ನಮ್ಮ ಸಿನಿಮಾ ಬೆಳೆಸಿ, ಕಟೌಟ್ ಕಟ್ಟಿ ಅನ್ನೋದು ಸ್ವಾರ್ಥ, ಒಟ್ಟಿಗೆ ರಾಜ್ಯ ಕಟ್ಟೋಣ: ಅಭಿಮಾನಿಗಳಿಗೆ ರಾಘಣ್ಣ ಕರೆ
ಕೆಲವು ಕಾರ್ಯಕ್ರಮಗಳಲ್ಲಿ ದುಃಖ ಪಡಬೇಕಾ, ಸಂತಸ ಪಡಬೇಕಾ, ಚಪ್ಪಾಳೆ ತಟ್ಟಬೇಕಾ ಗೊತ್ತಾಗುವುದಿಲ್ಲ. ಅಂಥಹದ್ದೇ ಒಂದು ಕಾರ್ಯಕ್ರಮ ಇದು ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.
'ಬಾನದಾರಿ ಪುನೀತ ಪಯಣ' ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ತಮ್ಮ ಸಹೋದರ ಅಪ್ಪುವನ್ನು ನೆನಪು ಮಾಡಿಕೊಂಡಿದ್ದು ಮಾತ್ರವೇ ಅಲ್ಲದೆ, ಅಭಿಮಾನಿಗಳ ಶಕ್ತಿಯನ್ನು ಸಿನಿಮಾ ಬೆಳೆಸಲು ಅಲ್ಲದೆ, ರಾಜ್ಯವನ್ನು ಕಟ್ಟಲು ಬಳಸೋಣವೆಂಬ ಕರೆ ನೀಡಿದರು.
ನಮ್ಮ ತಂದೆಯವರಿಗೂ ಅಪ್ಪುಗೆ ಬಹಳ ಹೊಂದಾಣಿಕೆ ಇದೆ. ಅಪ್ಪಾಜಿಯವರು ಅಭಿಮಾನಿಗಳನ್ನು ಕಟ್ಟಿದರು. ಅಪ್ಪು ಅಭಿಮಾನಿಗಳನ್ನು ಬೆಳೆಸಿದರು. ಅಪ್ಪಾಜಿಯವರಿಗೆ ಡಾಕ್ಟರೇಟ್ ಸಿಕ್ಕಾಗ 46 ವರ್ಷ ವಯಸ್ಸು, ಆಗ ಅಪ್ಪು ಹತ್ತು ತಿಂಗಳ ಮಗು, ಅಪ್ಪುಗೆ ಡಾಕ್ಟರೇಟ್ ದೊರೆತಾಗ ಅವನ ವಯಸ್ಸೂ 46. ಅಪ್ಪಾಜಿ ಕರ್ನಾಟಕ ರತ್ನ ತೆಗೆದುಕೊಂಡರು, ಅಪ್ಪು ಸಹ ಕರ್ನಾಟಕ ರತ್ನನಾದ. ರಾಜ್‌ಕುಮಾರ್ ರಸ್ತೆಯ ಮುಂದೆಯೇ ಈಗ ಪುನೀತ್ ರಾಜ್‌ಕುಮಾರ್ ರಸ್ತೆಯೂ ಆಗಿದೆ'' ಎಂದು ಕಾಕತಾಳೀಯಗಳ ಪಟ್ಟಿ ನೀಡಿದರು ರಾಘಣ್ಣ.

ಅಪ್ಪು ಕನಸನ್ನು ನನಸು ಮಾಡಬೇಕು: ರಾಘವೇಂದ್ರ ರಾಜ್‌ಕುಮಾರ್
''ಪುನೀತ್ ನಮ್ಮ ನಡುವೆ ಬಂದಿದ್ದು ಏಕೆ? ಅವನು ಒಂದು 'ಗಂಧದ ಗುಡಿ' ಮಾಡೋಕೆ ಎಂದೇ ಅಷ್ಟು ಸಿನಿಮಾಗಳನ್ನು ಮಾಡಿದ್ದನಾ ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತದೆ. ನನ್ನ ರಾಜ್ಯದ ಜನಕ್ಕೆ ಏನೋ ಹೇಳಬೇಕು ಎಂದು ಬಂದ, ಹೇಳಿದ ಹೋದ. ಇನ್ನು ಜವಾಬ್ದಾರಿ ನಮ್ಮದು. ಅವನ ಆಸೆಯನ್ನು ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮದು'' ಎಂದು ರಾಘಣ್ಣ.

'ನಮ್ಮ ಪ್ರತಿಭೆ ನೋಡಿ ಇಷ್ಟೋಂದು ಅಭಿಮಾನಿಗಳನ್ನು ಕೊಟ್ಟಿಲ್ಲ'
''ದೇವರು ನಮಗೆ ಕೋಟ್ಯಂತರ ಅಭಿಮಾನಿಗಳನ್ನು ಕೊಟ್ಟಿದ್ದಾನೆ. ನಮ್ಮ ಪ್ರತಿಭೆ ನೋಡಿ ಅಷ್ಟೋಂದು ಅಭಿಮಾನಿಗಳನ್ನು ಕೊಟ್ಟಿದ್ದಾನೆ ಎಂದರೆ ಅದು ತಪ್ಪು. ಇಷ್ಟು ಅಭಿಮಾನಿಗಳನ್ನು ಇವರಿಗೆ ಕೊಟ್ಟರೆ ಒಳ್ಳೆಯ ದಾರಿಯಲ್ಲಿ ಅವರನ್ನು ನಡೆಸುತ್ತಾನೆ ಎಂಬ ಕಾರಣಕ್ಕೆ ದೇವರು ನಮಗೆ ಇಷ್ಟೋಂದು ಅಭಿಮಾನಿಗಳನ್ನು ಕೊಟ್ಟಿದ್ದಾನೆ ಎಂಬುದು ನಮ್ಮ ನಂಬಿಕೆ. ಈಗಲೂ ನಾವು, ನಮ್ಮ ಸಿನಿಮಾ ಬೆಳೆಸಿ, ನಮ್ಮ ಸ್ಟಾರ್ ಕಟ್ಟಿ, ಮಕ್ಕಳನ್ನು ಬೆಳೆಸಿ ಎಂದರೆ ಸ್ವಾರ್ಥವಾಗುತ್ತೆ. ನಿಮ್ಮೆಲ್ಲರೊಟ್ಟಿಗೆ ಒಳ್ಳೆಯ ರಾಜ್ಯವನ್ನು ಕಟ್ಟಬೇಕು. ಅದೇ ಕಾರಣಕ್ಕೆ ದೇವರು ನಮಗೆ ಅಭಿಮಾನಿಗಳನ್ನು ನೀಡಿದ್ದಾನೆ'' ಎಂದಿದ್ದಾರೆ ರಾಘಣ್ಣ.

ಅಪ್ಪುವಂತೆ ನಾನು ಬದುಕುತ್ತೇನೆ: ರಾಘಣ್ಣ ಸಂಕಲ್ಪ
''ಪವರ್' ಅನ್ನೆಲ್ಲ ಇಲ್ಲೇ ಬಿಟ್ಟು 'ಸ್ಟಾರ್' ಆಗಿ ಮೇಲೆ ಹೋಗಿದ್ದಾನೆ ಅಪ್ಪು. ಅವನು ಬಿಟ್ಟುಹೋದ ಪವರ್ ಅನ್ನು ನಾವು ಏನು ಮಾಡಬೇಕು ಎಂಬುದನ್ನು ನಾವು ಚಿಂತಿಸಬೇಕಾಗಿದೆ. 'ಐ ಆಮ್ ಅಪ್ಪು' ಎಂದು ನಾನು ಸ್ಟಿಕ್ಕರ್ ಹಾಕಿಕೊಂಡಿದ್ದೇನೆ. ಕೋಟ್ಯಂತರ ಜನರಿರುವಾಗ ನನ್ನನ್ನೇ ಏಕೆ ಅಪ್ಪುಗೆ ಅಣ್ಣನನ್ನಾಗಿ ಮಾಡಿದ ಎಂಬ ಯೋಚನೆ ಬರುತ್ತದೆ. ಆಗ ಅನಿಸುತ್ತದೆ, ನಾನು ಅವನಂತೆ ಬದುಕಲೆಂದು ಹೀಗೆ ದೇವರು ಮಾಡಿದ್ದಾನೆ. ಹಾಗಾಗಿ ನಾನು ಇನ್ನುಮುಂದೆ ಅಪ್ಪುವಿನಂತೆ ಇತರರಿಗಾಗಿ ಬದುಕುತ್ತೇನೆ. ಈ ಸಂಕಲ್ಪವನ್ನು ನಿಮ್ಮ ಮುಂದೆ ಮಾಡುತ್ತಿದ್ದೇನೆ'' ಎಂದರು ರಾಘವೇಂದ್ರ ರಾಜ್‌ಕುಮಾರ್.

ಸಿಎಂ ಮಾಡಿದ ಸಹಾಯ ನೆನೆದ ರಾಘಣ್ಣ
ಮುಖ್ಯಮಂತ್ರಿಗಳ ಸಹಾಯವನ್ನೂ ನೆನೆದ ರಾಘಣ್ಣ, ''ನಮ್ಮ ಕುಟುಂಬಕ್ಕೆ ಮಾಡಿದರು ಎಂದು ನಾನು ಹೇಳುತ್ತಿಲ್ಲ. ಅಪ್ಪು ಅಗಲಿದ ಅವರು ಮಾಡಿದ ಸಹಾಯ ನಾವು ಮರೆಯುವುದಿಲ್ಲ. ನಮ್ಮ ಜೊತೆಗೆ ನಿಂತು ಅವರು ಕಾರ್ಯಕ್ರಮ ನಡೆಸಿಕೊಟ್ಟರು. ನಾವು ಅವರಿಗೆ ಚಿರರುಣಿಯಾಗಿರುತ್ತೇವೆ'' ಎಂದರು. ಕೊನೆಗೆ, ಅಪ್ಪು ಒಂದು ಶಕ್ತಿ, ಶಕ್ತಿಗೆ ಎಂದೂ ಸಾವಿಲ್ಲ, ಆ ಶಕ್ತಿಯನ್ನು ನಾವು ಆವಾಹಿಸಿಕೊಂಡು ಅವನು ಬಿಟ್ಟು ಹೋಗಿರುವ ಕೆಲಸ ಮಾಡಿ ಮುಗಿಸಬೇಕು' ಎಂದರು.


Click it and Unblock the Notifications











