ನಿರೀಕ್ಷಿಸಿದ ಮಟ್ಟ ತಲುಪಲಿಲ್ಲ 'ಧೂಮಂ'; ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಮುಂದಿನ ಚಿತ್ರಗಳ ಮೇಲೆ ಎಲ್ಲರ ಕಣ್ಣು
ಹೊಂಬಾಳೆ ಫಿಲ್ಮ್ಸ್.. ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೇ ಚಿತ್ರವನ್ನು ನಿರ್ಮಿಸುವ ಮೂಲಕ ಹುಟ್ಟಿಕೊಂಡ ಈ ಚಿತ್ರ ನಿರ್ಮಾಣ ಸಂಸ್ಥೆ ಸದ್ಯ ಭಾರತ ಚಿತ್ರರಂಗದ ದೈತ್ಯ ಪ್ರೊಡಕ್ಷನ್ ಹೌಸ್ ಆಗಿ ನಿಂತಿದೆ.
ಬಳಿಕ ಮಾಸ್ಟರ್‌ಪೀಸ್ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ರಾಜಕುಮಾರ ಚಿತ್ರದ ಮೂಲಕ ಇಂಡಸ್ಟ್ರಿ ಹಿಟ್ ಬಾರಿಸಿತು. ನಂತರ ಕೆಜಿಎಫ್ ಚಿತ್ರ ಸರಣಿ ಹಾಗೂ ಕಾಂತಾರ ಮೂಲಕ ದೇಶದಾದ್ಯಂತ ಹೆಸರನ್ನು ಮಾಡಿದ ಹೊಂಬಾಳೆ ಇದೀಗ ಪರಭಾಷಾ ಚಿತ್ರಗಳನ್ನೂ ಸಹ ನಿರ್ಮಿಸಲು ಮುಂದಾಗಿದೆ.

ತೆಲುಗಿನಲ್ಲಿ ಪ್ರಭಾಸ್ ನಟನೆಯ ಸಲಾರ್ ಚಿತ್ರವನ್ನು ನಿರ್ಮಿಸಿ ಬಿಡುಗಡೆ ದಿನಾಂಕವನ್ನೂ ಸಹ ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಧೂಮಂ ಚಿತ್ರವನ್ನು ನಿರ್ಮಿಸುವ ಮೂಲಕ ಮಾಲಿವುಡ್‌ಗೂ ಕಾಲಿಟ್ಟಿದೆ ಹಾಗೂ ಕೀರ್ತಿ ಸುರೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ರಘು ತಾತಾ ಎಂಬ ತಮಿಳು ಚಿತ್ರವನ್ನು ಘೋಷಿಸುವ ಮೂಲಕ ಕಾಲಿವುಡ್‌ಗೂ ಸಹ ಪದಾರ್ಪಣೆ ಮಾಡಿದೆ.
ಹೀಗೆ ಸೌತ್‌ನ ಎಲ್ಲಾ ಚಿತ್ರರಂಗಗಳಿಗೂ ಕಾಲಿಟ್ಟಿರುವ ಹೊಂಬಾಳೆ ಫಿಲ್ಮ್ಸ್ ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಮೂಲಕ ಭಾರತ ಬಾಕ್ಸ್ಆಫೀಸ್‌ನಲ್ಲಿ ಅಬ್ಬರಿಸಿದ ಬೆನ್ನಲ್ಲೇ ಈ ವರ್ಷ ಬಿಡುಗಡೆಗೊಳಿಸಿದ ಎರಡು ಚಿತ್ರಗಳಿಂದ ಅಷ್ಟೇನೂ ದೊಡ್ಡ ಗೆಲುವು ಕಾಣಲಾಗದೇ ತಣ್ಣಗಾಗಿದೆ. ಹೌದು, ಸಂತೋಷ್ ಆನಂದ್‌ರಾಮ್ ಹಾಗೂ ಜಗ್ಗೇಶ್ ಕಾಂಬಿನೇಶನ್‌ನಡಿಯಲ್ಲಿ ಬಂದ ರಾಘವೇಂದ್ರ ಸ್ಟೋರ್ಸ್ ಮತ್ತು ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಹಾಗೂ ಫಹಾದ್ ಫಾಸಿಲ್ ನಟನೆಯ ಧೂಮಂ ನಿರೀಕ್ಷೆಯ ಮಟ್ಟ ತಲುಪುವಲ್ಲಿ ಎಡವಿದೆ ಎಂದೇ ಹೇಳಬಹುದಾಗಿದೆ.
ರಾಘವೇಂದ್ರ ಸ್ಟೋರ್ಸ್ ಚಿತ್ರ ಸಾಧಾರಣಕ್ಕಿಂತ ಉತ್ತಮ ಚಿತ್ರ ಎನಿಸಿಕೊಂಡರೆ, ಧೂಮಂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೀಗೆ ಈ ವರ್ಷ ಬಿಡುಗಡೆಗೊಳಿಸಿದ ಎರಡೂ ಚಿತ್ರಗಳ ಮೂಲಕವೂ ದೊಡ್ಡ ಗೆಲುವು ಪಡೆಯದ ಹೊಂಬಾಳೆ ಫಿಲ್ಮ್ಸ್ ತನ್ನ ಕೈನಲ್ಲಿ ಇನ್ನೂ ದೊಡ್ಡ ಯೋಜನೆಗಳನ್ನು ಇಟ್ಟುಕೊಂಡು ಮತ್ತೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲು ಕಾಯುತ್ತಿದೆ. ಅಂತಹ ಚಿತ್ರಗಳ ಇಂಡಸ್ಟ್ರಿವಾರು ಪಟ್ಟಿ ಈ ಕೆಳಕಂಡಂತಿದೆ..
ಕನ್ನಡ ಚಿತ್ರಗಳು
* ಪ್ರಕಾಶ್ ನೀಲ್ ಕಥೆ ಬರೆದಿರುವ, ಡಾ ಸೂರಿ ನಿರ್ದೇಶವಿರುವ ಹಾಗೂ ಶ್ರೀ ಮುರಳಿ ನಟನೆಯ ಬಘೀರ
* ಸಂತೋಷ್ ಆನಂದ್‌ರಾಮ್ ನಿರ್ದೇಶನದ ಹಾಗೂ ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರ
* ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ 2
* ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟೊನಿ
ಮಲಯಾಳಂ
ನಿರ್ದೇಶಕ ಪವನ್ ಕುಮಾರ್ ಹಾಗೂ ಫಾಹದ್ ಫಾಸಿಲ್ ನಟನೆಯ 'ಧೂಮಂ' ಎಂಬ ಮಲಯಾಳಂ ಚಿತ್ರದ ಮೂಲಕ ಮಾಲಿವುಡ್ ಪ್ರವೇಶಿಸಿರುವ ಹೊಂಬಾಳೆ ಪೃಥ್ವಿರಾಜ್ ಸುಕುಮಾರನ್ ನಟನೆ ಹಾಗೂ ನಿರ್ದೇಶನದ 'ಟೈಸನ್' ಎಂಬ ಮಲಯಾಳಂ ಚಿತ್ರವನ್ನು ಘೋಷಿಸಿದೆ. ಮಲಯಾಳಂ ಚೊಚ್ಚಲ ಚಿತ್ರದಲ್ಲಿ ಎಡವಿರುವ ಹೊಂಬಾಳೆ ಟೈಸನ್ ಮೂಲಕ ಅಬ್ಬರಿಸಲು ಕಾಯುತ್ತಿದೆ.
ತಮಿಳು ಹಾಗೂ ತೆಲುಗು
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕನ್ನಡ ಚಿತ್ರಗಳನ್ನು ಹೊರತುಪಡಿಸಿ ಮೊದಲು ಘೋಷಿಸಿದ್ದು ತೆಲುಗು ಚಿತ್ರವನ್ನು. ಹೌದು, ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಶನ್‌ನ ಸಲಾರ್ ಚಿತ್ರವನ್ನು ಘೋಷಿಸಿದ ಹೊಂಬಾಳೆ ಫಿಲ್ಮ್ಸ್ ಟಾಲಿವುಡ್ ಪ್ರವೇಶ ಮಾಡಿತ್ತು. ಇನ್ನು ಇತ್ತೀಚೆಗಷ್ಟೆ ಕೀರ್ತಿ ಸುರೇಶ್ ನಟನೆಯ 'ರಘು ತಾತ' ಎಂಬ ತಮಿಳು ಚಿತ್ರವನ್ನು ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಸುಧಾ ಕೊಂಗರ ನಿರ್ದೇಶನದ ಚಿತ್ರವೊಂದಕ್ಕೂ ಬಂಡವಾಳ ಹೂಡಲಿದೆ.


Click it and Unblock the Notifications











