'KGF'ಗೆ ಪೈಪೋಟಿ ನೀಡಲು ಡಿಸೆಂಬರ್ ಗೆ ಬರ್ತಿರೋ ಕನ್ನಡ ಸಿನಿಮಾಗಳಿವು
Recommended Video

ಡಿಸೆಂಬರ್ ತಿಂಗಳು 'ಕೆ ಜಿ ಎಫ್' ಸಿನಿಮಾಗೆ ಮೀಸಲು ಎಂಬ ಮಾತಿದೆ. ಅದೇ ರೀತಿ ಕನ್ನಡ ಚಿತ್ರರಂಗದ ಈ ಮಹಾ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಅಬ್ಬರಿಸರಲು ಬರುತ್ತಿದೆ. ಆದರೆ, ಈಗ ಈ ಚಿತ್ರದ ಜೊತೆಗೆ ಕನ್ನಡದ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ.
'ಕೆ ಜಿ ಎಫ್' ಸಿನಿಮಾಗಾಗಿ ಇಡೀ ದೇಶವೇ ಕಾಯುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಸಿನಿಮಾಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದೆ. ಬಾಲಿವುಡ್ ನಲ್ಲಿ 'ಕೆ ಜಿ ಎಫ್' ಸಿನಿಮಾದ ವಿರುದ್ಧ ಶಾರೂಖ್ ಖಾನ್ ಅವರ 'ಜೀರೋ' ರಿಲೀಸ್ ಆಗುತ್ತಿದೆ.
ಈ ಡಿಸೆಂಬರ್ ಗೆ 'ಕೆ ಜಿ ಎಫ್' ಹಾಗೂ 'ಜೀರೋ' ಸಿನಿಮಾದ ನಡುವೆ ಪೈಪೋಟಿ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಅದರ ಜೊತೆ ಜೊತೆಗೆ ಕನ್ನಡದಲ್ಲಿಯೂ ಮುಂದಿನ ತಿಂಗಳು ಕೆಲ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮುಂದೆ ಓದಿ...

ಡಿಸೆಂಬರ್ 7ಕ್ಕೆ 'ಕವಚ'
ನಟ ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾ ಡಿಸೆಂಬರ್ 7 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ವೃತ್ತಿ ಜೀವನದ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ 'ಕವಚ' ವಾಗಿದ್ದು, ಇದು ಮಲೆಯಾಳಂ ಭಾಷೆಯ 'ಒಪ್ಪಂ' ಚಿತ್ರದ ರಿಮೇಕ್ ಆಗಿದೆ.

ಗಣೇಶ್ ಅದೃಷ್ಟ ಪರೀಕ್ಷೆ
ನಟ ಗಣೇಶ್ ಅವರಿಗೆ ಕೂಡ ಡಿಸೆಂಬರ್ ಗೆ ಲಕ್ಕಿ. 'ಮುಂಗಾರು ಮಳೆ', 'ಚಮಕ್' ಸೇರಿದಂತೆ ಅವರ ಅನೇಕ ಸಿನಿಮಾಗಳು ಡಿಸೆಂಬರ್ ನಲ್ಲಿ ರಿಲೀಸ್ ಆಗಿ ಯಶಸ್ವಿಯಾಗಿವೆ. ಈಗ ಅದೇ ನಂಬಿಕೆ ಮೇಲೆ 'ಆರೆಂಜ್' ಚಿತ್ರವನ್ನ ಕೂಡ ಅದೇ ತಿಂಗಳು ಬಿಡುಗಡೆ ಮಾಡಲಾಗುತ್ತಿದೆ. ಒಂದೇ ದಿನ 'ಕವಚ' ಮತ್ತು 'ಆರೆಂಜ್' ತೆರೆಗೆ ಬರುತ್ತಿದೆ.

'ಐ ಲವ್ ಯೂ' ಹೇಳ್ತಾರಾ ಉಪ್ಪಿ
ನಿರ್ದೇಶಕ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಕಾಂಬಿನೇಶನ್ ನ ಎರಡನೇ ಚಿತ್ರ 'ಐ ಲವ್ ಯೂ' ಕೂಡ ಡಿಸೆಂಬರ್ ಗೆ ಬರುವ ಸಾಧ್ಯತೆ ಹೆಚ್ಚಿದೆ. ಅದರಲ್ಲಿಯೂ 'ಕೆ ಜಿ ಎಫ್' ರಿಲೀಸ್ ಆಗುವ ದಿನವೇ ಅಂದರೆ ಡಿಸೆಂಬರ್ 21 ರಂದು ಈ ಚಿತ್ರವನ್ನ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆಯಂತೆ. ಆದರೆ, ರಿಲೀಸ್ ಡೇಟ್ ಇನ್ನೂ ಚಿತ್ರತಂಡದಿಂದ ಅನೌನ್ಸ್ ಆಗಿಲ್ಲ.

ಮುಂದಿನ ವರ್ಷಕ್ಕೆ ಹೋದ ಸಿನಿಮಾಗಳು
ಈ ವರ್ಷದ ಕೊನೆಗೆ ಬಿಡುಗಡೆಯಾಗಬೇಕಿದ್ದ ಅನೇಕ ಸಿನಿಮಾಗಳು ಮುಂದಿನ ವರ್ಷಕ್ಕೆ ಹೋಗಿವೆ. ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ', ದರ್ಶನ್ ಅವರ 'ಕುರುಕ್ಷೇತ್ರ', ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರಗಳು 'ಕೆ ಜಿ ಎಫ್'ಗೆ ದಾರಿ ಮಾಡಿ ಕೊಟ್ಟಿವೆ.

ಟ್ರೇಲರ್ ಹಿಟ್, ಚಿತ್ರಕ್ಕಾಗಿ ಕಾತುರ
'ಕೆ ಜಿ ಎಫ್' ಸಿನಿಮಾದ ಟ್ರೇಲರ್ ಎಲ್ಲ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದೆ. ಯಶ್ ವೃತ್ತಿ ಜೀವನದ ಮಹತ್ವದ ಸಿನಿಮಾ ಇದಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಎರಡನೇ ಸಿನಿಮಾವಾಗಿದ್ದು, ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ಹೊರ ಬಂದಿದೆ. ಸಿನಿಮಾ ಡಿಸೆಂಬರ್ 21 ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ.


Click it and Unblock the Notifications











