ಕಾಲಿವುಡ್ ಗೆ ಕಾಲಿಟ್ಟ ಲೂಸ್ ಮಾದ ಯೋಗಿ ; ತಮಿಳು ಚಿತ್ರದಲ್ಲಿ ಅವಕಾಶ ಸಿಕ್ಕಿದ್ಹೇಗೆ..?
ನೋ ಡೌಟ್.. ಲೂಸ್ ಮಾದ ಯೋಗಿ ಪ್ರತಿಭಾವಂತ ನಟ. ಆದರೆ ಇವರ ಪ್ರತಿಭೆಯನ್ನ ಕನ್ನಡ ಚಿತ್ರರಂಗ ಬಳಸಿಕೊಳ್ಳಲಿಲ್ಲ. ಯೋಗಿ ಕೂಡ ಗಂಭೀರವಾಗಿ ಆಲೋಚನೆ ಮಾಡಲಿಲ್ಲ. ಆದರೆ ಈಗ ಯೋಗಿ ಎಚ್ಚೆತ್ತುಕೊಂಡಂತೆ ಇದೆ. ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿತಂತೆ ಇದೆ.
ಇದಕ್ಕೆ ಪೂರಕವಾಗಿ ಯೋಗಿ ಕೈಯಲ್ಲಿ ಒಂದಷ್ಟು ಚಿತ್ರಗಳಿವೆ. ಅವರೇ ಹೇಳಿರುವಂತೆ ಎಲ್ಲವೂ ಗಟ್ಟಿಯಾದ ಪಾತ್ರಗಳೇ. ಸಿದ್ಲಿಂಗು 2 ದಿಂದ ರೋಜಿವರೆಗೆ ನಾನಾ ಬಗೆಯ ಪಾತ್ರವನ್ನು ಮಾಡುತ್ತಿರುವ ಯೋಗಿ ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

ಯೋಗಿ ಅಭಿನಯದ ಈ ತಮಿಳು ಚಿತ್ರದಲ್ಲಿ ಅರುಣ್ ವಿಜಯ್ ನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಯೋಗಿ ಅವರದ್ದು ಇಲ್ಲಿ ಖಳನಾಯಕನ ಪಾತ್ರನಾ ಗೊತ್ತಿಲ್ಲ. ಆದರೆ ಯೋಗಿ ಹೇಳಿರುವಂತೆ ಅತ್ಯಂತ ಪ್ರಮುಖವಾದ ಪಾತ್ರಕ್ಕೆ ಯೋಗಿ ಬಣ್ಣ ಹಚ್ಚುತ್ತಿದ್ದಾರೆ.
ಇನ್ನೂ ತಿರುಕುಮಾರನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಮಾನ್ ಕರಾಟೆ' ಮತ್ತು 'ಗೀತು' ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ತಿರುಕುಮಾರನ್ ಕಣ್ಣಿಗೆ ಯೋಗಿ ಕಾಣಿಸಿದ್ದು ಹೆಡ್ ಬುಷ್ ಚಿತ್ರದಲ್ಲಿ.

ಡಾಲಿ ಧನಂಜಯ್ ನಿರ್ಮಾಣದಲ್ಲಿ ಬಂದಿದ್ದ ಹೆಡ್ ಬುಷ್ ನಲ್ಲಿ ಯೋಗಿ, ಗಂಗ ಪಾತ್ರ ನಿರ್ವಹಿಸಿದ್ದರು. ತಮ್ಮ ಅದ್ಭುತ ಅಭಿನಯದಿಂದ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದರು. ಎಷ್ಟರ ಮಟ್ಟಿಗೆ ಅಂದರೆ ತೆರೆಮೇಲೆ ಇದ್ದಷ್ಟು ಹೊತ್ತು, ಯೋಗಿ ಬದಲು ಗಂಗ ಅನ್ನೋ ಪಾತ್ರವೇ ಎದ್ದು ಕಂಡಿತ್ತು.
ಯೋಗಿ ಹೆಡ್ ಬುಷ್ ನಲ್ಲಿ ನಿರ್ವಹಿಸಿದ್ದ ಇದೇ ಗಂಗ ಪಾತ್ರ ಇವರನ್ನ ಈಗ ತಮಿಳು ಚಿತ್ರರಂಗದವರೆಗೆ ಕರೆದೊಯ್ದಿದೆ. ಹೆಡ್ ಬುಷ್ ನಲ್ಲಿ ಯೋಗಿಯ ಅಭಿನಯಕ್ಕೆ ಮನ ಸೋತ ನಿರ್ದೇಶಕ ತಿರುಕುಮಾರನ್ ಯೋಗಿ ಅವರನ್ನ ಸಂಪರ್ಕ ಮಾಡಿ ಚಿತ್ರದ ಕುರಿತು ಮಾತುಕಥೆ ನಡೆಸಿದ್ದಾರೆ. ಕಥೆಯನ್ನೂ ಹೇಳಿದ್ದಾರೆ. ತಿರುಕುಮಾರನ್ ಹೇಳಿದ ಕಥೆಯನ್ನ ಕೇಳಿ ಸಿಕ್ಕಾಪಟ್ಟೆ ಪ್ರಭಾವಕ್ಕೊಳಗಾದ ಯೋಗಿ ಕಥೆ ಹಾಗೂ ಪಾತ್ರ ಎರಡನ್ನೂ ಮನಸಾರೆ ಮೆಚ್ಚಿಕೊಂಡು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪಾತ್ರ ಬಹಳ ಚೆನ್ನಾಗಿತ್ತು. ಒಳ್ಳೆಯ ನಿರ್ದೇಶಕರು, ಪಾತ್ರವರ್ಗ ಎಲ್ಲವೂ ಇದ್ದ ಕಾರಣ ನಟಿಸಲು ಒಪ್ಪಿಕೊಂಡೆ' ಎಂದಿದ್ದಾರೆ ಯೋಗಿ

ಇನ್ನೂ ಮೊನ್ನೆಯಷ್ಟೇ ಈ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಕಾಲಿವುಡ್ ನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಚಿತ್ರದ ಮುಹೂರ್ತಕ್ಕೆ ಬಂದು ಇಡೀ ತಂಡಕ್ಕೆ ಶುಭ ಕೋರಿದ್ದಾರೆ.ಆದರೆ ಯೋಗಿ ಅವತ್ತು ಬೇರೆ ಚಿತ್ರದ ಚಿತ್ರೀಕರಣದಲ್ಲಿ ಇದ್ದ ಕಾರಣ ಮುಹೂರ್ತಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಮಿಕ್ಕಂತೆ ಸಿದ್ದಿ ಇದ್ನಾನಿ ಮತ್ತು ತಾನ್ಯ ರವಿಚಂದ್ರನ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇನ್ನೂ.. ಅರುಣ್ ವಿಜಯ್ ವೃತ್ತಿ ಬದುಕಿಗೆ, ಈ ಸಿನಿಮಾ ಮತ್ತೊಂದು ತಿರುವು ನೀಡುತ್ತೆ ಅನ್ನುವ ಮಾತು ಆಗಲೇ ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ.
ಒಟ್ನಲ್ಲಿ ಯೋಗಿ ಈಗ ಕನ್ನಡದ ಜೊತೆ ತಮಿಳಿನತ್ತ ಕೂಡ ಮುಖ ಮಾಡಿದ್ದಾರೆ. ದ್ವೀಭಾಷಾ ಕಲಾವಿದನಾಗಲು ಅಣಿಯಾಗಿದ್ದಾರೆ. ಯೋಗಿಗೆ ಈ ಬಾರಿ ಎರಡು ಭಾಷೆಯಲ್ಲಿಯೂ ಯೋಗಾಯೋಗ ಕೂಡಿ ಬರಲಿ, ಎರಡು ಭಾಷೆಯಲ್ಲಿಯೂ ಯೋಗಿ ಬಿಡುವಿರದ ನಟನಾಗಲಿ ಅನ್ನುವುದು ಇವರ ಅಭಿಮಾನಿಗಳ ಆಶಯ


Click it and Unblock the Notifications











