Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ನೂರು ಕೋಟಿ ಕ್ಲಬ್ ಸೇರಿದ ಕನ್ನಡದ ಐದು ಚಿತ್ರಗಳಾವುವು? ಅವುಗಳಿಗೆ ಹಾಕಿದ್ದ ಬಂಡವಾಳವೆಷ್ಟು?
2022 ಭಾರತ ಸಿನಿಮಾ ರಂಗಕ್ಕೆ ಮರುಜೀವ ನೀಡಿದ ವರ್ಷ ಎಂದರೆ ತಪ್ಪಾಗಲಾರದು. ಕಳೆದ ವರ್ಷವೂ ಒಳ್ಳೊಳ್ಳೆ ಚಿತ್ರಗಳು ಬಿಡುಗಡೆಯಾದರೂ ಸಹ ಕೆಲವೊಂದಷ್ಟು ತಿಂಗಳು ಕೊವಿಡ್ ಲಾಕ್ ಡೌನ್ ಕಾರಣದಿಂದಾಗಿ ಚಿತ್ರರಂಗಗಳು ಸಂಪೂರ್ಣವಾಗಿ ಸುಧಾರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಭಾರತದ ಎಲ್ಲಾ ಚಿತ್ರರಂಗಗಳೂ ಸಹ ಸಂಪೂರ್ಣವಾಗಿ ಚೇತರಿಕೆ ಕಂಡಿವೆ.
ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತದ ಚಿತ್ರರಂಗಗಳಾದ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗಗಳು ಅಬ್ಬರಸಿವೆ. ಈ ಮೂರೂ ಚಿತ್ರರಂಗಗಳೂ ಸಹ ಇಂಡಸ್ಟ್ರಿ ಹಿಟ್‌ಗಳನ್ನು ಬಾರಿಸಿ ಕೋಟಿ ಕೋಟಿ ಕಲೆಕ್ಷನ್ ಮಾಡಿವೆ. ಇನ್ನು ಕನ್ನಡ ಚಿತ್ರರಂಗ ಯಾರೂ ಊಹಿಸಿರದ ರೀತಿ ಈ ವರ್ಷ ಭರ್ಜರಿ ಯಶಸ್ಸನ್ನು ಸಾಧಿಸಿದೆ.
ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಬರೋಬ್ಬರಿ 1250 ಕೋಟಿ ಗಳಿಸಿದರೆ, ರಿಷಬ್ ಶೆಟ್ಟಿ ಅವರ 'ಕಾಂತಾರ' 400+ ಕೋಟಿ ಗಳಿಕೆ ಮಾಡಿ ಬೆರಗಾಗುವಂತೆ ಮಾಡಿದವು. ಇನ್ನು ಈ ಚಿತ್ರಗಳು ಬೃಹತ್ ಗಳಿಕೆ ಮಾಡಿದರೆ ಕನ್ನಡದ ಇತರೆ ಚಿತ್ರಗಳೂ ಸಹ ಒಳ್ಳೆಯ ಕಲೆಕ್ಷನ್ ಮಾಡಿವೆ. ಈ ಹಿಂದೆ ನೂರು ಕೋಟಿ ಕಲೆಕ್ಷನ್ ಮಾಡಲು ಹರಸಾಹಸ ಪಡುತ್ತಿದ್ದ ಕನ್ನಡ ಚಿತ್ರರಂಗದ ಚಿತ್ರಗಳು ಈ ವರ್ಷ ಲೀಲಾಜಾಲವಾಗಿ ನೂರು ಕೋಟಿ ಕ್ಲಬ್ ಸೇರಿವೆ. ಇನ್ನು ಈ ವರ್ಷ ಕನ್ನಡದ ಯಾವ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

ಜೇಮ್ಸ್
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ( ಮಾರ್ಚ್ 17 ) ಪ್ರಯುಕ್ತ ಬಿಡುಗಡೆಯಾಗಿದ್ದ ಅಪ್ಪು ಹಾಗೂ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡದ ಚಿತ್ರ ಎನಿಸಿಕೊಂಡಿತ್ತು. 50 ಕೋಟಿ ಬಜೆಟ್‌ನಲ್ಲಿ ಕಿಶೋರ್ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗಿದ್ದ ಈ ಚಿತ್ರ 150.7 ಕೋಟಿ ಗಳಿಸಿತ್ತು.

ಕೆಜಿಎಫ್ ಚಾಪ್ಟರ್ 2
ಕೆಜಿಎಫ್ ಚಾಪ್ಟರ್ 1 ಚಿತ್ರದ ಗೆಲುವು ಹಾಗೂ ಅದರಿಂದ ಅತೀವ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡು ನಿರೀಕ್ಷೆಯನ್ನು ಮೀರಿಸಿ ಗಳಿಕೆಯನ್ನು ಮಾಡಿ ಅಬ್ಬರಿಸಿತು. ಪ್ಯಾನ್ ಇಂಡಿಯಾ ಚಿತ್ರವಾಗಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14ರಂದು ತೆರೆಕಂಡಿತ್ತು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 100 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ 1250 ಕೋಟಿ ಕಲೆಹಾಕಿತ್ತು. ಇನ್ನು ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರ ಎಂಬ ದಾಖಲೆ ಸಹ ಈ ಚಿತ್ರದ ಹೆಸರಿನಲ್ಲಿಯೇ ಇದೆ.

777 ಚಾರ್ಲಿ
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಮೂರನೇ ಕನ್ನಡ ಚಿತ್ರ ಎನಿಸಿಕೊಂಡಿತು. ಜೂನ್ 10ರಂದು ತೆರೆಕಂಡಿದ್ದ 777 ಚಾರ್ಲಿ ಪರಮ್‌ವಾ ಬ್ಯಾನರ್ ಅಡಿಯಲ್ಲಿ 20 ಕೋಟಿ ವೆಚ್ಚದಲ್ಲಿ ತಯಾರಾಗಿ 105.7 ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಸಕ್ಸಸ್ ಕಂಡಿತ್ತು.

ವಿಕ್ರಾಂತ್ ರೋಣ
ಕಿಚ್ಚ ಕ್ರಿಯೇಷನ್ಸ್ ಹಾಗೂ ಶಾಲಿನಿ ಆರ್ಟ್ಸ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದ್ದ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ವಿಕ್ರಾಂತ್ ರೋಣ ಚಿತ್ರ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಕನ್ನಡದ ನಾಲ್ಕನೇ ಚಿತ್ರ ಎನಿಸಿಕೊಂಡಿತು. ಜುಲೈ 28ರಂದು ಬಿಡುಗಡೆಗೊಂಡಿದ್ದ ಕನ್ನಡದ ಈ ಪ್ಯಾನ್ ಇಂಡಿಯಾ ಚಿತ್ರ 95 ಕೋಟಿ ವೆಚ್ಚದಲ್ಲಿ ತಯಾರಾಗಿ 184.5 ಕೋಟಿ ಗಳಿಕೆ ಮಾಡಿತ್ತು.

ಕಾಂತಾರ
ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡಿದ್ದ ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಕಾಂತಾರ ಚಿತ್ರ ಇಷ್ಟರ ಮಟ್ಟಿಗೆ ಗಳಿಕೆ ಮಾಡಲಿದೆ ಎಂದು ಯಾರೊಬ್ಬರೂ ಸಹ ಬಿಡುಗಡೆಗೂ ಮುನ್ನ ಊಹಿಸಿರಲಿಲ್ಲ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಮೊದಲಿಗೆ ಕನ್ನಡದಲ್ಲಿ ಮಾತ್ರ ತಯಾರಾಗಿ ಅಬ್ಬರಿಸಿದ್ದ ಕಾಂತಾರ ಚಿತ್ರ ನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ದೇಶವ್ಯಾಪಿ ಯಶಸ್ಸನ್ನು ಸಾಧಿಸಿತು. ಇನ್ನು 16 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ 400+ ಕೋಟಿ ಗಳಿಕೆ ಮಾಡಿತ್ತು.