ಅಪ್ಪು-ಯಶ್ ದೋಸ್ತಿ ನಿನ್ನೆ ಮೊನ್ನೆಯದ್ದಲ್ಲ; ಅಪ್ಪು ಎಂದರೆ ಯಶ್‌ಗೆ ಅಂದು ಇಂದು ಎಂದೆಂದೂ ಅದೇ ಗೌರವ
ಯಶ್ ಹಾಗೂ ಪುನೀತ್ ರಾಜ್ ಕುಮಾರ್ ಇಬ್ಬರಲ್ಲಿಯೂ ಸಹ ಸಾಕಷ್ಟು ಸಾಮ್ಯತೆಗಳಿವೆ. ಇಬ್ಬರೂ ಸಹ ಹೊಸದನ್ನೇನಾದರೂ ಕನ್ನಡ ಚಿತ್ರರಂಗಕ್ಕೆ ತರಬೇಕು, ಪ್ರೇಕ್ಷಕರು ಈತ ಯಾರೂ ಮಾಡದ್ದನ್ನು ಏನಾದರೂ ಮಾಡುತ್ತಾನೆ ಎಂದು ಬೆನ್ನು ತಟ್ಟಬೇಕು, ಕನ್ನಡ ಚಿತ್ರರಂಗಕ್ಕೆ ಹೊಸಬರು ಬರಬೇಕು ಎಂದು ಸದಾ ಹಂಬಲಿಸುತ್ತಿದ್ದವರು.
ಇತ್ತೀಚಿನ ದಿನಗಳಲ್ಲಿ ವೇದಿಕೆಯನ್ನು ಅತಿ ಹೆಚ್ಚು ಬಾರಿ ಒಟ್ಟಿಗೆ ಹಂಚಿಕೊಂಡ ಕನ್ನಡದ ಇಬ್ಬರು ಸ್ಟಾರ್ ನಟರೆಂದರೆ ಅದು ಅಪ್ಪು ಹಾಗೂ ಯಶ್ ಎಂದರೆ ತಪ್ಪಾಗಲಾರದು. ಅಪ್ಪು ಕೊನೆಯದಾಗಿ ಪಾಲ್ಗೊಂಡ ಭಜರಂಗಿ 2 ಪ್ರೀ ರಿಲೀಸ್ ವೇದಿಕೆಯಲ್ಲಿಯೂ ಯಶ್ ಇದ್ದರು. ಹೀಗೆ ವೇದಿಕೆ ಹಂಚಿಕೊಂಡಾಗಲೆಲ್ಲ ಅಪ್ಪು ಯಶ್ ಅವರನ್ನು ಹೊಗಳಿದರೆ, ಯಶ್ ಅಪ್ಪು ಅವರನ್ನು ಹೊಗಳಿ ಮಾತನಾಡುತ್ತಿದ್ದರು.
ಸದ್ಯ ನಿನ್ನೆಯಷ್ಟೇ ( ಅಕ್ಟೋಬರ್ 21 ) ನಡೆದ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿಯೂ ಇದೇ ನಡೆಯಿತು. ಆದರೆ ಯಶ್ ಅವರನ್ನು ಮರಳಿ ಹೊಗಳಲು ಅಲ್ಲಿ ಅಪ್ಪು ಇರಲಿಲ್ಲ ಎಂಬುದೇ ಬೇಸರದ ಸಂಗತಿ. ಇನ್ನು ಅಪ್ಪು ಹಾಗೂ ಗಂಧದ ಗುಡಿ ಕುರಿತು ಮಾತನಾಡಿದ ಯಶ್ ಮುಕ್ತ ಮನಸ್ಸಿನಿಂದ ಕೊಂಡಾಡಿದರು. ಅದರಲ್ಲಿಯೂ ಅಹಂ ಇಲ್ಲದೆಯೇ ಕೆಜಿಎಫ್ ದಾಖಲೆಗಳನ್ನು ಗಂಧದಗುಡಿ ಚಿತ್ರ ಹೊಡೆದುರುಳಿಸಲಿ ಎಂದು ಆಶಿಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್. ಹೀಗೆ ಅಪ್ಪು ಅವರನ್ನು ಯಶ್ ಹಾಡಿ ಹೊಗಳಿರುವುದು, ಗೌರವ ಸೂಚಿಸಿರುವುದು ಇದೇ ಮೊದಲ ಬಾರಿಯೇನಲ್ಲ.

ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ಹೆಜ್ಜೆಗೆ ಯಶ್ ಶಿಳ್ಳೆ, ರಣವಿಕ್ರಮ ಸೆಟ್‌ಗೆ ವಿಸಿಟ್
ಪರಸ್ಪರ ಸ್ಟಾರ್ ವಾರ್ ಇಲ್ಲದೇ ಇದ್ದ ನಟರಾದ ಅಪ್ಪು ಹಾಗೂ ಯಶ್ ನಡುವಿನ ಸೌಹಾರ್ದತೆ ದಶಕದ ಹಿಂದಿನದ್ದು. ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದಿದ್ದ ಖಾಸಗಿ ವಾಹಿನಿಯ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಅಪ್ಪು ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರು ಹಾಗೂ ಇದನ್ನು ವೀಕ್ಷಿಸುತ್ತಿದ್ದ ಯಶ್ ಫ್ಯಾನ್ ಬಾಯ್ ಆಗಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದರು. ಎಷ್ಟೇ ಆಗಲಿ ಅಪ್ಪು ಅವರ ಡ್ಯಾನ್ಸ್ ಹಾಗೂ ಫೈಟ್ ನೋಡಿಕೊಂಡು ಬೆಳೆದವರಲ್ಲವೇ. ಯಶ್ ಅವರ ಈ ನಡೆ ಕೆಲವು ದಿನಗಳ ನಂತರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ರಣವಿಕ್ರಮ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಯಶ್ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ಅಪ್ಪು ಅವರ ಜತೆ ಮಾತನಾಡಿದ್ದರು.

ಅಪ್ಪು ಸ್ಫೂರ್ತಿ ಎಂದಿದ್ದ ಯಶ್
ಇನ್ನು ಚಿತ್ರರಂಗಕ್ಕೂ ಬರುವ ಮುನ್ನ ಅಪ್ಪು ಅವರ ಫೈಟ್ ಹಾಗೂ ಡಾನ್ಸ್ ನೋಡಿ ಅವರ ರೀತಿ ಡಾನ್ಸ್ ಮಾಡಬೇಕು, ಅವರ ರೀತಿ ಫೈಟ್ ಮಾಡಬೇಕು ಎಂದು ಸ್ಫೂರ್ತಿಯನ್ನು ಪಡೆದಿದ್ದೆ ಎಂದು ಹಲವಾರು ಬಾರಿ ಯಶ್ ಹೇಳಿದ್ದಾರೆ. ನಿನ್ನೆ ನಡೆದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮ, ಭಜರಂಗಿ 2 ಪ್ರೀ ರಿಲೀಸ್ ಕಾರ್ಯಕ್ರಮ ಹಾಗೂ ರಾಜಕುಮಾರ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಯಶ್ ಅಪ್ಪು ಅವರ ಕುರಿತು ಇದೇ ಸಾಲುಗಳನ್ನು ಹೇಳಿದ್ದರು.

ಹಬ್ಬಕ್ಕೆ ಯಶ್ ಮನೆಗೆ ಭೇಟಿ ನೀಡಿದ್ರು ಅಪ್ಪು
ಇನ್ನು ಅಪ್ಪು ಮನೆಗೆ ಯಶ್ ಹಾಗೂ ಯಶ್ ಮನೆಗೆ ಅಪ್ಪು ಹಲವಾರು ಬಾರಿ ಭೇಟಿ ನೀಡಿದ್ದಾರೆ. ಹಿಂದೆ ಹಬ್ಬವೊಂದರ ದಿನದಂದು ಇಬ್ಬರೂ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಿನವರೆಗೆ ವೇದಿಕೆ ಮೇಲೆ ಮಾತ್ರ ಒಟ್ಟಿಗೆ ಕಾಣಿಸಿಕೊಂಡು ತೆರೆಮರೆಯಲ್ಲಿ ಭೇಟಿಯಾಗುತ್ತಿದ್ದ ವಿಷಯವನ್ನು ಹೆಚ್ಚಾಗಿ ಬಹಿರಂಗಪಡಿಸದೇ ಇದ್ದ ಇಬ್ಬರ ಸೆಲ್ಫಿ ಕಂಡಿದ್ದ ಇಬ್ಬರ ಅಭಿಮಾನಿಗಳು 'ಓಹೋ ಇವರು ವೇದಿಕೆ ಮೇಲೆ ಮಾತ್ರವಲ್ಲ ನಿಜಜೀವನದಲ್ಲೂ ಅಣ್ತಮ್ಮಾಸ್' ಎಂದಿದ್ದರು.

ಚಿರಾಗ್, ನಂದಿನಿ, ಪುಷ್ಪ ಅವರ ಜತೆ ಫೋಟೊಗೆ ಅಪ್ಪು ಪೋಸ್
ಇನ್ನು ಯಶ್ ಮನೆಯವರೆಲ್ಲ ಅಪ್ಪು ಅಭಿಮಾನಿಗಳು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅದರಲ್ಲಿಯೂ ಯಶ್ ತಂಗಿ ನಂದಿನಿ ಅಪ್ಪು ಅವರ ಅಪ್ಪಟ ಅಭಿಮಾನಿ. ಯಶ್ ತಾಯಿ ಪುಷ್ಪ ಅವರು ಅಪ್ಪು ತನ್ನ ಮತ್ತೋರ್ವ ಮಗ ಎಂದು ಹೇಳಿಕೆ ನೀಡಿದ್ದರು. ಅಪ್ಪು ಯಶ್ ಮನೆಗೆ ಭೇಟಿ ನೀಡಿದಾಗ ಯಶ್ ತಾಯಿ ಪುಷ್ಪಾ ಅವರು ಅಪ್ಪು ಕೆನ್ನೆಗೆ ಮುತ್ತಿಟ್ಟು ಪ್ರೀತಿ ತೋರಿಸಿದ್ದ ಚಿತ್ರವು ವೈರಲ್ ಆಗಿತ್ತು. ಇನ್ನು ಹೆಚ್ಚಾಗಿ ಸಿನಿಮಂದಿ ಜತೆ ಕಾಣಿಸಿಕೊಳ್ಳದ ಯಶ್ ತಂಗಿ ನಂದಿನಿ ಅಪ್ಪು ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಮತ್ತು ನಂದಿನಿ ಮಗ ಚಿರಾಗ್ ಜತೆ ಸಹ ಅಪ್ಪು ಫೋಟೊವಿದೆ. ಹೀಗೆ ಯಶ್ ಅವರ ಇಡೀ ಕುಟುಂಬ ಪುನೀತ್ ಅವರಿಗೆ ಆಪ್ತರಾಗಿದ್ದರು.

ಕೆಜಿಎಫ್ ವೇದಿಕೆಯಲ್ಲೂ ಅಪ್ಪು ನೆನಪು
ಇನ್ನು ಕೆಜಿಎಫ್ ಚಾಪ್ಟರ್ 2 ಕಾರ್ಯಕ್ರಮದಲ್ಲಿಯೂ ಯಶ್ ಅಪ್ಪು ನೆನಪನ್ನು ಮೆಲುಕು ಹಾಕಿದ್ದರು. ಅಷ್ಟೇ ಅಲ್ಲದೆ ತಂಡ ಇಡೀ ಚಿತ್ರವನ್ನು ಅಪ್ಪು ಅವರಿಗೆ ಅರ್ಪಿಸಿತ್ತು. ಅದರಲ್ಲಿಯೂ ಕೆಜಿಎಫ್ 2 ಚಿತ್ರದ ಆರಂಭದಲ್ಲಿ ಬರುವ ಪುನೀತ್ ರಾಜಕುಮಾರ್ ಟ್ರಿಬ್ಯೂಟ್ ವಿಡಿಯೋ ಇಂದಿಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಸ್ಪೆಷಲ್ ಹಾಗೂ ಅಚ್ಚುಮೆಚ್ಚು.


Click it and Unblock the Notifications











