ಕೆಜಿಎಫ್ ಬಿಗ್ ಸಕ್ಸಸ್‌ನಿಂದಾಗಿ ನಿಂತುಹೋದ್ವು ಯಶ್ ನಟಿಸಬೇಕಿದ್ದ ಈ ಚಿತ್ರಗಳು!
ಕೆಜಿಎಫ್.. ಕನ್ನಡ ಚಲಚಿಗತ್ರರಂಗದ ಪಥ ಬದಲಿಸಿದ ಚಿತ್ರ. ಕನ್ನಡ ಚಿತ್ರರಂಗಕ್ಕೆ ಈ ಹಿಂದೆ ಇದ್ದ ಹೆಸರನ್ನು ಮರಳಿ ತಂದುಕೊಟ್ಟ ಚಿನ್ನದಂತಹ ಚಿತ್ರ. ಇತರೆ ಇಂಡಸ್ಟ್ರಿಗಳು ಕನ್ನಡ ಚಿತ್ರರಂಗದತ್ತ ನೋಡುತ್ತಿದ್ದ ದೃಷ್ಟಿಕೋನವನ್ನು ಬದಲಿಸಿದಂತಹ ಸಿನಿಮಾ. ಅಂದು ಯಶ್ ಹಾಗೂ ಪ್ರಶಾಂತ್ ನೀಲ್ ಸೇರಿ ಕೆಜಿಎಫ್ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಘೋಷಣೆ ಮಾಡಿದಾಗ ಇದೊಂದು ಮಾಸ್ ಬ್ಲಾಕ್‌ಬಸ್ಟರ್ ಆಗಬಹುದು ಎಂದು ಊಹಿಸಿದ್ದವರೇ ಹೆಚ್ಚು.
ಆದರೆ ಯಶ್ ಹಾಗೂ ಪ್ರಶಾಂತ್ ನೀಲ್ ದೂರದೃಷ್ಟಿ ಮತ್ತು ತಂಡದ ಶ್ರಮದಿಂದ ಚಿತ್ರ ಭಾರತ ಸಿನಿಮಾರಂಗದ ಇತಿಹಾಸದಲ್ಲಿ ಮೈಲಿಗಲ್ಲಾಗಿ ನೆಲೆಯೂರಿತು. ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ಯಶ್ ಕಂಡ ಕನಸು, ಅದನ್ನು ಹೊಂಬಾಳೆ ಫಿಲ್ಮ್ಸ್ ದೇಶದಾದ್ಯಂತ ತಲುಪಿಸಿ ನನಸು ಮಾಡಿತ್ತು. ಅಬ್ಬಾ ಕನ್ನಡ ಸಿನಿಮಾ ಯಾರಿಗೂ ಸಹ ಕಡಿಮೆ ಇಲ್ಲ ಎಂದು ಜನ ಮಾತಾನಾಡಿಕೊಳ್ಳುವ ಹಾಗೆ ಈ ಚಿತ್ರ ಮಾಡಿತ್ತು.

ಮೊದಲಿಗೆ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಕೆಜಿಎಫ್ ಚಾಪ್ಟರ್ 1 ಸಣ್ಣ ಹೆಜ್ಜೆಯನ್ನು ಇಟ್ಟು ಭರವಸೆ ಮೂಡಿಸಿದ್ರೆ ಕಳೆದ ವರ್ಷ ತೆರೆಗೆ ಬಂದ ಕೆಜಿಎಫ್ ಚಾಪ್ಟರ್ 2 ಐತಿಹಾಸಿಕ ಗೆಲುವನ್ನು ಕಂಡಿತು. ಹೊಂಬಾಳೆ ಫಿಲ್ಮ್ಸ್ ಬ್ರಾಂಡ್ ಆಯಿತು. ಯಶ್ ನ್ಯಾಷನಲ್ ಸ್ಟಾರ್ ಆದರು. ಪ್ರಶಾಂತ್ ನೀಲ್‌ಗೆ ಬೇರೆ ಬೇರೆ ಇಂಡಸ್ಟ್ರಿಗಳ ನಿರ್ಮಾಪಕರು ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರ ಮಾಡುವ ಆಫರ್ ನೀಡಿದರು. ಇನ್ನು ಕೆಜಿಎಫ್ ಚಿತ್ರ ಮಾಡಿದ ಸಾಧನೆಯಿಂದ ಪ್ರೇರೇಪಿತರಾದ ಕನ್ನಡ ಚಿತ್ರರಂಗದ ಇತರೆ ನಿರ್ದೇಶಕರು ಹಾಗೂ ನಟರು ತಾವೂ ಸಹ ಪ್ಯಾನ್ ಇಂಡಿಯಾ ಚಿತ್ರ ಮಾಡಲು ಮುಂದಾದರು.
ಹೀಗೆ ಕನ್ನಡ ಚಿತ್ರಗಳಿಗೂ ಭಾರತದ ಸಿನಿಮಾ ಮಾರುಕಟ್ಟೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದ ಬೇಡಿಕೆ ಇದೆ ಎಂಬುದನ್ನು ತೋರಿಸಿಕೊಟ್ಟ ಕೆಜಿಎಫ್ ಮೂವಿ ಸೀರಿಸ್ ಕನ್ನಡ ಚಿತ್ರರಂಗದ ಹೆಮ್ಮೆ ಹಾಗೂ ಪ್ರತಿಯೊಬ್ಬ ಕನ್ನಡ ಚಿತ್ರಪ್ರೇಮಿಯ ಹೆಮ್ಮೆ ಕೂಡ ಹೌದು. ಇನ್ನು ಕೆಜಿಎಫ್ ಸಿನಿಮಾಗಾಗಿ ಯಶ್ ಮೀಸಲಿಟ್ಟಿದ್ದು ಬರೋಬ್ಬರಿ ಆರರಿಂದ ಏಳು ವರ್ಷಗಳು. 2015ರಲ್ಲಿ ಘೋಷಣೆಯಾದ ಈ ಸಿನಿಮಾದಲ್ಲಿ ನಿರತರಾದ ಯಶ್ ನಟನೆಯ ಕೊನೆಯ ಕಮರ್ಷಿಯಲ್ ಚಿತ್ರ ಬಿಡುಗಡೆಯಾಗಿದ್ದು 2016ರಲ್ಲಿ.

ಹೌದು, 2016ರಲ್ಲಿ ಬಿಡುಗಡೆಯಾಗಿದ್ದ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾ ಬಳಿಕ ಕೆಜಿಎಫ್ ಮೂವಿ ಸೀರಿಸ್ ಹೊರತುಪಡಿಸಿ ಯಶ್ ನಟನೆಯ ಇತರೆ ಯಾವ ಚಿತ್ರಗಳೂ ಸಹ ಬಿಡುಗಡೆಗೊಂಡಿಲ್ಲ. ಒಂದುವೇಳೆ ಕೆಜಿಎಫ್ ಚಿತ್ರ ಘೋಷಣೆಯಾಗದೇ ಇದ್ದಿದ್ದರೆ ಅಥವಾ ಕೆಜಿಎಫ್ ಅನ್ನು ಕೇವಲ ಒಂದೇ ಚಿತ್ರದಲ್ಲಿ ಮಾಡಿ ಮುಗಿಸಿದ್ದರೆ ಯಶ್ ನಟನೆಯ ಯಾವ ಚಿತ್ರಗಳು ಬಿಡುಗಡೆಯಾಗುತ್ತಿದ್ದವು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಕೆಜಿಎಫ್ ಜರುಗದೇ ಇದ್ದಿದ್ದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಎ ಹರ್ಷ ಕಾಂಬಿನೇಶನ್‌ನಲ್ಲಿ ರಾಣಾ ಎಂಬ ಚಿತ್ರ ಈಗಾಗಲೇ ತೆರೆಗೆ ಬಂದಿರುತ್ತಿತ್ತು. ಸಂತು ಸ್ಟ್ರೈಟ್ ಫಾರ್ವರ್ಡ್ ಬಳಿಕ ಯಶ್ ನಟಿಸಲಿರುವ ಚಿತ್ರ ಇದೇ ಎಂಬ ಸುದ್ದಿಗಳೂ ಸಹ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದವು.
ಇದಾದ ಬಳಿಕ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ಹಾಗೂ ಜಯಣ ಕಂಬೈನ್ಸ್ ನಿರ್ಮಾಣದ ಅಡಿಯಲ್ಲಿ ತಯಾರಾಗಲಿದ್ದ ಕಿರಾತಕ 2 ಎಂಬ ಚಿತ್ರದಲ್ಲಿ ಯಶ್ ನಟಿಸಬೇಕಿತ್ತು. ಈ ಚಿತ್ರಕ್ಕಾಗಿ ಯಶ್ ಹಣವನ್ನೂ ಸಹ ಪಡೆದಿದ್ರು ಎಂಬ ಸುದ್ದಿ ಇತ್ತು. ಅಲ್ಲದೇ ಚಿತ್ರದ ಫೋಟೊಶೂಟ್ ಸಹ ನಡೆದಿತ್ತು.
ಈ ಎರಡು ಚಿತ್ರಗಳು ಮಾತ್ರವಲ್ಲದೇ ಕೆಜಿಎಫ್ ಇಲ್ಲದಿದ್ದರೆ ಇಂಡಸ್ಟ್ರಿ ಹಿಟ್ ಕಾಂಬಿನೇಶನ್ ಸಂತೋಷ್ ಆನಂದ್‌ರಾಮ್ ಹಾಗೂ ಯಶ್ ಮತ್ತೊಂದು ಚಿತ್ರ ಮಾಡುತ್ತಿದ್ದಂತೂ ಪಕ್ಕಾ. ರಾಮಾಚಾರಿ ರೀತಿಯ ಇಂಡಸ್ಟ್ರಿ ಹಿಟ್ ನೀಡಿದ್ದ ಈ ಜೋಡಿ ಇಷ್ಟೊತ್ತಿಗೆ ಮತ್ತೊಮ್ಮೆ ಕೈ ಜೋಡಿಸಿ ಬ್ಲಾಕ್‌ಬಸ್ಟರ್ ಬಾರಿಸಿರುತ್ತಿತ್ತು. ಒಟ್ಟಿನಲ್ಲಿ ಕೆಜಿಎಫ್ ಚಿತ್ರದಿಂದಾಗಿ ಕನ್ನಡ ಚಲನಚಿತ್ರರಂಗ ಉನ್ನತ ಮಟ್ಟಕ್ಕೆ ಏರಿದ್ದರೆ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮಾತ್ರ ವಿಂಟೇಜ್ ಯಶ್ ಸಿನಿಮಾಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಸದ್ಯ ಎಲ್ಲರ ಚಿತ್ತ ಯಶ್ ಮುಂದೆ ಯಾವ ಚಿತ್ರವನ್ನು ಆರಿಸಿಕೊಳ್ಳಲಿದ್ದಾರೆ ಎನ್ನುವುದರ ಮೇಲಿದ್ದು ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ, ಕಥೆ ಯಾವ ರೀತಿ ಇರಲಿದೆ ಎಂಬ ಕುತೂಹಲ ಕೆರಳಿದೆ.


Click it and Unblock the Notifications











