ಅಸೂಯೆ ಬಿಟ್ಟು ಪುನೀತರಾಗೋಣ
ಹೌದು, ಇಂದು ( ಫೆಬ್ರವರಿ 14 ) ಪ್ರೇಮಿಗಳ ದಿನಾಚರಣೆ ಪ್ರಯುಕ್ತ ರಾಘವೇಂದ್ರ ರಾಜ್‌ಕುಮಾರ್ ಪೋಸ್ಟ್ ಹಂಚಿಕೊಂಡಿದ್ದು, ಇದರಲ್ಲಿ ಪುನೀತ್ ರಾಜ್‌ಕುಮಾರ್ ರೀತಿ ಬದುಕೋಣ ಬದುಕಿ ಎಂಬ ಸಂದೇಶವನ್ನು ನೀಡಿ ಫ್ಯಾನ್ ವಾರ್ ಬೇಡ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಫೋಟೊ ಜತೆ "ದ್ವೇಷ - ಅಸೂಯೆ ಬಿಟ್ಟು, ಎಲ್ಲರನ್ನೂ ಪರಿಶುದ್ಧ ಮನಸ್ಸಿನಿಂದ ಪ್ರೀತಿಸುವ ಪುನೀತರಾಗೋಣ.. ಹ್ಯಾಪಿ ವಾಲೆಂಟೈನ್ಸ್ ಡೇ" ಎಂಬ ಸಾಲುಗಳು ಬರೆದಿದ್ದು, ಇದನ್ನು ರಾಘವೇಂದ್ರ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ.

ಪುನೀತ್ ಸಹ ಫ್ಯಾನ್ ವಾರ್ ಬಗ್ಗೆ ಮಾತನಾಡಿದ್ದರು
ಇನ್ನು ನಟ ಪುನೀತ್ ರಾಜ್‌ಕುಮಾರ್ ಸಹ ಹಲವಾರು ಬಾರಿ ಅಭಿಮಾನಿಗಳಾರೂ ಫ್ಯಾನ್ ವಾರ್ ಮಾಡಬಾರದು ಎಂದು ಸಲಹೆ ನೀಡಿದ್ರು. ಅದರಲ್ಲಿಯೂ ಅವರು ಯುವರತ್ನ ಚಿತ್ರದ ಫ್ಯಾನ್ಸ್ ಮೀಟ್ ವೇಳೆ ನಡೆದಿದ್ದ ಸಂವಾದದಲ್ಲಿ ಅಭಿಮಾನಿಗಳು ಬೇರೆ ನಟರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಬಿಟ್ಟುಬಿಡಬೇಕು, ಫ್ಯಾನ್ ವಾರ್ ಮಾಡಬಾರದು ಎಂದು ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇನ್ನೂ ನಡೆಯುತ್ತಲೇ ಇದೆ ಫ್ಯಾನ್ ವಾರ್
ಇನ್ನು ಯಾವ ನಟರು ಎಷ್ಟೇ ಬುದ್ದಿವಾದ ಹೇಳಿದರೂ, ಮನವಿ ಮಾಡಿಕೊಂಡರೂ ಸಹ ಫ್ಯಾನ್ ವಾರ್ ಮಾತ್ರ ತಗ್ಗಿಲ್ಲ. ಅದರಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ನಿಲ್ಲುತ್ತಲೇ ಇಲ್ಲ. ಈ ಹಿಂದೆ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು, ದಾಖಲೆಗಳ ಕುರಿತು ನಡೆಯುತ್ತಿದ್ದ ಫ್ಯಾನ್ ವಾರ್ ಈಗಂತೂ ತೀರ ವೈಯಕ್ತಿಕ ವಿಚಾರಗಳ ಕುರಿತು ನಡೆಯುತ್ತಿರುವುದು ತೀರ ಬೇಸರದ ಸಂಗತಿ.


Click it and Unblock the Notifications











