ರಾಕಿ ಭಾಯ್ ಅಲ್ಲ 'ರೋಜಿ' ಭಾಯ್.. "ಕಾಮಿಡಿ, ಲವ್ ಟ್ರೈ ಮಾಡ್ದೆ ಆಗ್ಲಿಲ್ಲ.. ಹಳೇ ಟ್ರ್ಯಾಕ್‌ಗೆ ಬಂದೆ": ಯೋಗಿ
ಲೂಸ್ ಮಾದ ಯೋಗಿ ನಟನೆಯ 50ನೇ ಸಿನಿಮಾ ಮುಹೂರ್ತ ನೆರವೇರಿದೆ. ಪೋಸ್ಟರ್ ಸಮೇತ ಚಿತ್ರಕ್ಕೆ ಚಾಲನೆ ಸಿಕ್ಕಿದೆ. 'ರೋಜಿ' ಎನ್ನುವ ವಿಭಿನ್ನ ಟೈಟಲ್ ಸಿನಿಮಾದಲ್ಲಿ ಯೋಗಿ ಬಣ್ಣ ಹಚ್ಚುತ್ತಿದ್ದಾರೆ. 'ಹೆಡ್‌ಬುಷ್' ಸಿನಿಮಾ ಮಾಡಿದ್ದ ಶೂನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ನಟ ಡಾಲಿ ಧನಂಜಯ ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಕೋರಿದ್ದಾರೆ.
ಬಹಳ ವಿಭಿನ್ನವಾಗಿ ಡಿಸೈನ್ ಮಾಡಿರುವ 'ರೋಜಿ' ಸಿನಿಮಾ ಪೋಸ್ಟರ್ ಗಮನ ಸೆಳೆಯುತ್ತಿದೆ. ರಾಜಾಜಿ ನಗರದ ನವರಂಗ್ ಥಿಯೇಟರ್ ಆವರಣದಲ್ಲಿ ಚಿತ್ರದ ಮುಹೂರ್ತ ನೆರವೇರಿಸಿ ಪೋಸ್ಟರ್ ಅನಾವರಣ ಮಾಡಲಾಯಿತು. ಬಳೆ ರೀತಿಯ ಮೂಗತಿ ಧರಿಸಿ, ಸಿಗರೇಟ್ ಸೇದುತ್ತಾ, ರಗಡ್ ಲುಕ್‌ನಲ್ಲಿ ರೋಸಿ ಯೋಗಿ ದರ್ಶನ ಕೊಟ್ಟಿದ್ದಾರೆ. ಕೆಂಪು- ಕಪ್ಪು ಬಣ್ಣದ ಪೋಸ್ಟರ್ ಗಮನ ಸೆಳೀತಿದೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಎಂದು ಚಿತ್ರತಂಡ ಹೇಳಿದ್ದರು, ಯೋಗಿ 'ರೋಜಿ' ಭಾಯ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಸೂರಿ ನಿರ್ದೇಶನದ 'ದುನಿಯಾ' ಚಿತ್ರದಲ್ಲಿ ಲೂಸ್ ಮಾದ ಆಗಿ ಚಿತ್ರರಂಗಕ್ಕೆ ಬಂದ ಯೋಗಿ 49 ಸಿನಿಮಾಗಳನ್ನು ಪೂರೈಸಿದ್ದಾರೆ. 'ರೋಜಿ' ಅವರ ಕರಿಯರ್‌ನ 50ನೇ ಸಿನಿಮಾ. ಈ ಹಾದಿಯಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಇಂಟೆನ್ಸ್ ಆಕ್ಟಿಂಗ್ ಹಾಗೂ ಡ್ಯಾನ್ಸ್‌ನಿಂದ ಗಮನ ಸೆಳೆದ ಯೋಗಿ ದೊಡ್ಡಮಟ್ಟದಲ್ಲಿ ಸಕ್ಸಸ್ ಆಗಲಿಲ್ಲ. ಇದರಿಂದ ಸಾಕಷ್ಟು ಪಾಠ ಕಲಿತ್ತಿದ್ದೀನಿ ಎಂದಿರುವ ಯೋಗಿ ಮತ್ತೆ ನಿಮಗೆ ಇಷ್ಟವಾಗುವ ರೀತಿಯಲ್ಲೇ ಬರ್ತಿದ್ದೀನಿ ಎಂದಿದ್ದಾರೆ.
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಏಕಕಾಲಕ್ಕೆ 'ರೋಜಿ' ಸಿನಿಮಾ ತೆರೆಗೆ ಬರ್ತಿದೆ. ಆ ಮೂಲಕ ಯೋಗಿ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಹೊರಟ್ಟಿದ್ದಾರೆ. ಶೂನ್ಯ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ರೆ, ಡಿ. ವೈ ರಾಜೇಶ್ ಬಂಡವಾಳ ಹೂಡುತ್ತಿದ್ದಾರೆ. 'ಹೆಡ್‌ಬುಷ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ 'ರೋಜಿ' ಚಿತ್ರಕ್ಕೂ ಕೆಲಸ ಮಾಡ್ತಿದೆ.
'ರೋಜಿ' ಸಿನಿಮಾ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದ ಸ್ನೇಹಿತ ಧನಂಜಯಗೆ ಧನ್ಯವಾದ ತಿಳಿಸಿ ಮಾತನಾಡಿದ ಯೋಗಿ "ಎಲ್ಲರಿಗೂ ಧನ್ಯವಾದ. ಇಷ್ಟು ವರ್ಷ ನನ್ನನ್ನು ಕಾಪಾಡಿಕೊಂಡು ಬಂದಿದ್ದೀರಾ. ಇನ್ನು ಮುಂದೆ ಕೂಡ ಕಾಪಾಡಿ. ರೋಸಿ ನೆಕ್ಸ್ಟ್ ಲೆವೆಲ್‌ಗೆ ಇರುವಂತಹ ಕಥೆ. ಗ್ಯಾಂಗ್‌ಸ್ಟರ್ ವೈಬ್ ಇರುವಂತಹ ಸಿನಿಮಾ. ನಾನು ಮಧ್ಯದಲ್ಲಿ ಲವ್, ಕಾಮಿಡಿ ಎಲ್ಲಾ ಟ್ರೈ ಮಾಡ್ದೆ. ಯಾಕೋ ಜಾಸ್ತಿ ವರ್ಕೌಟ್ ಆಗ್ಲಿಲ್ಲ. ನಮ್ ರೂಟ್ ಅದೇ ಅಂದ್ಮೇಲೆ ಅದೇ ರೂಟ್‌ಗೆ ಹೋಗಬೇಕು" ಎಂದಿದ್ದಾರೆ.

ಡಾಲಿ ಧನಂಜಯ ಮಾತನಾಡಿ "ಯೋಗಿದು ಅಷ್ಟು ಸಿನಿಮಾ ಆಗಬಿಡ್ತಾ ಅಂಯ ಯೋಚನೆ ಮಾಡ್ತಿದ್ದೆ. ಆಮೇಲೆ ನಂದೇ 25 ಆಗಿರುವಾಗ ಯೋಗಿ ಅಷ್ಟು ವರ್ಷಗಳಿಂದ ಇದ್ದಾರೆ, 50 ಸಿನಿಮಾ ಆಗಿರೋದ್ರಲ್ಲೇನು ಸಂಶಯ ಇಲ್ಲ ಅನ್ನಿಸ್ತು. 'ರೋಜಿ' ಲುಕ್ ಚೆನ್ನಾಗಿದೆ. ಟೈಟಲ್ ಚೆನ್ನಾಗಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಬರ್ತಿದೆ. ರೋಸಿ ಟೈಟಲ್ ಕೇಳಿದಾಗ ಏನಿದು ಹುಡುಗಿ ಹೆಸ್ರು ಇಟ್ಟಿದ್ದಾರೆ ಅನ್ನಿಸ್ತು. ಯೋಗಿನೇ ರೋಸಿ ಅಂದಾಗ ಸಕತ್ ಆಗಿದೆ ಅನ್ನಿಸ್ತು" ಎಂದಿದ್ದಾರೆ.
'ಒಂಭತ್ತನೇ ದಿಕ್ಕು', 'ಹೆಡ್ ಬುಷ್' ಸಿನಿಮಾಗಳಲ್ಲಿ ಯೋಗಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ 'ಲಂಕಾಸುರ', 'ಆಡಿದ್ದೇ ಆಟ', 'ಕಂಸ', 'ಬ್ಯಾಚುಲರ್ ಪಾರ್ಟಿ', 'ನಾನು ಅದು ಮತ್ತು ಸರೋಜ', 'ಹೆಡ್‌ಬುಷ್- 2', 'ಸಿದ್ಲಿಂಗು- 2' ಸೇರಿದಂತೆ ಏಳೆಂಟು ಸಿನಿಮಾಗಳು ಅವರ ಕೈಯಲ್ಲಿದೆ. ಈ ಸಾಲಿಗೆ 'ರೋಜಿ' ಕೂಡ ಸೇರಿಕೊಂಡಿದೆ.


Click it and Unblock the Notifications











