ಜೈಲು ಸೇರಬೇಕಿದ್ದ ನಟಿ ಅಭಿನಯ ನಾಪತ್ತೆ! ಪೊಲೀಸರಿಂದ ಹುಡುಕಾಟ
ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಿರಿಯ ನಟಿ ಅಭಿನಯ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಪರಾಧಿಯೆಂದು ತೀರ್ಪಾಗಿದ್ದು, ಜೈಲು ಸೇರಬೇಕಿದ್ದ ನಟಿಯೀಗ ನಾಪತ್ತೆಯಾಗಿದ್ದಾರೆ.
ನಟಿ ಅಭಿನಯ, ಅವರ ತಾಯಿ ಜಯಮ್ಮ ಹಾಗೂ ಚೆಲುವರಾಜು ಎಂಬುವರು ವರದಕ್ಷಿಣೆ ಕಿರುಕುಳ, ಕೊಲ್ಲಲು ಯತ್ನ ಪ್ರಕರಣದಲ್ಲಿ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಈ ಮೂವರು ಸಹ ನಾಪತ್ತೆಯಾಗಿದ್ದಾರೆ.
ಅಭಿನಯ ಸೇರಿದಂತೆ ಇತರ ಅಪರಾಧಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಲುಕ್‌ಔಟ್ ನೊಟೀಸ್ ಸಹ ಜಾರಿಯಾಗಿದೆ. ಅಪರಾಧಿಗಳ ಹುಡುಕಾಟಕ್ಕೆ ಸಾರ್ವಜನಿಕರ ನೆರವನ್ನು ಪೊಲೀಸರು ಕೋರಿದ್ದು, ಇವರ ಸುಳಿವು ದೊರೆತರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ತಮ್ಮ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅಭಿನಯ ಹಾಗೂ ಅವರ ಪೋಷಕರಿಗೆ ಹೈಕೋರ್ಟ್ ಸಜೆ ನೀಡಿದ್ದು, ಪ್ರಕರಣದಲ್ಲಿ ಆರೋಪಿ ಸಂಖ್ಯೆ ಮೂರು ಆಗಿರುವ ಅಭಿನಯಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ರಾಜ್ಯ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ತೀರ್ಪು ನೀಡಿದೆ.
1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ಎಂಬುವರನ್ನು ಮದುವೆಯಾಗಿದ್ದರು. ಮದುವೆ ವೇಳೆ ವರಕ್ಷಿಣೆ ಪಡೆದಿದ್ದಲ್ಲದೆ, ನಂತರವೂ ಪದೇಪದೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ವಿವಾಹದ ಸಮಯದಲ್ಲಿ 80 ಸಾವಿರ ರೂಪಾಯಿ ಹಾಗೂ 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ಇದಾದ ನಂತರ 1 ಲಕ್ಷ ರೂ.ಗೆ ಬೇಡಿಕೆ ಇಟ್ಟು 20 ಸಾವಿರ ಪಡೆದ ನಂತರವೂ ಕಿರುಕುಳ ಮುಂದುವರೆಸಿದ್ದರು. ಹಣ ಕೊಟ್ಟರೂ ಸಹ ನನ್ನನ್ನು ಪೋಷಕರ ಮನೆಯಲ್ಲಿ ಬಿಟ್ಟಿದ್ದರು, ಆ ನಂತರ ಕರೆದುಕೊಂಡು ಹೋಗಲಿಲ್ಲ, ನನ್ನನ್ನು ಮನೆಗೆ ಸೇರಿಸಲಿಲ್ಲ ಎಂದು ಲಕ್ಷ್ಮೀದೇವಿ 2002ರಲ್ಲಿ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆಯಾಗಿ ವಿಚಾರಣೆ ನಡೆದು ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದರು. ಬಳಿಕ ಲಕ್ಷ್ಮಿದೇವಿಯು ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ಕಾರಣ ವಿಚಾರಣೆ ನಡೆದು ಡಿಸೆಂಬರ್‌ನಲ್ಲಿ ತೀರ್ಪು ಹೊರಬಿದ್ದಿತ್ತು.
ಪ್ರಖರಣದ ಪ್ರಮುಖ ಆರೋಪಿ ಶ್ರೀನಿವಾಸ್ ಹಾಗೂ ಎರಡನೇ ಆರೋಪಿ ರಾಮಕೃಷ್ಣ ನಿಧನ ಹೊಂದಿರುವ ಕಾರಣ ಅವರನ್ನು ಬಿಟ್ಟು ಉಳಿದ ಮೂರನೇ ಆರೋಪಿಯಾದ ಜಯಮ್ಮ (ಅಭಿನಯ ಅವರ ತಾಯಿ)ಗೆ ಐದು ವರ್ಷ ಜೈಲು ಸಜೆ, ಆರೋಪಿ ನಂಬರ್ 4 ಚೆಲುವರಾಜ್‌ಗೆ ಎರಡು ವರ್ಷ ಜೈಲು ಶಿಕ್ಷೆ, ಆರೋಪಿ ನಂಬರ್ 5 ಅಭಿನಯಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈಗ ಅಭಿನಯ ಹಾಗೂ ಇತರ ಅಪರಾಧಿಗಳು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


Click it and Unblock the Notifications











