ಹುಡುಗಿಯರ ಮನಗೆದ್ದಿದ್ದ ಈ ನಟರು ಒಳ್ಳೆಯ ಕತೆ ಆರಿಸಿಕೊಳ್ಳದೇ ಸೋತು ಮರೆಯಾದರು!
ಕನ್ನಡ ಚಲನಚಿತ್ರರಂಗದಲ್ಲಿ ಹೀರೊಗಳಿಗೇನೂ ಕೊರತೆಯಿಲ್ಲ. ಪ್ರತಿ ವರ್ಷವೂ ಹಲವು ಹೊಸ ನಟರು ಚಿತ್ರರಂಗ ಪ್ರವೇಶಿಸುತ್ತಲೇ ಇರುತ್ತಾರೆ. ಆದರೆ ಈ ಹಲವರ ಪೈಕಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗುವುದು ಕೆಲವರು ಮಾತ್ರ. ಮೊದಲ ಚಿತ್ರವೇ ಹಿಟ್ ಆದರೆ ಅಥವಾ ಮೊದಲ ಚಿತ್ರ ಸುಮಾರಾಗಿದ್ದರೂ ಸಹ ನಟನ ನಟನೆ ಚೆನ್ನಾಗಿದ್ದರೆ ಆ ನಟ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾನೆ.
ಒಟ್ಟಿನಲ್ಲಿ ಕನ್ನಡ ಚಲಚಿತ್ರರಂಗದಲ್ಲಿ ಮೊದಲ ಚಿತ್ರದ ನಂತರ ಸಾಲು ಸಾಲು ಆಫರ್ ಪಡೆದುಕೊಳ್ಳಬೇಕೆಂದರೆ ಆ ನಟ ಚೆನ್ನಾಗಿ ನಟಿಸುತ್ತಾನೆ ಎಂಬ ನಂಬಿಕೆ ನಿರ್ದೇಶಕನಲ್ಲಿರಬೇಕು, ಆ ನಟ ನಟಿಸುವ ಚಿತ್ರಕ್ಕೆ ಬಂಡವಾಳ ಹೂಡಿದರೆ ವ್ಯವಹಾರ ಆಗಲಿದೆ ಎಂಬ ನಂಬಿಕೆ ನಿರ್ಮಾಪಕನಲ್ಲಿರಬೇಕು ಹಾಗೂ ನಿರ್ದೇಶಕ ಹಾಗೂ ನಿರ್ಮಾಪಕ ಈ ಇಬ್ಬರ ಊಹೆಯೂ ನಿಜವಾಗಬೇಕೆಂದರೆ ಪ್ರೇಕ್ಷಕ ಮಹಾಪ್ರಭುಗಳು ಚಿತ್ರಮಂದಿರಗಳಿಗೆ ನುಗ್ಗಬೇಕು.
ಹೀಗೆ ಇರುವ ಹಲವಾರು ಸವಾಲುಗಳನ್ನು ಎದುರಿಸಿ ಗೆದ್ದು ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡರೂ ಸಹ ಹಲವು ನಟರು ನಂತರದ ದಿನಗಳಲ್ಲಿ ಸರಿಯಾದ ಕತೆಗಳನ್ನು ಆಯ್ದುಕೊಳ್ಳುವಲ್ಲಿ ಎಡವಿ ಸೋತು ಆಫರ್ ಸಿಗದೇ ಚಿತ್ರರಂಗದಿಂದ ದೂರಾದದ್ದೂ ಇದೆ. ಇನ್ನು ಹುಡುಗಿಯರ ಮನಗೆದ್ದು ಚಾಕೋಲೆಟ್ ನಟರೆನಿಸಿಕೊಂಡ ಕೆಲ ನಟರೂ ಸಹ ಇದೇ ರೀತಿ ಸರಿಯಾದ ಕತೆಗಳನ್ನು ಆಯ್ಕೆ ಮಾಡಿಕೊಳ್ಳದೇ ವಿಫಲರಾಗಿ ತೆರೆ ಮರೆಗೆ ಸರಿದರು. ಅಂತಹ ನಟರ ಪಟ್ಟಿ ಈ ಕೆಳಕಂಡಂತಿದೆ..

ಧ್ಯಾನ್
ಸಮೀರ್ ದತ್ತನಿ ಅಕ ಧ್ಯಾನ್ ಎಂಬ ನಟನ ಹೆಸರನ್ನು ಹಲವು ಜನ ಮರೆತಿದ್ದರೂ ಸಹ ಅವರ ಫೋಟೊ ನೋಡಿದ ತಕ್ಷಣ ಓಹ್ ಅಮೃತಧಾರೆ ಚಿತ್ರದ ನಟ ಎಂದು ಥಟ್ಟನೆ ಗುರುತು ಹಿಡಿಯುತ್ತಾರೆ. ಮೊದಲಿಗೆ ನನ್ನ ಪ್ರೀತಿಯ ಹುಡುಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಧ್ಯಾನ್ ನಂತರ ಮೊನಾಲಿಸಾ, ಜೂಟಾಟ ಹಾಗೂ ಅಮೃತಧಾರೆ ಚಿತ್ರಗಳ ಮೂಲಕ ಅಭಿನಯಿಸಿ ಕನ್ನಡ ಚಿತ್ರ ರಸಿಕರ ಮನಗೆದ್ದಿದ್ದರು. ವಿಶೇಷವಾಗಿ ಮಹಿಳಾ ಅಭಿಮಾನಿಗಳ ಹೃದಯ ಗೆದ್ದಿದ್ದ ಈತ ನಂತರ ಒಳ್ಳೆಯ ಚಿತ್ರಗಳ ಆಯ್ಕೆ ಮಾಡುವಲ್ಲಿ ವಿಫಲ ಹೊಂದಿ ಸೋತರು.

ಕಿರಣ್ ಶ್ರೀನಿವಾಸ್
ಹಾಗೆ ಸುಮ್ಮನೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಸದ್ದು ಮಾಡಿದ್ದ ನಟ ಕಿರಣ್ ಶ್ರೀನಿವಾಸ್ ಮೊದಲ ಚಿತ್ರದಲ್ಲೇ ತನ್ನ ಲುಕ್‌ನಿಂದ ಚಾಕೋಲೇಟ್ ಹೀರೊ ಎನಿಸಿಕೊಂಡರು. ನಂತರ ತೆರೆಕಂಡ ಕಿರಣ್ ಶ್ರೀನಿವಾಸ್ ನಾಯಕನಾಗಿ ಅಭಿನಯಿಸಿದ ಹಲವಾರು ಕನ್ನಡ ಚಿತ್ರಗಳು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ ಹಾಗೂ ಈ ಮೂಲಕ ಮೊದಲ ಚಿತ್ರದಲ್ಲಿ ಸಿಕ್ಕಿದ್ದ ಯಶಸ್ಸು ಹಾಗೂ ಅಭಿಮಾನಿಗಳನ್ನು ಕಿರಣ್ ಶ್ರೀನಿವಾಸ್ ಉಳಿಸಿಕೊಳ್ಳಲೂ ಇಲ್ಲ.

ತರುಣ್ ಚಂದ್ರ
ಖುಚಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ತರುಣ್ ಚಂದ್ರ ನಂತರ ಗೆಳೆಯ ಚಿತ್ರದ ಮೂಲಕ ಹೆಂಗಳೆಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಎರಡೂ ಚಿತ್ರಗಳೂ ಬಾಕ್ಸ್ ಆಫೀಸ್ ಹಿಟ್ ಕೂಡ ಆಗಿದ್ದವು. ನಂತರ ತೆರೆ ಕಂಡ ತರುಣ್ ಅಭಿನಯದ ಲವ್ ಗುರು, ಪರಿಚಯ ಹಾಗೂ ಹನಿ ಹನಿ ಚಿತ್ರಗಳಲ್ಲಿ ತರುಣ್ ತಮ್ಮ ಲುಕ್‌ಗಾಗಿ ಪ್ರಶಂಸೆ ಪಡೆದುಕೊಂಡರೂ ಸಹ ಚಿತ್ರಗಳು ಅಷ್ಟೇನೂ ಗೆಲ್ಲಲಿಲ್ಲ. ಇನ್ನು ಈ ಚಿತ್ರಗಳ ಬಳಿಕ ಬಂದ ತರುಣ್ ಚಂದ್ರ ಅವರ ಅನೇಕ ಚಿತ್ರಗಳು ಗೆಲ್ಲಲೇ ಇಲ್ಲ.

ಮಯೂರ್ ಪಟೇಲ್
ನಟ ಮಯೂರ ಪಟೇಲ್ ಸಹ ತನ್ನ ಆರಂಭದ ಚಿತ್ರಗಳಲ್ಲಿ ಮಹಿಳಾ ಪ್ರೇಕ್ಷಕರ ಮನ ಗೆದ್ದಿದ್ದರೂ ಸಹ ನಂತರ ಸರಿಯಾದ ಕತೆಗಳನ್ನು ಆಯ್ದುಕೊಳ್ಳುವಲ್ಲಿ ವಿಫಲರಾದರು. ಮಣಿ ಹಾಗೂ ಲವ್ ಸ್ಟೋರಿ ಹೊರತುಪಡಿಸಿದಂತೆ ಮಯೂರ್ ಪಟೇಲ್ ಆರಿಸಿಕೊಂಡ ಉಳಿದ ಚಿತ್ರಗಳು ಅಷ್ಟಕ್ಕಷ್ಟೇ

ಸುನಿಲ್ ರಾವ್
ಏಳು ಸುತ್ತಿನ ಕೋಟೆ, ಮೈಸೂರ್ ಜಾಣ, ಶಾಂತಿ ಕ್ರಾಂತಿ ಸೇರಿದಂತೆ ಆರು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದ ಸುನಿಲ್ ರಾವ್ ಎಕ್ಸ್ ಕ್ಯೂಸ್ ಮಿ ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಬೃಹತ್ ಬ್ರೇಕ್ ಸಿಕ್ಕಿತು. ಈ ಯಶಸ್ಸಿನ ಬೆನ್ನಲ್ಲೇ ರಮ್ಯಾ ಕೃಷ್ಣ ರೀತಿಯ ದೊಡ್ಡ ನಟಿಯ ಜತೆ ಅವಕಾಶವನ್ನೂ ಸಹ ಸುನಿಲ್ ಪಡೆದುಕೊಂಡರು. ಆದರೆ ಸುನಿಲ್ ಕಂಡ ಈ ಯಶಸ್ಸಿನ ಅರ್ಧದಷ್ಟು ಯಶಸ್ಸೂ ಸಹ ನಂತರದ ಚಿತ್ರಗಳಲ್ಲಿ ಸಿಗಲೇ ಇಲ್ಲ.


Click it and Unblock the Notifications











