5 ತಿಂಗಳು ಉಳಿದಿದೆ, 5 ಚಿತ್ರಗಳ ನಡುವೆ ಕಾದಾಟ ನಡೆಯಲಿದೆ
Recommended Video

ಆಗಸ್ಟ್, ಸಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ಈ ವರ್ಷದಲ್ಲಿ ಇನ್ನು ಈ ಐದು ತಿಂಗಳುಗಳು ಬಾಕಿ ಇವೆ. ಈ ಐದು ತಿಂಗಳುಗಳು ಕನ್ನಡ ಚಿತ್ರರಂಗಕ್ಕೆ ಬಹಳ ಮುಖ್ಯವಾಗಿದೆ.
ಈ ವರ್ಷ ನಟ ಶಿವರಾಜ್ ಕುಮಾರ್ ತಮ್ಮ 'ಟಗರು' ಸಿನಿಮಾದ ಮೂಲಕ ಸೆಂಚುರಿ ಬಾರಿಸಿದ್ದಾರೆ. ಅದು ಬಿಟ್ಟರೆ ಬೇರೆ ಯಾವ ನಟರು ಇನ್ನೂ ತಮ್ಮ ಖಾತೆ ತೆರೆದಿಲ್ಲ. ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಯಶ್, ಉಪೇಂದ್ರ, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾ ಬಂದು ಅದೆಷ್ಟೋ ತಿಂಗಳುಗಳು ಕಳೆದಿವೆ.
2018ರ ಉಳಿದ ಐದು ತಿಂಗಳಿನಲ್ಲಿ ಐದು ದೊಡ್ಡ ಚಿತ್ರ ಚಿತ್ರಗಳ ನಡುವೆ ಪೈಪೋಟಿ ನಡೆಯಲಿದೆ. ಆ ಚಿತ್ರಗಳ ಪಟ್ಟಿ ಮುಂದಿದೆ ಓದಿ...

ದಿ ವಿಲನ್
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಾಕಷ್ಟು ಸುದ್ದಿ ಮಾಡುತ್ತಿರುವ ಸಿನಿಮಾ 'ದಿ ವಿಲನ್'. ಸಿನಿಮಾದ ಟೀಸರ್ ಹಾಗೂ ಹಾಡುಗಳು ಯೂ ಟ್ಯೂಬ್ ಸೂಪರ್ ಹಿಟ್ ಆಗಿದೆ. ದಿನೇ ದಿನೇ ಸಿನಿಮಾ ಹೈಪ್ ಹೆಚ್ಚಾಗುತ್ತಿದೆ. ಈ ಚಿತ್ರ ವರ ಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ರಿಲೀಸ್ ಆಗಲಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದಾರೆ.

ಕುರುಕ್ಷೇತ್ರ
'ಕುರುಕ್ಷೇತ್ರ' ದರ್ಶನ್ ನಟನೆಯ 50ನೇ ಸಿನಿಮಾ. ಈ ಚಿತ್ರ ದರ್ಶನ್ ಕೆರಿಯರ್ ಮಾತ್ರವಲ್ಲದೆ ಇಡೀ ಕನ್ನಡ ಚಿತ್ರರಂಗಕ್ಕೆ ಬಹಳ ಪ್ರಮುಖವಾಗಿದೆ. ಈ ಚಿತ್ರದ ಆಡಿಯೋ ಬಿಡುಗಡೆ ಮುಂದಿನ ತಿಂಗಳು ನಡೆಯಲಿದ್ದು, ಚಿತ್ರ ದೀಪಾವಳಿಗೆ ತೆರೆಗೆ ಬರುವ ಸಾಧ್ಯತೆ ಇದೆ. ಮುನಿರತ್ನ ನಿರ್ಮಾಣದ ಬಿಗ್ ಬಜೆಟ್ ಚಿತ್ರ ಇದಾಗಿದೆ.

ಅಂಬಿ ನಿಂಗೆ ವಯಸ್ಸಾಯ್ತೋ
ನಟ ಅಂಬರೀಶ್ ದಶಕಗಳ ನಂತರ ಮತ್ತೆ ಹೀರೋ ಆಗಿ ಅಬ್ಬರಿಸುತ್ತಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ 'ಅಂಬಿ ನಿಂಗೆ ವಯಸ್ಸಾಯ್ತೋ' ಕೂಡ ಒಂದಾಗಿದೆ. ಚಿತ್ರದ ಟೀಸರ್ ಈಗಾಗಲೇ ಹೊರ ಬಂದಿದೆ. ಹಾಡುಗಳು ಬಿಡುಗಡೆಯಾದ ನಂತರ ಸಿನಿಮಾ ಸಹ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಚಿತ್ರದಲ್ಲಿ ಸುದೀಪ್ ಕೂಡ ನಟಿಸಿದ್ದಾರೆ.

ನಟ ಸಾರ್ವಭೌಮ
ಕಳೆದ ವರ್ಷ 'ರಾಜಕುಮಾರ' ಹಾಗೂ 'ಅಂಜನೀಪುತ್ರ' ರೂಪದಲ್ಲಿ ದರ್ಶನ ನೀಡಿದ್ದ ಪುನೀತ್ ರಾಜ್‍ಕುಮಾರ್ ಈ ವರ್ಷ 'ನಟ ಸಾರ್ವಭೌಮ' ನಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಅಕ್ಟೋಬರ್ 5 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ದೇಶಕ ಪವನ್ ಒಡೆಯರ್ ಈಗಾಗಲೇ ತಿಳಿಸಿದ್ದಾರೆ. ಈ ವರ್ಷ ತೆರೆಗೆ ಬರುವ ಉಳಿದ ಸಿನಿಮಾಗಳಿಗೆ 'ನಟ ಸರ್ವಭೌಮ' ಒಳ್ಳೆಯ ಪೈಪೋಟಿ ನೀಡಲಿದೆ.

ಕೆ.ಜಿ.ಎಫ್
ಯಶ್ ಅಭಿಮಾನಿಗಳು ಎರಡು ವರ್ಷಗಳಿಂದ ಕಾಯುತ್ತಿರುವ ಸಿನಿಮಾ 'ಕೆ.ಜಿ.ಎಫ್'. ಈ ಚಿತ್ರದ ಟ್ರೇಲರ್ ಆಗಸ್ಟ್ ತಿಂಗಳಿನಲ್ಲಿ ಬರಲಿದೆ. ಡಿಸೆಂಬರ್ ಯಶ್ ಪಾಲಿಗೆ ಲಕ್ಕಿ ತಿಂಗಳಾಗಿದ್ದು, ಅದೇ ತಿಂಗಳು 'ಕೆಜಿಎಫ್' ಮೊದಲ ಭಾಗ ಬಿಡುಗಡೆ ಮಾಡುತ್ತಾರೆ ಎಂಬ ಮಾತಿದೆ. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದೆ.

ಉಳಿದ ನಿರೀಕ್ಷಿತ ಚಿತ್ರಗಳು
ಈ ಐದು ಸಿನಿಮಾಗಳ ಜೊತೆಗೆ ಉಪೇಂದ್ರ ನಟನೆಯ 'ಹೋಮ್ ಮಿನಿಸ್ಟರ್' ಹಾಗೂ ರಕ್ಷಿತ್ ಶೆಟ್ಟಿ ಅವರ 'ಅವನೇ ಶ್ರೀಮನ್ನಾರಾಯಣ' ಚಿತ್ರಗಳು ಸಹ ಇದೇ ವರ್ಷ ಬಿಡುಗಡೆಯಾಗಲಿವೆ. ಈ ವರ್ಷ ಸ್ಟಾರ್ ಗಳ ಸಿನಿಮಾ ಬಂದಿಲ್ಲ ಎಂದು ಕಾಯುತ್ತಿದ್ದ ಅಭಿಮಾಗಳಿಗೆ ಮುಂದಿನ ಐದು ತಿಂಗಳಿನಲ್ಲಿ ಒಂದರ ನಂತರ ಒಂದು ಸಿನಿಮಾಗಳು ತೆರೆಗೆ ಬರಲಿದೆ.


Click it and Unblock the Notifications











