ಇನ್ಸ್ಪೆಕ್ಟರ್ ವಿಕ್ರಮ್ 2, ಟಗರು 2; ಹುಟ್ಟುಹಬ್ಬದಂದು ಘೋಷಣೆಯಾದ ಶಿವಣ್ಣನ ಹೊಸ ಸಿನಿಮಾಗಳಿವು!
ಇಂದು ( ಜುಲೈ 12 ) ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬ. ಮ್ಯಾನ್ ಆಫ್ ಮಾಸಸ್, ಹ್ಯಾಟ್ರಿಕ್ ಹೀರೊ ಎಂಬ ಹಲವಾರು ಬಿರುದುಗಳಿಂದ ಕರೆಯಲ್ಪಡುವ ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಮಧ್ಯರಾತ್ರಿ 12 ಗಂಟೆಗೆ ಆಚರಿಸಿದರು.
ಶಿವಣ್ಣನ ಮನೆಗೆ ಹಾರ, ಕೇಕ್ ತೆಗೆದುಕೊಂಡು ಹೋಗಿ, ಜೈಕಾರ ಕೂಗಿ, ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು. ಒಂದೆಡೆ ಅಭಿಮಾನಿಗಳು ಶಿವಣ್ಣನ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರೆ, ಮತ್ತೊಂದೆಡೆ ಘೋಸ್ಟ್ ಚಿತ್ರತಂಡ ಶಿವಣ್ಣನ ಬಿಗ್ ಡ್ಯಾಡಿ ಅವತಾರವನ್ನು ಟೀಸರ್ ಮೂಲಕ ರಿವೀಲ್ ಮಾಡಿದೆ.

ಹೌದು, ಇಂದು ಬೆಳಗ್ಗೆ 11.45ಕ್ಕೆ ಟಿ ಸಿರೀಸ್ ಕನ್ನಡ ಯುಟ್ಯೂಬ್ ಚಾನೆಲ್‌ನಲ್ಲಿ ಘೋಸ್ಟ್ ಚಿತ್ರದ ಬಿಗ್ ಡ್ಯಾಡಿ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದಿನಿಂದಲೂ ಶಿವಣ್ಣನ ಹುಟ್ಟುಹಬ್ಬಕ್ಕೆ ಬಿಗ್ ಡ್ಯಾಡಿಯನ್ನು ರಿವೀಲ್ ಮಾಡುತ್ತೇವೆ ಎಂದು ಹೇಳಿದ್ದ ನಿರ್ದೇಶಕ ಶ್ರೀನಿ ಶಿವಣ್ಣನ ಮಾಸ್ ಅವತಾರವನ್ನು ಬಿಚ್ಚಿಟ್ಟಿದ್ದಾರೆ.
ಈ ಘೋಸ್ಟ್ ಲುಕ್‌ಗೆ ಫಿದಾ ಆದ ಸಿನಿ ರಸಿಕರು ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೊ ನಟಿಸಲಿರುವ ಮುಂದಿನ ಚಿತ್ರದ ಪೋಸ್ಟರ್‌ಗಳು ಮತ್ತಷ್ಟು ಕಿಕ್ ಕೊಟ್ಟಿವೆ. ಅದರಲ್ಲಿಯೂ 1989ರಲ್ಲಿ ಬಿಡುಗಡೆಗೊಂಡಿದ್ದ ಸೂಪರ್ ಹಿಟ್ ಚಲನಚಿತ್ರ ಇನ್ಸ್ಪೆಕ್ಟರ್ ವಿಕ್ರಮ್‌ನ ಸೀಕ್ವೆಲ್ ಅನ್ನು ಈಗ ನಿರ್ಮಿಸಲು ತಂಡವೊಂದು ಮುಂದಾಗಿದ್ದು, ಇನ್ಸ್ಪೆಕ್ಟರ್ ವಿಕ್ರಮ್ ರಿಟರ್ನ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ಈ ಚಿತ್ರವನ್ನು ಘೋಷಿಸಿದೆ.
ಇದರ ಜತೆಗೆ 2017ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಆಗಿದ್ದ ಟಗರು ಚಿತ್ರದ ಸೀಕ್ವೆಲ್ ಸಹ ಘೋಷಣೆಗೊಂಡಿದೆ. ಹೌದು, ಲಹರಿ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಗರು ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟರ್ ಮೇಲೆ 'ಅಟೆನ್ಷನ್ ಹೀ ಈಸ್ ಕಮಿಂಗ್ ಬ್ಯಾಕ್' ಎಂದು ಬರೆದುಕೊಂಡಿದೆ.
ಈ ಮೂಲಕ ಟಗರು ಎರಡನೇ ಭಾಗ ಬಿಡುಗಡೆಯಾಗಲಿದೆಯಾ ಎಂಬ ಕುತೂಹಲ ಹಾಗೂ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೇ ಲಹರಿ ಫಿಲ್ಮ್ಸ್ ಈ ಅಪ್‌ಡೇಟ್ ಏನಿರಬಹುದು ಊಹಿಸುತ್ತಿರಿ ಎಂದು ಸಿನಿ ರಸಿಕರು ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಇವುಗಳ ಜತೆಗೆ ಧೀರ ಚಿತ್ರ ಸಹ ಘೋಷಣೆಗೊಂಡಿದ್ದು, ನಿರ್ದೇಶಕರಾದ ಕಾರ್ತಿಕ್, ಬಾಹುಬಲಿ, ರಾಮ್ ಧುಲಿಪುಲಿ, ಕೊಟ್ರೇಶ್ ಹಾಗೂ ರವಿಕುಮಾರ್ ಜತೆ ಸಹ ಶಿವರಾಜ್‌ಕುಮಾರ್ ನಟಿಸಲಿರುವ ಚಿತ್ರಗಳ ಪೋಸ್ಟರ್ ಬಿಡುಗಡೆಗೊಂಡಿವೆ. ಈ ಯಾವ ಚಿತ್ರಗಳಿಗೂ ಸಹ ಶೀರ್ಷಿಕೆ ಇನ್ನೂ ಇಡಲಾಗಿಲ್ಲ. ಅತ್ತ ಈ ಹಿಂದೆಯೇ ಘೋಷಣೆಗೊಂಡಿದ್ದ ಶಿವಣ್ಣ ನಟಿಸಲಿರುವ ಚಿತ್ರಗಳಾದ ಕರಟಕ ದಮನಕ, ಭೈರತಿ ರಣಗಲ್ ಹಾಗೂ 45 ಚಿತ್ರಗಳೂ ಸಹ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ.
ಶಿವರಾಜ್‌ಕುಮಾರ್ - ಗಣೇಶ್ ಕೊಂಬೊ: ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಚಿತ್ರಕ್ಕೆ ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಲಿದ್ದು, ಎಂ ಬಿ ಬಾಬು ಬಂಡವಾಳ ಹೂಡಲಿದ್ದಾರೆ. ಈ ಚಿತ್ರತಂಡ ಸಹ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.
ಶಿವರಾಜ್‌ಕುಮಾರ್ - ಅಜಯ್ ರಾವ್ ಕೊಂಬೊ: ಶಿವರಾಜ್‌ಕುಮಾರ್ ಹಾಗೂ ಅಜೇಯ್ ರಾವ್ ಸಹ ಒಂದು ಮಲ್ಟಿಸ್ಟಾರರ್ ಚಿತ್ರಕ್ಕಾಗಿ ಒಂದಾಗುತ್ತಿದ್ದು, ಈ ಚಿತ್ರಕ್ಕೆ ಕಿರಣ್ ಎಂಬುವವರು ಬಂಡವಾಳ ಹೂಡಲು ಮುಂದಾಗಿದ್ದು, ಬಾಹುಬಲಿ ಎಸ್ ಕೆ ಆಕ್ಷನ್ ಕಟ್ ಹೇಳಲಿದ್ದಾರೆ.


Click it and Unblock the Notifications











