For Quick Alerts
ALLOW NOTIFICATIONS  
For Daily Alerts

ತರಾಸು ಹುಟ್ಟುಹಬ್ಬ : ತರಾಸು ಕಾದಂಬರಿ ಆಧಾರಿತ ಸಿನಿಮಾಗಳು

By ಶಶಿಧರ ಚಿತ್ರದುರ್ಗ
|

ನಾಡಿನ ಶ್ರೇಷ್ಠ ಸಾಹಿತಿ ತರಾಸು ಅವರ ಕೃತಿಗಳನ್ನು ಆಧರಿಸಿದ ಹಲವಾರು ಸಿನಿಮಾಗಳು ಮೈಲುಗಲ್ಲು ಎನಿಸಿವೆ. ಸಿನಿಮಾ-ಸಾಹಿತ್ಯದ ಕೊಂಡಿಯಾಗಿದ್ದ ತರಾಸು ಜನ್ಮದಿನ ಇಂದು (21). ಸಿನಿಮಾ ಮಾಧ್ಯಮಕ್ಕೆ ಸಂದ ಅವರ ಸೇವೆಯನ್ನು ಸ್ಮರಿಸಿಕೊಳ್ಳುವ ಸಂದರ್ಭವಿದು.

ಕನ್ನಡ ಚಿತ್ರರಂಗ ಪ್ರವರ್ಧಮಾನಕ್ಕೆ ಬರುವ ಅವಧಿಯನ್ನು ಕತೆ, ಕಾದಂಬರಿ ಆಧರಿಸಿದ ಸಿನಿಮಾಗಳ ಸುಗ್ಗಿಯ ಕಾಲ ಎನ್ನಬಹುದು. ಪ್ರತಿಭಾವಂತ ಕತೆಗಾರರ ನೆಲದ ಗುಣವುಳ್ಳ ಸತ್ವಯುತ ಕತೆಗಳನ್ನು ತಂತ್ರಜ್ಞರು ತೆರೆಗೆ ಅಳವಡಿಸುತ್ತಿದ್ದರು. ಈ ಚಿತ್ರಗಳು ವೀಕ್ಷಕರ ಮನಸೂರೆಗೊಂಡಿದ್ದಲ್ಲದೆ ಗಳಿಕೆಯಲ್ಲಿಯೂ ಗೆಲುವು ಕಂಡವು. ಹೀಗೆ, ಸಾಹಿತ್ಯ ಕೃತಿಗಳನ್ನು ಆಧರಿಸಿದ ಹಲವಾರು ಸಿನಿಮಾಗಳು ಕನ್ನಡ ಚಿತ್ರರಂಗದ ಮೈಲುಗಲ್ಲು ಎನಿಸಿವೆ.

ಕಥೆ ಬರಿಯದೆಯೇ ಕನಸು ಕಟ್ಟಿಕೊಟ್ಟ ಪುಟ್ಟಣ್ಣ

ಕಾದಂಬರಿ ಆಧರಿಸಿದ ಸಿನಿಮಾಗಳ ಬಗ್ಗೆ ಮಾತನಾಡುವಾಗ ಸಾಹಿತಿ ತಳುಕು ರಾಮಸ್ವಾಮಿ ಸುಬ್ಬರಾವ್ (ತರಾಸು) ಅವರ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಅವರ ಕೃತಿಗಳನ್ನು ಆಧರಿಸಿ ತಯಾರಾದ ಹತ್ತಾರು ಸಿನಿಮಾಗಳು ಮಹತ್ವದ ಪ್ರಯೋಗಗಳಾಗಿ ದಾಖಲಾಗಿವೆ. ಕೆಲವು ಸಿನಿಮಾಗಳಿಗೆ ಸ್ವತಃ ತರಾಸು ಅವರೇ ಚಿತ್ರಕಥೆ, ಹಾಡುಗಳನ್ನು ರಚಿಸಿ ಕೊಟ್ಟಿದ್ದಾರೆ. ಒಂದೆಡೆ ತಮ್ಮ ಕೃತಿಗಳ ಮೂಲಕ ಓದುಗರ ಅಭಿರುಚಿಯನ್ನು ಹೆಚ್ಚಿಸಿದ ತರಾಸು ಮತ್ತೊಂದೆಡೆ ಸಿನಿಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಸಿನಿಮಾ ಮತ್ತು ಸಾಹಿತ್ಯದ ನಂಟಿಗೆ ಸಾಕ್ಷಿಯಾದ ಪ್ರಮುಖರ ಪಟ್ಟಿಯಲ್ಲಿ ತರಾಸು ಅಗ್ರಗಣ್ಯರು. ಅವರ ಕೃತಿಗಳನ್ನು ಆಧರಿಸಿದ ಸಿನಿಮಾಗಳು ಹತ್ತಾರು ಕಲಾವಿದರು ಮತ್ತು ತಂತ್ರಜ್ಞರ ವೃತ್ತಿ ಬದುಕಿಗೆ ತಿರುವಾಗಿದ್ದು ವಿಶೇಷ....

ಫೋಟೋ : ಪ್ರಗತಿ ಅಶ್ವಥ ನಾರಾಯಣ

ರಾಜಕುಮಾರ್ ಅವರ 50ನೇ ಚಿತ್ರ

ಸಿನಿಮಾ ಆದ ತರಾಸು ಅವರ ಬಹುಪಾಲು ಕೃತಿಗಳಲ್ಲಿ ದುರಂತ ಅಂತ್ಯವನ್ನು ನೋಡಬಹುದು. ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದಲ್ಲಿ ತಯಾರಾದ ‘ಚಂದವಳ್ಳಿಯ ತೋಟ' (1964) ಸಿನಿಮಾ ತರಾಸು ಕೃತಿಯನ್ನು ಆಧರಿಸಿ, ಅದೇ ಶೀರ್ಷಿಕೆಯಡಿ ತಯಾರಾಗಿತ್ತು. ರಾಜಕುಮಾರ್ ಅವರ 50ನೇ ಚಿತ್ರವಿದು. ನಾಯಕಿಯಾಗಿ ಜಯಂತಿ ಪದಾರ್ಪಣೆ ಮಾಡಿದ ಈ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಉದಯ್‌ಕುಮಾರ್ ನಟಿಸಿದ್ದರು. ಟಿ.ಜಿ.ಲಿಂಗಪ್ಪ ಅವರ ಸಂಗೀತ ಸಂಯೋಜಿಸಿದ್ದ ಚಿತ್ರದ ಹಾಡುಗಳು ಇಂದಿಗೂ ಅಚ್ಚ ಹಸಿರಾಗಿವೆ. ಚಿತ್ರಕ್ಕೆ ತರಾಸು ಕೂಡ ಎರಡು ಹಾಡುಗಳನ್ನು ರಚಿಸಿದ್ದರು. ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರ ಪ್ರಶಸ್ತಿಗೆ ಚಿತ್ರ ಭಾಜನವಾಗಿತ್ತು.

‘ಚಕ್ರತೀರ್ಥ’ಗೆ ತರಾಸು ಅವರೇ ಚಿತ್ರಕಥೆ

ಮುಂದೆ ತಮ್ಮ ಕೃತಿಯನ್ನಾಧರಿಸಿದ ‘ಚಕ್ರತೀರ್ಥ' (1967) ಚಿತ್ರಕ್ಕೆ ತರಾಸು ಅವರೇ ಚಿತ್ರಕಥೆ ರಚಿಸಿಕೊಟ್ಟಿದ್ದರು. ಪೇಕೇಟಿ ಶಿವರಾಂ ನಿರ್ದೇಶನದಲ್ಲಿ ತಯಾರಾದ ಈ ಚಿತ್ರದಲ್ಲಿ ಮತ್ತೊಮ್ಮೆ ರಾಜಕುಮಾರ್, ಜಯಂತಿ ಮತ್ತು ಉದಯಕುಮಾರ್ ಜೊತೆಯಾಗಿದ್ದರು. ತರಾಸು ಅವರು ರಚಿಸಿದ್ದ ಚಿತ್ರದ ಶೀರ್ಷಿಕೆ ಗೀತೆ ಅಪಾರ ಮನ್ನಣೆಗೆ ಪಾತ್ರವಾಗಿತ್ತು. ಚಿತ್ರದಲ್ಲಿ ದ.ರಾ.ಬೇಂದ್ರೆ ಅವರ "ಕುಣಿಯೋಣು ಬಾರಾ' ಗೀತೆಯನ್ನು ಬಳಕೆ ಮಾಡಲಾಗಿದ್ದು, ಸಂಗೀತ ಸಂಯೋಜಕ ಟಿ.ಜಿ.ಲಿಂಗಪ್ಪ ಸೊಗಸಾಗಿ ಸಂಗೀತ ಸಂಯೋಜಿಸಿದ್ದರು. ತಲಕಾಡಿನ ಆಸುಪಾಸಿನಲ್ಲಿ ಚಿತ್ರಿಸಿದ್ದ ಸಿನಿಮಾ ‘ಚುಟ್ಟಾರಿಕಾಲು' ಶೀರ್ಷಿಕೆಯಡಿ ತೆಲುಗಿಗೆ ರೀಮೇಕ್ ಆಗಿತ್ತು. ತರಾಸು ಅವರ ‘ಹಂಸಗೀತೆ' (1975) ಕೃತಿಯನ್ನು ಜಿ.ವಿ.ಅಯ್ಯರ್ ಅದೇ ಶೀರ್ಷಿಕೆಯಡಿ ತೆರೆಗೆ ಅಳವಡಿಸಿದ್ದರು. ಕನ್ನಡ ಚಿತ್ರವಾಗುವುದಕ್ಕೂ ಮುನ್ನ ತರಾಸು ಅವರ ಈ ಕೃತಿಯನ್ನು ರಾಜಾ ನವಾಥೆ ‘ಬಸಂತ್ ಬಹಾರ್' (1956) ಶೀರ್ಷಿಕೆಯಡಿ ಹಿಂದಿ ಸಿನಿಮಾ ಮಾಡಿದ್ದರು.

'ನಾಗರಹಾವು' ಚಿತ್ರದ ಬಗ್ಗೆ ವಿ ನಾಗೇಂದ್ರ ಪ್ರಸಾದ್ ಅಭಿಮಾನದ ಪತ್ರ

ತರಾಸು ಅವರ ಮೂರು ಕೃತಿಗಳನ್ನು ಆಧರಿಸಿದ ‘ನಾಗರಹಾವು’

ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ತಮ್ಮ ಮೂರು ಕೃತಿಗಳನ್ನು ಆಧರಿಸಿ ತಯಾರಿಸಿದ ‘ನಾಗರ ಹಾವು' (1973) ಚಿತ್ರದ ಬಗ್ಗೆ ಮೊದಲು ತರಾಸು ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಅವರು ಈ ಚಿತ್ರವನ್ನು ‘ಕೇರೆ ಹಾವು' ಎಂದು ಟೀಕಿಸಿದ್ದು ದೊಡ್ಡ ಸುದ್ದಿಯಾಗಿತ್ತು. ತರಾಸು ಅವರ ‘ನಾಗರಹಾವು', ‘ಒಂದು ಗಂಡು ಎರಡು ಹೆಣ್ಣು' ಮತ್ತು ‘ಸರ್ಪ ಮತ್ಸರ' ಕೃತಿಗಳನ್ನು ಆಧರಿಸಿ ಪುಟ್ಟಣ್ಣ ಸಿನಿಮಾ ಮಾಡಿದ್ದರು. ಆರಂಭದಲ್ಲಿ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ತರಾಸು ಆನಂತರ ತಮ್ಮ ಮುನಿಸು ಮರೆತು ಚಿತ್ರತಂಡವನ್ನು ಅಭಿನಂದಿಸಿದ್ದರು. ವಿಷ್ಣುವರ್ಧನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಇಮೇಜು ದೊರಕಿಸಿಕೊಟ್ಟ ಸಿನಿಮಾ ಆರತಿ, ಕೆ.ಎಸ್.ಅಶ್ವಥ್, ಅಂಬರೀಶ್, ಲೋಕನಾಥ್ ಅವರ ವೃತ್ತಿ ಬದುಕಿಗೆ ತಿರುವು ನೀಡಿತು. ಮೂರು ಥಿಯೇಟರ್‌ಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಚಿತ್ರವಿದು.

ತರಾಸು ಕಾದಂಬರಿಗಳನ್ನು ಸಿನಿಮಾ ಮಾಡದ್ದರು ದೊರೈ-ಭಗವಾನ್

ಮುಂದೆ ತರಾಸು ಅವರ ಮೂರು ಕಾದಂಬರಿಗಳನ್ನು ದೊರೈ-ಭಗವಾನ್ ತೆರೆಗೆ ಅಳವಡಿಸಿ ಯಶಸ್ಸು ಕಂಡರು. ‘ಚಂದನದ ಗೊಂಬೆ' (1979), ‘ಬೆಂಕಿಯ ಬಲೆ' (1983) ಮತ್ತು ‘ಬಿಡುಗಡೆಯ ಬೇಡಿ' (1985) ಚಿತ್ರಗಳು ನಿರ್ದೇಶಕದ್ವಯರಾದ ದೊರೈ-ಭಗವಾನ್ ಮತ್ತು ಸಂಗೀತ ಸಂಯೋಜಕರಾದ ರಾಜನ್-ನಾಗೇಂದ್ರ ಅವರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ನೀಡಿದವು. ಈ ಚಿತ್ರಗಳ ಮೂಲಕ ಅನಂತನಾಗ್ ಮತ್ತು ಲಕ್ಷ್ಮೀ ಜೋಡಿ ಕನ್ನಡ ಸಿನಿಪ್ರೇಮಿಗಳ ಫೇವರಿಟ್ ಜೋಡಿ ಎನಿಸಿಕೊಂಡಿತು. ದೊರೈ-ಭಗವಾನ್ ನಿರ್ದೇಶನದಲ್ಲಿ ತಯಾರಾದ ತರಾಸು ಅವರ ಟ್ರ್ಯಾಜಿಡಿ ಕತೆ ‘ಗಾಳಿ ಮಾತು' (1981) ಕೂಡ ಗಳಿಕೆಯಲ್ಲಿ ಯಶಸ್ಸು ಕಂಡಿತು. ತರಾಸು ಅವರ ಕೃತಿ ‘ಮಸಣದ ಹೂವು', ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಚಿತ್ರವಾಯ್ತು. ವೇಶ್ಯಾವಾಟಿಕೆ ಹಿನ್ನೆಲೆಯ ಕಥಾವಸ್ತು ಇದ್ದ ಸಿನಿಮಾ ಗಳಿಕೆಯಲ್ಲಿ ಹಿನ್ನೆಡೆ ಕಂಡಿತು.

‘ಆಕಸ್ಮಿಕ’ ಚಿತ್ರ ಮೂರು ಕೃತಿಗಳ ಕಥಾವಸ್ತು

ಡಾ.ರಾಜಕುಮಾರ್ ಅಭಿನಯದ ‘ಆಕಸ್ಮಿಕ' (1993) ಸಿನಿಮಾದಲ್ಲಿ ತರಾಸು ಅವರ ಮೂರು ಕೃತಿಗಳ ಕಥಾವಸ್ತು ಇದೆ. ಆಕಸ್ಮಿಕ, ಅಪರಾಧಿ ಮತ್ತು ಪರಿಣಾಮ ಕಾದಂಬರಿಗಳನ್ನು ಆಧರಿಸಿ ನಿರ್ದೇಶಕ ಟಿ.ಎಸ್.ನಾಗಾಭರಣ ಈ ಚಿತ್ರವನ್ನು ತೆರೆಗೆ ಅಳವಡಿಸಿದರು. ಮಾಧವಿ ಮತ್ತು ಗೀತಾ ನಾಯಕಿಯರಾಗಿ ನಟಿಸಿದ್ದ ಸಿನಿಮಾದಲ್ಲಿ ಹತ್ತಾರು ಹಿರಿಯ ಕಲಾವಿದರು ಅಭಿನಯಿಸಿದ್ದರು. ಹಂಸಲೇಖ ಸಾಹಿತ್ಯ ಮತ್ತು ಸಂಗೀತವಿದ್ದ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯ್ತು. ಎರಡು ವರ್ಷದ ಹಿಂದೆ ನಂದೀಶ್ವರ್ ನಿರ್ದೇಶನದಲ್ಲಿ ತರಾಸು ಕಾದಂಬರಿ ಆಧರಿಸಿದ 'ಅಕ್ಕಮ್ಮನ ಭಾಗ್ಯ' (2017) ಸಿನಿಮಾ ತೆರೆಗೆ ಬಂದಿತ್ತು. ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ತರಾಸು ಅವರ ‘ನೃಪತುಂಗ' ಕೃತಿಯ ಹಕ್ಕುಗಳನ್ನು ಖರೀದಿಸಿದ್ದರು. ಮುಂದಿನ ದಿನಗಳಲ್ಲಿ ಅವರ ಬ್ಯಾನರ್‌ನಲ್ಲಿ ಚಿತ್ರ ಸೆಟ್ಟೇರುವ ಸೂಚನೆಗಳಿವೆ.

‘ದುರ್ಗಾಸ್ತಮಾನ’ ಕೃತಿಯ ಸಿನಿಮಾ ಬರಬೇಕಿತ್ತು

ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ವಿಷ್ಣುವರ್ಧನ್‌ರಿಗಾಗಿ ತರಾಸು ಅವರ ‘ದುರ್ಗಾಸ್ತಮಾನ' ಕೃತಿಯನ್ನು ಸಿನಿಮಾ ಮಾಡಲು ಉದ್ದೇಶಿಸಿದ್ದರು. ಕಾರಣಾಂತರಗಳಿಂದಾಗಿ ಈ ಪ್ರಾಜೆಕ್ಟ್ ಕೈಗೂಡಲಿಲ್ಲ. ಹೀಗೆ, ತರಾಸು ತಮ್ಮ ಅಪರೂಪದ ಕೃತಿಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ಕೊಟ್ಟಿದ್ದಾರೆ. ಕಾದಂಬರಿ ಆಧರಿಸಿದ ಸಿನಿಮಾ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ.

English summary
TR Subbarao birthday: List of kannada movies based on TR Subbarao novels.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more