ಲಕ್ಷಾಂತರ ತರುಣರ ಪ್ರೇಮಭಾವನೆ ಮಡಿಲಿಗೆ
ಚಂದ್ರಕಲಾವತಂಸೇ..
ಕುಚೋನ್ನತೇ...
ಕುಂಕುಮರಾಗ ಶೋಣೇ...
ಈ ಚಂದನದ ಗೊಂಬೆ ಭಾರತದ ನಂಬರ್‌ವನ್ ರೂಪದರ್ಶಿಯಾಗುವ ಆಸೆ ಹೊತ್ತಿದ್ದವಳು. ಬಾಂಬೆ ಡೈಯಿಂಗ್ ಬಟ್ಟೆಗಳಿಗೆ ಮಾರುಕಟ್ಟೆ ಕುದುರಿಸಿದವಳು. ಇವಿಟಾ ಎಂಬ ಚರ್ಮದ ಕಾಂತಿ ಕಾಪಾಡುವ ಸೋಪಿಗೆ ನೆರವಾದವಳು. ಆಗ ಹದಿನೇಳು ವರುಷದ ವಯಸ್ಸಿಗೆ ಮೀರಿದ ತನುಮನದ ಲಿಸಾರೇ ತನ್ನ ಹುಕ್-ಲುಕ್‌ನಿಂದ ಒದ್ದೆ ತುಟಿಗಳ ಅಯಾಚಿತ ಸೆಳೆತದಿಂದ ಮರೆಮಾಡಿದಷ್ಟೂ ಎದ್ದೆದ್ದು ಕಾಣುವ ಅಂಗ ಸೌಷ್ಟವದಿಂದ ರಸಿಕರ ಕನಸ ಕದ್ದವಳು. ಅಣ್ಣ ತಮ್ಮಂದಿರಿಲ್ಲದ ಮುದ್ದಿನ ಮಗಳು ಲಿಸಾರೇ , ಹುಟ್ಟಿದ್ದು ಕೆನಡಾದಲ್ಲಿ. ನನ್ನ ಖಾಸಗಿ ಬದುಕು ಖಾಸಗಿಯೇ ಇರಬೇಕು. ಮೌನವೊಂದೇ ಉತ್ತರ. ಎಲ್ಲ ಗಾಸಿಪ್ಪಿಗೂ ಮೌನವೇ ಪ್ರತ್ಯಾಸ್ತ್ರ ಎನ್ನುತ್ತಿದ್ದ ಲಿಸಾ ಚಲನಶೀಲೆ. ಒಮ್ಮೆ ಇಂಡಿಯಾದಲ್ಲಿ ಇಲ್ಲಿ, ಮತ್ತೊಮ್ಮೆ ಅಮೆರಿಕಾದಲ್ಲಿ ಅಲ್ಲಿ... ಮಗದೊಮ್ಮೆ ನೆನೆದವರ ಮನದಲ್ಲಿ , ಕನವರಿಸಿದವರ ಕನಸಲ್ಲಿ, ಮೊನ್ನೆ ಬೇಯುವ ಬೆಂಗಳೂರಲ್ಲಿ ಕಾಯುವ ಕಣ್ಣುಗಳ ಮುಂದೆ !
ಹೌದು ಲಿಸಾ ಬೆಂಗಳೂರಿಗೆ ಬಂದಿದ್ದಳು. ಯೌವನ ಕುಂದಿಲ್ಲ , ಕಂದಿದೆ. ಅದೇನಾಯಿತೋ ಗೊತ್ತಿಲ್ಲ. ಅಪಘಾತದಲ್ಲಿ ಅವಳ ಅಮ್ಮ ಕಾಲು ಕಳಕೊಂಡು ಗಾಲಿ ಕುರ್ಚಿಗೆ ಅಂಟಿಕೊಳ್ಳಬೇಕಾಗಿ ಬಂದಿದ್ದು, ಅದರಿಂದ ಲಿಸಾ ನೊಂದಿದ್ದು, ಹತ್ತು ವರುಷದ ಹಿಂದಿನ ಮಾತು. ಈ ಹತ್ತು ಹನ್ನೆರಡು ವರ್ಷಗಳಲ್ಲಿ ಆಕೆ ಸಾಕಷ್ಟು ಬದಲಾಗಿದ್ದಾಳೆ. ಪ್ರಬುದ್ಧತೆ ತನುಮನಗಳಲ್ಲಿ ರಾರಾಜಿಸುತ್ತಿದೆ. ಆದರೆ ಮಾತು ಹಳೆಯದಾಗಿಲ್ಲ. ಉತ್ಸಾಹ ಇನ್ನೂ ಹಳಸಿಲ್ಲ.
ಯೌವನ ಕಂತಿದ ತಾರೆಯರು ಏನಾಗುತ್ತಾರೆ ?
ಬಹುಶಃ ಸ್ವಯಂ ಪ್ರಭೆಯಲ್ಲಿದ ಗ್ರಹಗಳು, ಒಣಮರದ ಗಿಳಿಗಳು.. ರೇ ಹಾಗಾಗಲಿಲ್ಲ. ಆಕೆ ರೂಪದರ್ಶಿಯಾಗಿ ತನ್ನ ಸೊಬಗು ಕಮನೀಯತೆ ಕಳಕೊಳ್ಳುತ್ತದೆ ಅಂತ ಗೊತ್ತಾದ ತಕ್ಷಣ ಚಿತ್ರರಂಗಕ್ಕೆ ಹಾರಿದಳು. ಹಸ್ತೆ ಖೇಲ್ತೆ ...ಚಿತ್ರದಲ್ಲಿ ಆಕೆ ನಟಿಸಲು ಒಪ್ಪಿದ್ದು ಹನ್ನೊಂದು ವರ್ಷದ ಹಿಂದೆ. ಅದು ಬಂತೋ ಹೋಯ್ತೋ ಯಾರಿಗೂ ಗೊತ್ತಿಲ್ಲ. ಅದೇ ಸುಮಾರಿಗೆ ಆಕೆ ಭಾರತದ ಮೇಲೊಂದು ಪುಸ್ತಕ ಬರೀತೇನೆ ಅಂತ ಓಡಾಡುತ್ತಿದ್ದ ನೆನಪು. ಅದು ಪೂರ್ತಿಯಾಯಿತೇ ಅಂತ ಪತ್ರಿಕಾ ಗೋಷ್ಠಿಯಲ್ಲಿ ಯಾರೂ ಕೇಳಲಿಲ್ಲ.
ಲಿಸಾ ನಟಿಸಿದ ಕಸೂರ್ ಗೆಲ್ಲಲಿಲ್ಲ. ಆಗಲೇ ಆಕೆಗೆ ಜನ ಸೌಂದರ್ಯವನ್ನು ಮೆಚ್ಚುವುದಿಲ್ಲ. ಬರೀ ವ್ಯಾಮೋಹಿಸುತ್ತಾರೆ ಅನ್ನುವುದು ಗೊತ್ತಾಯಿತು. ಯಾವ ಸುಂದರಿ ಯಾವ ಭಂಗಿಯಲ್ಲಿ ಹೇಳಿದರೂ ಜನ ತಾವು ಸೇದುವ ಸಿಗರೇಟಿನ ಬ್ರಾಂಡ್ ಬದಲಾಯಿಸೋದಿಲ್ಲ ಅನ್ನೋದು ಆಕೆಗೆ ಗೊತ್ತು.
ಮೊನ್ನೆ ಬೆಂಗಳೂರಿಗೆ ಬಂದ ಲಿಸಾ ಎಂಬ ಫಿಕ್ಸೆಡ್ ಅಸೆಟ್, ಸೆಟ್‌ನಲ್ಲಿದ್ದದ್ದು ಕೇವಲ ನಾಲ್ಕೈದು ಗಂಟೆ ಮಾತ್ರ. ಆಕೆ ತಕ್ಷಣ ಮರಳಬೇಕಾಗಿತ್ತು. ಮೂವತ್ತು ಲಕ್ಷ ಸಂಭಾವನೆ, ಸರಿ ಸುಮಾರು ಅಷ್ಟೇ ಸಂಖ್ಯೆಯ ತರುಣರ ಪ್ರೇಮಭಾವನೆ ಮಡಿಲಿಗೆ ಹಾಕಿಕೊಂಡಿರುವ ನೀಲಿ ಕಂಗಳ ನೀಲಾಂಜನ ಲಿಸಾ ರೇ.... ಅತ್ತ ಭಾರತೀಯಳೂ ಅಲ್ಲದ ಇತ್ತ ಪೋಲ್ಯಾಂಡಿಗೂ ಸೇರದ ಕೆನಡಾದ ಕನ್ನಡಿ. ನೋಡಿದವರ ಪ್ರತಿಬಿಂಬ ಕಾಣುತ್ತದಂತೆ !


Click it and Unblock the Notifications