ರಿಷಬ್ ಶೆಟ್ಟಿಗೂ ಮುನ್ನ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಪಡೆದ ಕನ್ನಡಿಗರಿವರು!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಾದಾಸಾಹೇಬ್ ಪ್ರಶಸ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ಇತ್ತೀಚೆಗಷ್ಟೆ ನಡೆದ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿಗೆ ಅತಿಹೆಚ್ಚು ಭರವಸೆಯ ನಟ ಲಭಿಸಿದ ಮೇಲಂತೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಜತೆಗೆ ಗೊಂದಲವೂ ಸಹ ಹುಟ್ಟುಕೊಂಡಿದೆ.
ಹೌದು, ಅಂದು ವರನಟ ಡಾ ರಾಜ್‌ಕುಮಾರ್ ಅವರಿಗೆ ನೀಡಿದ್ದ ದಾದಾ ಸಾಹೇಬ್ ಪ್ರಶಸ್ತಿಯನ್ನೇ ಈಗ ರಿಷಬ್ ಶೆಟ್ಟಿಗೂ ನೀಡಲಾಗಿದೆಯಾ ಎಂಬ ಗೊಂದಲ ಹುಟ್ಟುಕೊಂಡಿದೆ. ಕೆಲವರು ಇದನ್ನೇ ನಿಜ ಎಂದೂ ಸಹ ನಂಬಿದ್ದಾರೆ. ಆದರೆ ರಾಜ್‌ಕುಮಾರ್ ಅವರಿಗೆ ಸಿಕ್ಕಿದ್ದ ದಾದಾಸಾಹೇಬ್ ಪ್ರಶಸ್ತಿಯ ಗೌರವಕ್ಕೂ ಈ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ.

ಅಣ್ಣಾವ್ರಿಗೆ ಸಿಕ್ಕ ದಾದಾ ಸಾಹೇಬ್ ಪ್ರಶಸ್ತಿ ಕೇಂದ್ರ ಸರ್ಕಾರ ನೀಡಿದ್ದಾಗಿತ್ತು. ಇದನ್ನು ಪ್ರತಿವರ್ಷ ಓರ್ವ ಸಾಧಕರಿಗೆ ಮಾತ್ರ ನೀಡಲಾಗುತ್ತೆ. ರಾಜ್‌ಕುಮಾರ್ ಬಿಟ್ಟರೆ ವಿಕೆ ಮೂರ್ತಿ ಎಂಬ ಕರ್ನಾಟಕ ಮೂಲದ ಛಾಯಾಗ್ರಾಹಕರೊಬ್ಬರು ಈ ಗೌರವವನ್ನು ಪಡೆದುಕೊಂಡಿದ್ದರು. ಹೀಗಾಗಿ ಅತ್ಯುನ್ನತ ದಾದಾ ಸಾಹೇಬ್ ಪ್ರಶಸ್ತಿಯನ್ನು ಇಲ್ಲಿಯವರೆಗೂ ಇಬ್ಬರೇ ಕನ್ನಡಿಗರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು.
ಇನ್ನು 2016ರಿಂದ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಇದು ಖಾಸಗಿ ಅಕಾಡೆಮಿಯೊಂದು ನೀಡುವ ಪ್ರಶಸ್ತಿಯಾಗಿದೆ. ಐಫಾ, ಸೈಮಾ, ಫಿಲ್ಮ್‌ಫೇರ್ ರೀತಿಯೇ ಇದೂ ಸಹ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ. ಇನ್ನು ಈ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯನ್ನು ರಿಷಬ್ ಶೆಟ್ಟಿಗೂ ಮುನ್ನ ಕನ್ನಡದ ಯಾರೂ ಸಹ ಪಡೆದುಕೊಂಡಿಲ್ವ ಎಂಬ ಗೊಂದಲಗಳೂ ಸಹ ಮೂಡಿವೆ.
ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲದೇ ಕನ್ನಡದ ನಟರಾದ ಯಶ್, ಸುದೀಪ್, ಶಿವ ರಾಜ್‌ಕುಮಾರ್ ಹಾಗೂ ರಕ್ಷಿತ್ ಶೆಟ್ಟಿ ಸಹ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಹೌದು, ಈ ಹಿಂದಿನ ವರ್ಷಗಳಲ್ಲಿ ಇದೇ ರೀತಿ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ ನಡೆದಾಗ ಈ ಕಲಾವಿದರು ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ಮೊದಲಿಗೆ 2019ರಲ್ಲಿ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸೌತ್ ಅವಾರ್ಡ್ಸ್ ನಡೆದಾಗ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 1 ಚಿತ್ರದಲ್ಲಿನ ತಮ್ಮ ನಟನೆಗಾಗಿ 'ಔಟ್‌ಸ್ಟಾಂಡಿಂಗ್ ಪರ್ಫಾರ್ಮರ್ ಆಫ್ ದ ಇಯರ್' ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಬಳಿಕ 2020ರಲ್ಲಿ ನಡೆದ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸೌತ್ ಅವಾರ್ಡ್ ಕಾರ್ಯಕ್ರಮದಲ್ಲಿ ಕನ್ನಡದ ಶಿವ ರಾಜ್‌ಕುಮಾರ್ 'ವರ್ಸಟೈಲ್ ಆಕ್ಟರ್' ಪ್ರಶಸ್ತಿಯನ್ನು ಪಡೆದಿದ್ದರು. ಇದೇ ಕಾರ್ಯಕ್ರಮದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಬೆಸ್ಟ್ಆಕ್ಟರ್ ಪ್ರಶಸ್ತಿ ಪಡೆದಿದ್ದರು ಹಾಗೂ ಯಜಮಾನ ಚಿತ್ರಕ್ಕಾಗಿ ತಾನ್ಯಾ ಹೋಪ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದರು. ದಬಾಂಗ್ 3 ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅತಿಹೆಚ್ಚು ಭರವಸೆಯ ನಟ ಪ್ರಶಸ್ತಿಯನ್ನು ಪಡೆದಿದ್ದರು.
ಅಷ್ಟೇ ಅಲ್ಲದೇ ವಿ ಹರಿಕೃಷ್ಣ ಈ ಸಾಲಿನಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಗೆಟಗರಿ ಅಡಿಯಲ್ಲಿ ಪ್ರಶಸ್ತಿಯನ್ನು ಪಡೆದಿದ್ದರು, ರಮೇಶ್ ಇಂದಿರಾ ಪ್ರೀಮಿಯರ್ ಪದ್ಮಿನಿ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು ಹಾಗೂ ಮೂಕಜ್ಜಿಯ ಕನಸುಗಳು ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದರು. ಈ ಎಲ್ಲಾ ಕನ್ನಡದ ಕಲಾವಿದರು ಈ ಹಿಂದೆ ದಾದಾ ಸಾಹೇಬ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಪಡೆದಿದ್ದರು.


Click it and Unblock the Notifications











