ಸೆಲ್ಫಿಯಲ್ಲಿ ಹೊಸ ದಾಖಲೆ ಬರೆದ 'ಲೈಫ್ ಜೊತೆ ಒಂದ್ ಸೆಲ್ಫಿ'
Recommended Video

ದಿನಕರ್ ತೂಗುದೀಪ ನಿರ್ದೇಶನದ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರದ ಟೈಟಲ್ಲೇ ಎಲ್ಲರನ್ನೂ ಆಪ್ತವಾಗಿ ಆವರಿಸಿಕೊಂಡಿದೆ. ಚಿತ್ರತಂಡ ತಾಂತ್ರಿಕವಾಗಿಯೂ ಹೊಸತನದ ಪ್ರಚಾರದ ಹಾದಿ ಹಿಡಿದಿರೋದರಿಂದ ಎಲ್ಲ ವರ್ಗದ ಪ್ರೇಕ್ಷಕರೂ ಈ ಚಿತ್ರದತ್ತ ಆಕರ್ಷಿತರಾಗಿದ್ದಾರೆ.
ಇದೀಗ 'ಲೈಫ್ ಜೊತೆ ಒಂದು ಸೆಲ್ಫಿ' ತೆಗೆದುಕೊಂಡು ಸಂಭ್ರಮಿಸಿದವರ ಸಂಖ್ಯೆ ಸುಮಾರು ಇಪ್ಪತ್ತೆಂಟು ಸಾವಿರವನ್ನು ದಾಟಿದೆ. 'ಲೈಫ್ ಜೊತೆ ಒಂದ್ ಸೆಲ್ಫಿ' ಟೈಟಲ್ಲಿರುವ ಫ್ರೇಮಿನಲ್ಲಿ ತಮ್ಮದೇ ಸೆಲ್ಫಿ ಫೋಟೋ ಹಾಕಿಕೊಳ್ಳುವ ಹೊಸ ತಂತ್ರವನ್ನು ಚಿತ್ರತಂಡ ಫೇಸ್‍ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿ ಸಂಚಲನ ಹುಟ್ಟುಹಾಕಿತ್ತು.

ಆ ಆಟಕ್ಕೆ ಜನಸಾಮಾನ್ಯರು ಮಾತ್ರವಲ್ಲದೇ ಚಿತ್ರರಂಗದ ಸೆಲೆಬ್ರಿಟಿಗಳೂ ಕೂಡ ಸ್ಪಂದಿಸಿದ್ದರು. ಸಾಮಾನ್ಯ ಅಭಿಮಾನಿಗಳಂತೂ ಸೆಲ್ಫಿ ಫ್ರೇಮಿನೊಳಗೆ ಫೋಟೋಗಳನ್ನು ಸೆರೆ ಹಿಡಿದು ಈ ಚಿತ್ರಕ್ಕೆ ಫುಲ್ ಸಾಥ್ ನೀಡಿದ್ದಾರೆ.
ಅಂದ್ಹಾಗೆ, ಈ ಸಿನಿಮಾ ಪ್ರೀತಿ ಸ್ನೇಹಗಳ ಸುತ್ತಾ ಹೆಣೆಯಲ್ಪಟ್ಟ ಸೂಕ್ಷ್ಮ ಕಥಾ ಹಂದರವನ್ನು ಹೊಂದಿದೆ. ನಿರ್ದೇಶಕ ದಿನಕರ್ ಅವರ ಮಡದಿಯೇ ಈ ಕಥೆಯನ್ನು ರಚಿಸಿರೋದು ವಿಶೇಷ. ಬದುಕಿನ ಎಲ್ಲಾ ಬಂಧಗಳ ನಡುವೆ ಸ್ನೇಹ ಎಷ್ಟು ಮುಖ್ಯ ಎಂಬುದನ್ನು ಸಾರುವ 'ಲೈಫ್ ಜೊತೆ ಒಂದ್ ಸೆಲ್ಫಿ' ಪ್ರೇಕ್ಷಕರನ್ನು ಆವರಿಸಿಕೊಂಡಿದೆ.

ರಿಲೀಸ್ ಗೆ ಸಿದ್ಧವಾಗಿರುವ ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಲಾಂಛನದಲ್ಲಿ ದರ್ಶನ್ ತೂಗುದೀಪರವರ ಸಹಕಾರದೊಂದಿಗೆ ತಯಾರಾಗಿರುವ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾವನ್ನು ಸಮೃದ್ಧಿ ಮಂಜುನಾಥ್ ನಿರ್ಮಿಸಿದ್ದಾರೆ.

ದಿನಕರ್ ಎಸ್. ನಿರ್ದೇಶನ, ಮಾನಸ ದಿನಕರ್ ಕತೆ, ವಿ. ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಚಿಂತನ್ ಎ.ವಿ. ಸಂಭಾಷಣೆ, ಈಶ್ವರಿ ಕುಮಾರ್ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಪ್ರಜ್ವಲ್ ದೇವರಾಜ್, ಲವ್ಲಿ ಸ್ಟಾರ್ ಪ್ರೇಮ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











