ರಾಜ್, ಅನಂತ್‌ನಾಗ್, ಶಂಕರ್ ನಾಗ್; ಮೂವರಿಗೂ ಕಾದಂಬರಿ ಆಧಾರಿತ ಚಿತ್ರ ಮಾಡಿದ್ರು ದೊರೈ - ಭಗವಾನ್!
ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಿಗ್ಗಜ ನಿರ್ದೇಶಕರ ಪಟ್ಟಿಯಲ್ಲಿ ಶಾಶ್ವತ ಸ್ಥಾನ ಪಡೆದಿರುವ ನಿರ್ದೇಶಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಇಬ್ಬರು ನಿರ್ದೇಶಕರೆಂದರೆ ಅದು ನಿರ್ದೇಶಕ ಎಸ್ ಕೆ ಭಗವಾನ್ ಹಾಗೂ ನಿರ್ದೇಶಕ ದೊರೈ. ಈ ಇಬ್ಬರು ಜಂಟಿಯಾಗಿ ಹಲವು ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದು, ಇಂದಿಗೂ ದೊರೈ - ಭಗವಾನ್ ಎಂಬುದು ಓರ್ವ ವ್ಯಕ್ತಿಯ ಹೆಸರೇ ಎಂದುಕೊಂಡಿರುವ ಹಾಗೂ ಈ ಹಿಂದೆ ಇದೇ ರೀತಿ ಎಂದುಕೊಂಡಿದ್ದ ಜನರ ಸಂಖ್ಯೆ ಹೆಚ್ಚಿದೆ.
ಹೀಗೆ ಹಲವರು ದೊರೈ ಭಗವಾನ್ ಎಂದರೆ ಓರ್ವ ವ್ಯಕ್ತಿಯೇ ಎಂದು ತಿಳಿದುಕೊಳ್ಳುವ ಮಟ್ಟಿಗೆ ಸಾಲು ಸಾಲು ಚಿತ್ರಗಳನ್ನು ಒಟ್ಟಿಗೆ ನಿರ್ದೇಶಿಸಿ, ನಿರ್ಮಿಸಿದ್ದಾರೆ ಈ ದಿಗ್ಗಜರು. ಇನ್ನು ದೊರೈ ಹಾಗೂ ಭಗವಾನ್ ಇಷ್ಟರ ಮಟ್ಟಿಗೆ ಜತೆಯಾಗಿ ಕೆಲಸ ನಿರ್ವಹಿಸಿ ಕೊನೆಯ ದಿನಗಳವರೆಗೂ ಸಹ ಒಮ್ಮೆಯೂ ಬೇರೆ ಬೇರೆಯಾಗದೇ ಯಶಸ್ವಿಯಾಗಿ ಚಿತ್ರರಂಗದಲ್ಲಿ ಗೆಲ್ಲು ಕಾರಣ ಇಬ್ಬರ ನಡುವಿನ ಸ್ನೇಹ.
ಹೌದು, ದೊರೈ ಹಾಗೂ ಭಗವಾನ್ ಸುಮಾರು 27ಕ್ಕೂ ಹೆಚ್ಚಿನ ಚಿತ್ರಗಳನ್ನು ಒಟ್ಟಿಗೆ ನಿರ್ದೇಶಿಸಿ ಗೆದ್ದಿದ್ದು, ಇಬ್ಬರ ನಡುವೆ ಇದ್ದ ಬೇರ್ಪಡಿಸಲಾಗದ ಸ್ನೇಹದಿಂದ. ಹೀಗೆಂದ ಮಾತ್ರಕ್ಕೆ ಈ ಇಬ್ಬರೂ ಸಹ ಬಾಲ್ಯ ಸ್ನೇಹಿತರೇನಲ್ಲ. ಚಿತ್ರರಂಗಕ್ಕೆ ಬಂದ ನಂತರವೇ ಇಬ್ಬರ ಪರಿಚಯವಾಗಿತ್ತು. ಚಿತ್ರರಂಗ ದೊಡ್ಡದಿದ್ದು, ಹಲವಾರು ಮಂದಿ ಪರಸ್ಪರ ಭೇಟಿಯಾಗಿ ಸ್ನೇಹಿತರಾಗುತ್ತಾರೆಯಾದರೂ ಹಣಕಾಸಿನ ಹೊಳೆ ಹೆಚ್ಚಿರುವ ಇಂತಹ ಕ್ಷೇತ್ರದಲ್ಲಿ ಮನಸ್ತಾಪಕ್ಕೆ ಎಡೆ ಮಾಡಿಕೊಡದೇ ಆ ಸ್ನೇಹವನ್ನು ಅದೇ ರೀತಿ ಗಟ್ಟಿಯಾಗಿ ಉಳಿಸಿಕೊಳ್ಳುವುದು ಸಾಮಾನ್ಯದ ಕೆಲಸವಲ್ಲ. ಆದರೆ ದೊರೈ ಹಾಗೂ ಭಗವಾನ್ ತಮ್ಮ ಸ್ನೇಹವನ್ನು ಕೊನೆಯವರೆಗೂ ಯಶಸ್ವಿಯಾಗಿ ಉಳಿಸಿಕೊಂಡರು. ಇಷ್ಟರ ಮಟ್ಟಿಗೆ ಅನ್ಯೋನ್ಯವಾಗಿದ್ದ ಈ ಇಬ್ಬರ ಸ್ನೇಹ ಹುಟ್ಟಿದ್ದೇಗೆ ಎಂಬುದನ್ನು ಸ್ವತಃ ನಿರ್ದೇಶಕ ಎಸ್ ಕೆ ಭಗವಾನ್ ತಿಳಿಸಿದ್ದಾರೆ. ಸದ್ಯ ಇಂದು ( ಫೆಬ್ರವರಿ 20 ) ನಿರ್ದೇಶಕ ಎಸ್ ಕೆ ಭಗವಾನ್ ನಿಧನ ಹೊಂದಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ಈ ಸಂದರ್ಭಲ್ಲಿ ಎಸ್ ಕೆ ಭಗವಾನ್ ನಡೆದು ಬಂದ ಹಾದಿ ಹಾಗೂ ದೊರೈ ಜತೆಗಿನ ಸ್ನೇಹದ ಕುರಿತು ಹೆಚ್ಚು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ದೊರೈ - ಭಗವಾನ್ ನಿರ್ದೇಶಿಸಿದ್ದ ಕಾದಂಬರಿ ಆಧಾರಿತ ಚಿತ್ರಗಳಾವುವು ಹಾಗೂ ಇಬ್ಬರ ಸ್ನೇಹ ಗಟ್ಟಿಯಾಗಲು ಕಾರಣವೇನೆಂಬುದರ ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಈ ಕುರಿತ ಮಾಹಿತಿ ಈ ಕೆಳಕಂಡಂತಿದೆ..

ಕಾದಂಬರಿ ಆಧಾರಿತ ಚಿತ್ರ ಮಾಡಿ ಗೆದ್ದ ಜೋಡಿ
ಮೊದಲಿಗೆ ಜೇಡರ ಬಲೆ ಹಾಗೂ ಗೋವಾದಲ್ಲಿ ಸಿಐಡಿ 999 ರೀತಿಯ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾಗಳನ್ನು ಡಾ ರಾಜ್‌ಕುಮಾರ್‌ಗೆ ನಿರ್ದೇಶಿಸಿ ಗೆದ್ದಿದ್ದ ದೊರೈ - ಭಗವಾನ್ ಬಳಿಕ ಕಸ್ತೂರಿ ನಿವಾಸ ಹಾಗೂ ಪ್ರತಿಧ್ವನಿ ರೀತಿಯ ಸ್ವಂತ ಕಥೆಯುಳ್ಳ ಕಮರ್ಷಿಯಲ್ ಚಿತ್ರಗಳಿಗೂ ಸಹ ಆಕ್ಷನ್ ಕಟ್ ಹೇಳಿದ್ರು. ಇದಾದ ಬಳಿಕ 1974ರಲ್ಲಿ ಮೊದಲ ಬಾರಿಗೆ ಈ ಜೋಡಿ ಕಾದಂಬರಿ ಆಧಾರಿತ ಚಿತ್ರ ನಿರ್ದೇಶಿಸಲು ಕೈ ಹಾಕಿತು. ಖ್ಯಾತ ಲೇಖಕಿ ವಾಣಿ ಬರೆದಿದ್ದ ಎರಡು ಕನಸು ಎಂಬ ಕಾದಂಬರಿಯನ್ನು ಆಧರಿಸಿ ಎರಡು ಕನಸು ಎಂಬ ಚಿತ್ರವನ್ನು ನಿರ್ದೇಶನ ಮಾಡಿದ ದೊರೈ ಹಾಗೂ ಭಗವಾನ್ ಜೋಡಿ ದಿಗ್ವಿಜಯ ಸಾಧಿಸಿತ್ತು. ಹೀಗೆ ಮೊದಲ ಪ್ರಯತ್ನದಲ್ಲೇ ಗೆದ್ದ ಈ ಜೋಡಿ ನಂತರದ ದಿನಗಳಲ್ಲಿ ಅನೇಕ ಕಾದಂಬರಿ ಆಧಾರಿತ ಸಿನಿಮಾಗಳನ್ನು ನಿರ್ದೇಶಿಸಿತು.

ಕಾದಂಬರಿ ಆಧಾರಿತ ಸಿನಿಮಾಗಳ ಪಟ್ಟಿ
ವರನಟ ಡಾ ರಾಜ್‌ಕುಮಾರ್ ನಟನೆಯ ಎರಡು ಕನಸು ಚಿತ್ರವು ವಾಣಿ ಬರೆದ ಕಾದಂಬರಿ ಆಧಾರಿತವಾಗಿದ್ದರೆ, ನಂತರ ತೆರೆಕಂಡ ಗಿರಿ ಕನ್ಯೆ ಭಾರತಿಸುತ ಬರೆದ ಕಾದಂಬರಿ ಆಧಾರಿತ ಚಿತ್ರವಾಗಿತ್ತು. ಇನ್ನುಳಿದಂತೆ ಹೊಸ ಬೆಳಕು ಸಹ ವಾಣಿ ಕಾದಂಬರಿ ಆಧಾರಿತ ಸಿನಿಮಾವಾದರೆ, ಸಮಯದ ಗೊಂಬೆ ಚಿತ್ರಲೇಖ ಬರೆದ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಜೀವನ ಚೈತ್ರ ಸಿನಿಮಾ ಸಹ ವಿಶಾಲಕ್ಷಿ ದಕ್ಷಿಣ ಮೂರ್ತಿ ರಚಿಸಿದ ಕಾದಂಬರಿ ಆಧಾರಿತ ಸಿನಿಮಾ. ನಟ ಅನಂತ್ ನಾಗ್‌ಗೆ ದೊರೈ - ಭಗವಾನ್ ಜೋಡಿ ನಿರ್ದೇಶಿಸಿದ ಬಯಲು ದಾರಿ ಸಿನಿಮಾ ಭಾರತಿ ಸುತ ರಚಿಸಿದ ಕಾದಂಬರಿ ಆಧಾರಿತ ಚಿತ್ರವಾದರೆ, ಚಂದನದ ಗೊಂಬೆ, ಬಿಡುಗಡೆಯ ಬೇಡಿ ಹಾಗೂ ಬೆಂಕಿಯ ಬಲೆ ಚಿತ್ರಗಳು ತ.ರಾ.ಸು ರಚಿಸಿದ ಕಾದಂಬರಿ ಆಧಾರಿತ ಸಿನಿಮಾಗಳಾಗಿವೆ. ಸೇಡಿನ ಹಕ್ಕಿ ಚಿತ್ರ ಟಿಕೆ ರಾಮರಾವ್ ರಚಿಸಿದ ಕಾದಂಬರಿ ಆಧಾರಿತ ಚಿತ್ರವಾದರೆ, ಗಗನ ಎನ್ ಪಂಕಜ ರಚಿಸಿದ ಕಾದಂಬರಿ ಆಧಾರಿತ ಸಿನಿಮಾ. ಇನ್ನು ಶಂಕರ್‌ನಾಗ್‌ಗೆ ನಿರ್ದೇಶನ ಮಾಡಿದ್ದ ಮುನಿಯನ ಮಾದರಿ ಕೂಡ ಅಶ್ವತ್ಥ ಬರೆದ ಕಾದಂಬರಿ ಆಧಾರಿತವೇ..

ಸ್ನೇಹ ಗಟ್ಟಿಗೊಳಿಸಿತ್ತು ಎಂಟಾಣಿ!
ಇನ್ನು ಮೊದಲಿಗೆ ಭಾಗ್ಯೋದಯ ಚಿತ್ರದಲ್ಲಿ ನಿರ್ದೇಶಕ ಕಣಗಲ್ ಪ್ರಭಾಕರ್ ಶಾಸ್ತ್ರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದ ಭಗವಾನ್ ಅವರಿಗೂ ಹಾಗೂ ಆಗ ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದ ದೊರೈ ಅವರಿಗೂ ಪರಿಚಯವಿತ್ತು. ಆದರೆ ವೀರಪುತ್ರ ಎಂಬ ಚಿತ್ರದ ಚಿತ್ರೀಕರಣ ಅರ್ಧಕ್ಕೆ ನಿಂತ ಕಾರಣ ಭಗವಾನ್ ಅವರಿಗೆ ಸಂಬಳವಾಗದೇ ದುಡ್ಡಿಲ್ಲದೇ ಎರಡು ದಿನಗಳ ಕಾಲ ಉಪವಾಸ ಮಾಡಿದ್ರು. ಈ ಸಂದರ್ಭದಲ್ಲಿ ದೊರೈ ಅವರನ್ನು ಭೇಟಿಯಾದ ಭಗವಾನ್ ತಿಂಡಿಗೆ ದುಡ್ಡಿದ್ದರೆ ಕೊಡು ಎಂಬುದಾಗಿ ಕೇಳಿದ್ದರು. ಇದನ್ನು ಕೇಳಿದ ದೊರೈ ಎಂಟಾಣಿಯನ್ನು ( ಐವತ್ತು ಪೈಸೆ ) ಭಗವಾನ್ ಅವರ ಕೈಗೆ ಇಟ್ಟು ಅಲ್ಲಿಂದ ಹೊರಟು ಹೋಗಿದ್ದರು. ಈ ಐವತ್ತು ಪೈಸೆಯನ್ನು ದೊರೈ ತನಗೆ ಊಟಕ್ಕಿಲ್ಲ ಎಂದು ಬೇರೆಯವರ ಬಳಿ ಸಾಲ ಮಾಡಿ ತಂದಿದ್ದರು. ನಾನು ನಿನ್ನೆ ಊಟ ಮಾಡಿದ್ದೇನೆ, ಆದರೆ ಭಗವಾನ್ ಎರಡು ದಿನಗಳಿಂದ ಏನೂ ತಿಂದಿಲ್ಲ, ಹೀಗಾಗಿ ನನಗಿಂತ ಭಗವಾನ್‌ಗೆ ಈ ಕಾಸಿನ ಅವಶ್ಯಕತೆ ಎಂದು ಮನಗಂಡ ದೊರೈ ತನ್ನ ಬಳಿ ಇದ್ದ ಆ ಐವತ್ತು ಪೈಸೆಯನ್ನು ಭಗವಾನ್‌ಗೆ ಕೊಟ್ಟು ಹೋಗಿದ್ದರು. ಹೀಗೆ ತಾನು ಹಸಿವಿನಲ್ಲಿ ಇದ್ದರೂ ಪರರಿಗೆ ಉಪಕಾರವಾಗಲಿ ಎಂದು ತ್ಯಾಗ ಮಾಡುವವನ ಮೇಲೆ ಅಂದು ಅಪಾರವಾದ ಪ್ರೀತಿ ಹುಟ್ಟಿಕೊಂಡಿತು ಹಾಗೂ ಇಬ್ಬರ ನಡುವೆ ಎಂದೂ ಮುರಿಯಲಾಗದ ಸ್ನೇಹ ಶುರುವಾಯಿತು ಎಂದು ಎಸ್ ಕೆ ಭಗವಾನ್ ತಿಳಿಸಿದ್ದಾರೆ.


Click it and Unblock the Notifications











