ರಾಗಿಣಿ ಕೈನಲ್ಲಿ ಇಷ್ಟೊಂದು ಸಿನಿಮಾ ಇವೆ, ಆದ್ರು ಹೀಗ್ಯಾಕೆ ಆಗ್ತಿದೆ?
ನಟಿ ರಾಗಿಣಿ ದ್ವಿವೇದಿ ಅವರಿಗೆ ಒಂದು ಒಳ್ಳೆಯ ಸಕ್ಸಸ್ ಸಿಕ್ಕು ಎಷ್ಟೋ ವರ್ಷಗಳೆ ಕಳೆದಿವೆ. ಅದೇಕೋ ಏನೋ ಇತ್ತೀಚಿಗಿನ ರಾಗಿಣಿ ಸಿನಿಮಾಗಳು ಸಿನಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿಲ್ಲ.
ಒಂದು ಕಡೆ ರಾಗಿಣಿ ಅವರ ಸಿನಿಮಾಗಳು ಬಿಡುಗಡೆಯಾಗಿ ಎಷ್ಟೋ ತಿಂಗಳುಗಳು ಕಳೆದಿವೆ. ಕಳೆದ ವರ್ಷ ರಾಗಿಣಿ ಅವರ ಒಂದೇ ಒಂದು ಸಿನಿಮಾ ತೆರೆಗೆ ಬಂದಿತ್ತು. 'ವೀರ ರಣಚಂಡಿ' ಸಿನಿಮಾ ಬಿಟ್ಟರೆ ರಾಗಿಣಿ ಅವರ ಯಾವ ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಹಾಗಂತ ರಾಗಿಣಿ ಬಳಿ ಸಿನಿಮಾ ಅವಕಾಶ ಇಲ್ಲ ಅಂತಲೂ ಅಲ್ಲ. ರಾಗಿಣಿ ಕೈನಲ್ಲಿ ಈಗ ಒಂದಲ್ಲ ಎರಡಲ್ಲ ಏಳು ಸಿನಿಮಾಗಳು ಇವೆ. ಆದರೆ ಅವುಗಳಲ್ಲಿ ಕೆಲವು ಬಿಡುಗಡೆಯಾಗುವುದಕ್ಕೆ ಹಿಂದೆ ಮುಂದೆ ನೋಡುತ್ತಿದೆ.
ಅಂದಹಾಗೆ, ರಾಗಿಣಿ ದ್ವಿವೇದಿ ಅವರ ಮುಂದಿನ ಸಿನಿಮಾಗಳ ಸಣ್ಣ ವಿವರ ಮುಂದಿದೆ ಓದಿ...

ಈ ವಾರ 'ಕಿಚ್ಚು' ಬಿಡುಗಡೆ
ರಾಗಿಣಿ ದ್ವಿವೇದಿ ಅವರ 'ಕಿಚ್ಚು' ಸಿನಿಮಾ ಇದೇ ವಾರ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಗ್ಲಾಮರ್ ಗೊಂಬೆ ರಾಗಿಣಿ ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದು, ಡಾಕ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. 'ಕೆಂಪೇಗೌಡ' ನಂತರ ಮತ್ತೆ ರಾಗಿಣಿ ಹಾಗೂ ಸುದೀಪ್ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷವಾಗಿದೆ.

'ದಿ ಟೆರರಿಸ್ಟ್'
ನಿರ್ದೇಶಕ ಪಿ ಸಿ ಶೇಖರ್ ಮತ್ತು ರಾಗಿಣಿ ಕಾಂಬಿನೇಶನ್ ನಲ್ಲಿ ಬರುತ್ತಿರುವ 'ದಿ ಟೆರರಿಸ್ಟ್' ಚಿತ್ರದ ಶೂಟಿಂಗ್ ಇತ್ತೀಚಿಗಷ್ಟೆ ಮುಗಿದಿದೆ. ಪ್ರಚಲಿತ ಸಮಸ್ಯೆಗಳ ಮೇಲೆ ಸಿನಿಮಾದ ಕಥೆಯನ್ನು ಹೆಣೆಯಲಾಗಿದ್ದು, ಚಿತ್ರದ ಹೆಸರಿಗೆ ತಕ್ಕಂತೆ ಭಯೋತ್ಪಾದನೆ ಕುರಿತ ಚಿತ್ರ ಇದಾಗಿದೆ. ಮೊದಲ ಬಾರಿಗೆ ಪಿಸಿ ಶೇಖರ್ ರಾಗಿಣಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಎಂ ಎಂ ಸಿ ಎಚ್'
ರಾಗಿಣಿ ದ್ವಿವೇದಿ ವಿಶೇಷ ಪಾತ್ರ ಮಾಡಿರುವ 'ಎಂ ಎಂ ಸಿ ಎಚ್' ಸಿನಿಮಾದ ಶೂಟಿಂಗ್ ಸದ್ಯ ನಡೆಯುತ್ತಿದೆ. ಮುಸ್ಸಂಜೆ ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡದ ನಾಲ್ಕು ಹಿರಿಯ ನಟಿಯರ ಪುತ್ರಿಯರು ಒಟ್ಟಿಗೆ ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷವಾಗಿದೆ. ಸಂಯುಕ್ತಾ ಹೊರನಾಡು, ಮೇಘನಾ ರಾಜ್, ಪ್ರಥಮ ಮತ್ತು ನಕ್ಷತ್ರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ರಿಲೀಸ್ ಆಗುತ್ತಿಲ್ಲ 'ನಾನೇ ನೆಕ್ಟ್ ಸಿಎಂ'
'ಕಿಚ್ಚು' ಚಿತ್ರ ಇದೇ ವಾರ ರಿಲೀಸ್ ಆಗುತ್ತಿದ್ದರೆ, 'ದಿ ಟೆರಡಿಸ್ಟ್' ಮತ್ತು 'ಎಂ ಎಂ ಸಿ ಎಚ್' ಚಿತ್ರದ ಕೆಲಸಗಳ ನಡೆಯುತ್ತಿದೆ. ಆದರೆ 'ನಾನೇ ನೆಕ್ಟ್ ಸಿಎಂ' ಸಿನಿಮಾ ಶುರುವಾಗಿ ವರ್ಷಗಳೆ ಕಳೆದಿದ್ದರೂ ಸಿನಿಮಾ ರಿಲೀಸ್ ಹಂತಕ್ಕೆ ಬಂದಿಲ್ಲ. ಈ ಚಿತ್ರವನ್ನು ಕೂಡ ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಿಡುಗಡೆಗೆ ಮೊದಲೇ ಅವರು ರಾಗಿಣಿ ಜೊತೆಗೆ 'ಎಂ ಎಂ ಸಿ ಎಚ್' ಸಿನಿಮಾ ಶುರು ಮಾಡಿದ್ದಾರೆ.

'ಗಾಂಧಿಗಿರಿ' ಕಥೆ ಏನಾಯ್ತೂ?
ಇದರ ಜೊತೆಗೆ 'ಗಾಂಧಿಗಿರಿ' ಸಿನಿಮಾ ಕೂಡ ರಾಗಿಣಿ ಖಾತೆಯಲ್ಲಿ ಇರುವ ಪ್ರಮುಖ ಸಿನಿಮಾ. ಈ ಸಿನಿಮಾದಲ್ಲಿ ಇಂಗ್ಲೀಷ್ ಟೀಚರ್ ಆಗಿ ತುಪ್ಪದ ಬೆಡಗಿ ಕಾಣಿಸಿಕೊಂಡಿದ್ದರು. ಜೋಗಿ ಪ್ರೇಮ್ ನಾಯಕನಾಗಿರುವ ಈ ಚಿತ್ರವನ್ನು ಪ್ರೇಮ್ ಶಿಷ್ಯ ರಘು ಹಾಸನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಪ್ರಾರಂಭವಾಗಿ ವರ್ಷ ಕಳೆದರು ಅತ್ತ ಕಡೆಯಿಂದ ಯಾವುದೇ ಅಪ್ ಡೇಟ್ ಇಲ್ಲ.

ಇನ್ನುಳಿದ ಸಿನಿಮಾಗಳು
ರಾಗಿಣಿ ಈ ಎಲ್ಲ ಸಿನಿಮಾಗಳ ಜೊತೆಗೆ ಈಗ ಶರಣ್ ಅವರ ಹೊಸ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಮಲೆಯಾಳಂ ಭಾಷೆಯ ಒಂದು ಚಿತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆ ಈ ವರ್ಷ ರಾಗಿಣಿ ಸಿಕ್ಕಾಪಟ್ಟೆ ಬಿಜಿ ಇದ್ದಾರೆ.


Click it and Unblock the Notifications











