ಈ ವಾರ ಕನ್ನಡದ 10 ಸಿನಿಮಾ ರಿಲೀಸ್: ಯಾವುದು ನೋಡ್ತಿರಾ? ಯಾವುದು ಬಿಡ್ತೀರಾ?
ಮತ್ತೊಂದು ಶುಕ್ರವಾರ ಬರ್ತಿದೆ. ಅಂದರೆ ಸಿನಿರಸಿಕರಿಗೆ ಹೊಚ್ಚ ಹೊಸ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ನೋಡುವ ಅವಕಾಶ ಸಿಗಲಿದೆ. ಈ ವಾರ ಕನ್ನಡದಲ್ಲಿ ವಿಭಿನ್ನ ಬಗೆಯ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಬರ್ತಿವೆ. ಬರೋಬ್ಬರಿ 10 ಚಿತ್ರಗಳು ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ತೆರೆಗಪ್ಪಳಿಸುತ್ತಿವೆ. ಹೊಸಬರ ವಿನೂತನ ಪ್ರಯತ್ನದ ಜೊತೆಗೆ ಹಳಬರ ಸಿನಿಮಾಗಳು ಈ ಪಟ್ಟಿಯಲ್ಲಿದೆ.
ಮಂಸೋರೆ ನಿರ್ದೇಶನದ '19.20.21' ಸಿನಿಮಾ ಕೊಂಚ ನಿರೀಕ್ಷೆ ಹುಟ್ಟಾಕ್ಕಿದೆ. ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಮಂಸೋರೆ ಸಿನಿಮಾ ಮಾಡುತ್ತಾ ಬರ್ತಿದೆ. 'ಆಕ್ಟ್1978' ರೀತಿಯ ಮತ್ತೊಂದು ವಿಭಿನ್ನ ಕಥೆಯನ್ನು '19.20.21' ಚಿತ್ರದಲ್ಲಿ ಹೇಳಲಾಗುತ್ತಿದೆ. ವ್ಯವಸ್ಥೆಯೊಂಗಿನ ಸಂಘರ್ಷಕ್ಕೆ ತುತ್ತಾತ ಯುವಕನೋರ್ವನ ಹೋರಾಟದ ಕಥೆ ಈ ಚಿತ್ರದಲ್ಲಿದೆ. ಶೃಂಗ .ಬಿ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ. ಡಿ ಪಲ್ಲವಿ ಚಿತ್ರದ ತಾರಾಗಣದಲ್ಲಿದ್ದಾರೆ.

ಸುಕೇಶ್ ಶೆಟ್ಟಿ ನಿರ್ದೇಶನದ 'ದೂರದರ್ಶನ' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಪೃಥ್ವಿ ಅಂಬರ್ ಹಾಗೂ ಅಯಾನ ಚಿತ್ರದ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಲವ್, ಕಾಮೆಡಿ, ಎಮೋಷನ್ ಎಲ್ಲವನ್ನು ಬೆರಸಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರ ನಿಮ್ಮನ್ನು ನಿಮ್ಮ ಬಾಲ್ಯದ ದಿನಗಳಿಗೆ ಕೊಂಡೊಯ್ಯಲಿದೆ. 80ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ವಿ. ಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಾಜೇಟ್ ಭಟ್ ಸಿನಿಮಾ ನಿರ್ಮಿಸಿದ್ದಾರೆ.
ವಿಜಯ್ ರಾಘವೇಂದ್ರ- ಹರ್ಷಿಕಾ ಪೂಣಚ್ಚ ನಟನೆಯ 'ಕಾಸಿನ ಸರ' ಚಿತ್ರಕ್ಕೂ ಈ ವಾರವೇ ಬಿಡುಗಡೆ ಭಾಗ್ಯ ಸಿಗುತ್ತಿದೆ. ಎನ್. ಆರ್ ನಂಜುಂಡೇಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಪ್ರಗತಿಪರ ರೈತನಾಗಿ ನಟಿಸಿದ್ದಾರೆ. ಕೃಷಿ ವಿದ್ಯಾರ್ಥಿ ಪಾತ್ರದಲ್ಲಿ ಹರ್ಷಿಕಾ ಮಿಂಚಿದ್ದಾರೆ. ಚಿತ್ರದಲ್ಲಿ ಹಳ್ಳಿಗಳ ಸ್ಥಿತಿಗತಿ, ರೈತರ ನೋವು ನಲಿವಿನ ಕಥೆಯಿದೆ. ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪನ್ನಗ ಸೋಮಶೇಖರ್ ನಿರ್ದೇಶನದ 'ಕಡಲ ತೀರದ ಭಾರ್ಗವ' ಸಿನಿಮಾ ಕೂಡ ಕೊಂಚ ಮಟ್ಟಿಗೆ ಕುತೂಹಲ ಮೂಡಿಸಿದೆ. ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಚಿತ್ರದ ನಾಯಕರಾಗಿ ಮಿಂಚಿದ್ದಾರೆ. ಶ್ರುತಿ ಪ್ರಕಾಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸ್ನೇಹಿತರು ಹಾಗೂ ನಾಯಕಿಯ ಸುತ್ತಾ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದು. ನಾಯಕರಾಗಿ ನಟಿಸುತ್ತಿರುವ ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇನ್ನುಳಿದಂತೆ ಈ ವಾರ 'ಅಂಬಾಸಿಡರ್', 'ಬೀಗ', 'ನಾಕುಮುಖ', 'ಒಂದಂಕೆ ಕಾಡು', 'ಪ್ರಜಾ ರಾಜ್ಯ', 'ರಾಕ್ಷಸ ತಂತ್ರ' ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಈ 10 ಸಿನಿಮಾಗಳಲ್ಲಿ ಪ್ರೇಕ್ಷಕರು ಯಾವ ಸಿನಿಮಾ ಕೈ ಹಿಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











