ಮತದಾನದ ನಂತರ ಸರ್ವಾಧಿಕಾರದ ಬಗ್ಗೆ ಮಾತನಾಡಿದ್ದೇಕೆ ಉಪೇಂದ್ರ ?
ಚಿತ್ರರಂಗ ಮತ್ತು ರಾಜಕೀಯ ಎರಡು ದೋಣಿಯ ನಾವಿಕ ರಿಯಲ್ ಸ್ಟಾರ್ ಉಪೇಂದ್ರ. ತಮ್ಮ ಚಿತ್ರಗಳ ಜೊತೆ ಜೊತೆಯಲ್ಲಿ ತಮ್ಮ ಮಾತು ಮತ್ತು ಚಿಂತನೆ ಮೂಲಕ, ರಾಜಕೀಯದ ಪಡಸಾಲೆಯಲ್ಲಿಯೂ ಆಗಾಗ ಸದ್ದು ಮಾಡುವ ಉಪೇಂದ್ರ ಅವರ ಸದ್ದು ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ತುಸು ಕಡಿಮೆಯೇ ಇದ್ದಿದ್ದು ಸುಳ್ಳಲ್ಲ. ಕಾರಣ ಏನೇ ಇರಲಿ.. ಸದ್ಯಕ್ಕೆ ಉಪೇಂದ್ರ ಮತದಾನ ಮಾಡಿದ್ದಾರೆ. ಈ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಮತದಾನದ ಮಹತ್ವದ ಜೊತೆ ಪ್ರಜಾಪ್ರಭುತ್ವದ ವ್ಯವಸ್ಥೆ-ಅವ್ಯವಸ್ಥೆ ಬಗ್ಗೆಯೂ ಮಾತನಾಡಿದ್ದಾರೆ.
ಹೌದು, ಅಸಲಿಗೆ ಎರಡು ದಿನ ಹಿಂದೆ, ಕಡ್ಡಾಯ ಮತದಾನ ಕಾನೂನು ಜಾರಿಗೆ ತರದೇ ಇರೋದು ಈ ದೇಶದ ದುರಂತ. ಪ್ರತಿಶತ 100 ಮತದಾನ ಆಗಬೇಕಾದರೆ ಕಡ್ಡಾಯ ಮತದಾನ ಕಾನೂನು ತರಬೇಕು ಎಂದು ಸಿದ್ದಗಂಗಾ ಶ್ರೀಗಳು ಆಗ್ರಹಿಸಿದ್ದರು. ಕೇವಲ ಇವರಷ್ಟೇ ಅಲ್ಲ, ಇನ್ನು ಅನೇಕರು ಕಡ್ಡಾಯ ಮತದಾನದ ಕುರಿತು ಮಾತನಾಡಿದ್ದರು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಇದೇ ಕಡ್ಡಾಯ ಮತದಾನದ ವಿಷಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಪ್ರಜಾಪ್ರಭುತ್ವವನ್ನ ಸರ್ವಾಧಿಕಾರದ ಕಪಿಮುಷ್ಠಿಯಿಂದ ರಕ್ಷಿಸಲು ಮತದಾನ ಬಹುಮುಖ್ಯ ಅಂದಿದ್ದಾರೆ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ ಎಂದಿರುವ ಉಪೇಂದ್ರ, ಕೆಲವರಲ್ಲಿ ಈ ವ್ಯವಸ್ಥೆಯೇ ಸರಿ ಇಲ್ಲ ಎಂಬ ಭಾವನೆ ಬರಬಹುದು, ಆ ಭಾವನೆಗಳಿಗೆ ನಾವು ಕೂಡ ಬೆಲೆ ಕೊಡಬೇಕು, ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಪ್ರಜಾಪ್ರಭುತ್ವ ಅಂದರೆ ಅದೇ ಅಲ್ಲವಾ ಅಂದಿದ್ದಾರೆ. ಇನ್ನೂ.. ಪ್ರಭುಗೆ ಹೋಗಿ ನೀನು ಹೀಗೆ ಮಾಡು, ಹಾಗೇ ಮಾಡು ಅಂದರೆ ಅದು ಪ್ರಜಾಪ್ರಭುತ್ವ ಅಲ್ಲ, ಸರ್ವಾಧಿಕಾರ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಉಪೇಂದ್ರ, ನೀವು ಖಂಡಿತಾ ಮತ ಹಾಕಲೇಬೇಕು ಎಂದು ಹೇಳಲು ಸಾಧ್ಯ ಇಲ್ಲ. ಆದರೆ ಮತ ಹಾಕಿದರೆ ತುಂಬ ಒಳ್ಳೆಯದು ಎಂದಿದ್ದಾರೆ. ಇವತ್ತು ಒಂದು ದಿನ ನಾವು-ನೀವೆಲ್ಲ ರಾಜರ ರೀತಿ ಫೀಲ್ ಮಾಡುವ ದಿನ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಪ್ರಭುಗಳು ಅಂತ ಅನಿಸುವುದೇ ಈ ಒಂದು ದಿನ. ಈ ಕಾರಣಕ್ಕೆ ಈ ಒಂದು ದಿನ ನಿರ್ಲಕ್ಷ್ಯ ಬೇಡ ಎಂದು ಕೂಡ ಹೇಳಿದ್ದಾರೆ ಉಪೇಂದ್ರ
ಇನ್ನೂ ಈ ಬಾರಿ ತುಂಬಾ ಜನ ಯುವಕರು ಬರುತ್ತಿದ್ದಾರೆ. ಎಲ್ಲರಿಗೂ ಭರವಸೆ ಬಂದಿದೆ. ಮತದಾನದ ಮಹತ್ವ ಎಲ್ಲರಿಗೂ ಗೊತ್ತಾಗುತ್ತಿದೆ ಎಂದಿರುವ ಉಪೇಂದ್ರ, ಇನ್ನೂ ಹೆಚ್ಚೆಚ್ಚು ಸಂಖ್ಯೆಯಲ್ಲಿ ಯುವಕ-ಯುವತಿಯರು ಬಂದು ಮತ ಚಲಾಯಿಸಬೇಕು ಎಂದಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಈ ಮೂಲಕ ಮಾಡಿದ್ದಾರೆ .

ಉಳಿದಂತೆ ಈ ಸುದಿನದ ಮಹತ್ವ ತುಂಬಾ ಬೇಗ ಎಲ್ಲರಿಗೂ ಅರ್ಥ ಆದರೆ ಒಳ್ಳೆಯದು ಎಂದಿರುವ ಬುದ್ದಿವಂತ ಒಂದು ದಿನ ರಜೆ ಇದೆ ಅಂತ ಎಂಜಾಯ್ ಮಾಡೋದಲ್ಲ. ಈ ಒಂದು ದಿನ ನೀವು ಈ ಸಮಯವನ್ನು ಮೀಸಲಿಡಲೇಬೇಕು. ಇನ್ನು ಮುಂದಿನ 5 ವರ್ಷಗಳ ಕಾಲ ನೀವು ನೆಮ್ಮದಿಯಾಗಿ ಇರಬೇಕು ಎಂದರೆ ಇಂದು ನೀವು ವಿಚಾರಗಳಿಗೆ ಮತ ಹಾಕಲೇಬೇಕು' ಎಂದು ಕೂಡ ಹೇಳಿದ್ದಾರೆ.


Click it and Unblock the Notifications











