ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಟ ಶಿವರಾಜ್‌ಕುಮಾರ್ ತಮ್ಮ ಪತ್ನಿ ಪರ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಸಿ ಪ್ರಚಾರದ ಕಾವು ಹೆಚ್ಚಿಸಿದ್ದಾರೆ.
ರಾಜಕೀಯ ಒಳ್ಳೆಯವರಿಗೆ ಅಲ್ಲ ಎಂದು ಕೆಲವರು ಹೇಳುತ್ತಿರುತ್ತಾರೆ. ರಾಜಕಾರಣ ಎಂದು ಬಂದಮೇಲೆ ಎಲ್ಲದ್ದಕ್ಕೂ ಸಿದ್ಧರಾಗಿ ಇರಬೇಕು. ಎಲ್ಲಾ ಆರೋಪ, ಅವಮಾನಗಳನ್ನು ಸಹಿಸಿಕೊಳ್ಳಬೇಕು ಎನ್ನುವ ಮಾತಿದೆ. ಅದೇ ಕಾರಣಕ್ಕೆ ಕೆಲವರು ರಾಜಕೀಯಕ್ಕೆ ಬರುತ್ತಾರೆ ಎಂದಾಗ ಅಭಿಮಾನಿಗಳೇ ಬೇಸಗರ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಕಣಕ್ಕಿಳಿದಿರುವ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ರಾಜಕೀಯರಂಗದಲ್ಲಿ ತೇಜೋವಧೆ ಎನ್ನುವುದು ಸರ್ವೇಸಾಧಾರಣ ಆಗಿಬಿಟ್ಟಿದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ. ಕೆಲ ಫೋಟೊ, ವೀಡಿಯೋಗಳನ್ನು ತಿರುಚಿ ತಪ್ಪಾಗಿ ಪ್ರಚಾರ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹಾಗೂ ಪತಿ ಶಿವರಾಜ್‌ಕುಮಾರ್ ಇಂಥದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ.
ಅಲ್ಪ ಸಂಖ್ಯಾರತನ್ನು ಓಲೈಸಲು ಹಣೆಯಲ್ಲಿನ ಕುಂಕುಮ ಅಳಿಸಿದ ಶಿಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹಾಗೂ ಅವರ ಪತಿ ಎಂದು ಹೇಳಿ ವೀಡಿಯೋವೊಂದು ವೈರಲ್ ಆಗುತ್ತಿದೆ. ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ ನೋಡಿ ಅಂತೆಲ್ಲಾ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಏಪ್ರಿಲ್ 9ರಂದು ಶಿವಮೊಗ್ಗ ವಿನೋಬನಗರದ ಶ್ರೀರಾಮ ನಗರ ನಿವಾಸಿಗಳು ಆಯೋಜಿಸಿದ್ದ 'ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ನಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಶಿವಣ್ಣ ದಂಪತಿ ಭಾಗಿ ಆಗಿದ್ದರು. ವೇದಿಕೆ ಏರಿದಾಗ ಬಹಳ ಬಿಸಿಲಿತ್ತು. ಹಾಗಾಗಿ ಸೆಕೆಗೆ ಶಿವಣ್ಣನ ಹಣೆಯಲ್ಲಿದ್ದ ಕುಂಕುಮ ತೇವವಾಗಿತ್ತು. ಹಾಗಾಗಿ ಶಿವಣ್ಣ ಅದನ್ನು ಅಳಿಸಿ ತೆಗೆದಿದ್ದರು.

ಇನ್ನು ಗೀತಾ ಶಿವರಾಜ್‌ಕುಮಾರ್ ಹಣೆಯಲ್ಲಿದ್ದ ಕುಂಕುಮ ದೊಡ್ಡದಾಗಿದೆ ಎಂದು ಸಣ್ಣದಾಗಿ ಸರಿಪಡಿಸಿಕೊಂಡಿದ್ದರು. ಆದರೆ ಇದನ್ನೇ ಕೆಲವರು ತಪ್ಪಾಗಿ ತಿರುಚಿ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾರತನ್ನು ಓಲೈಸಲು ಹೀಗೆ ಮಾಡಿದ್ದಾರೆ ಅಂತೆಲ್ಲಾ ತಪ್ಪು ತಪ್ಪಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ನಿಜ ಎಂದೇ ನಂಬಿದ್ದಾರೆ.
ಅಭಿಮಾನಿಗಳು ಮಾತ್ರ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಾರೆ. ಸಂಪೂರ್ಣ ವೀಡಿಯೋವನ್ನು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ರಾಜಕಾರಣ ಎಂದು ಈ ರೀತಿ ಅಪಪ್ರಚಾರ ಮಾಡಬೇಡಿ ಎಂದು ತಿರುಗೇಟು ನೀಡುತ್ತಿದ್ದಾರೆ. ಇನ್ನು ಕೆಲವರು ಶಿವಣ್ಣ ಇದ್ದಕ್ಕೆ ಹೇಳಿದ್ದು ಈ ರಾಜಕಾರಣ ಬೇಡ ಅಂತ, ಸುಮ್ಮನೆ ಸಿನಿಮಾ ಮಾಡಿಕೊಂಡು ಇರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಗೀತಾ ಶಿವರಾಜ್‌ಕುಮಾರ್ 2014ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಆದರೆ 2023ರಲ್ಲಿ ಗೀತಾ ಕಾಂಗ್ರೆಸ್ ಸೇರ್ಪಣೆ ಆಗಿದ್ದರು. 10 ವರ್ಷಗಳ ಹಿಂದೆ ಆ ಚುನಾವಣೆ ದೇಶದ ಗಮನ ಸೆಳೆದಿತ್ತು. ಇನ್ನು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಸಹೋದರ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಿದ್ದರು.
ಮಾಜಿ ಸಿಎಂ ದಿವಂಗತ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ರಾಜಕೀಯ ಸೆಳೆತ ಬಹಳ ವರ್ಷಗಳಿಂದ ಇದೆ. ಶಿವಣ್ಣ ಪಾಲಿಟಿಕ್ಸ್‌ಗೆ ಬರಲು ಹಿಂದೇಟು ಹಾಕುತ್ತಲೇ ಇದ್ದಾರೆ. ನನಗೆ ಸಿನಿಮಾ ಮಾತ್ರ ಸಾಕು ಎನ್ನುತ್ತಾರೆ. ಆದರೆ ಪತ್ನಿ ಪರ ಚುನಾವಣೆ ಪ್ರಚಾರಕ್ಕೆ ಸದಾ ಮುಂದೆ ನಿಲ್ಲುತ್ತಾರೆ. ಈ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿ. ವೈ ರಾಘವೇಂದ್ರ ವಿರುದ್ಧ ಗೀತಾ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











