'ರೋಜಿ'ಗೆ ಸಾಥ್ ಕೊಟ್ಟ 'ಡಾಲಿ': ಥಿಯೇಟರ್‌ನಲ್ಲೇ ಸೆಟ್ಟೇರಿದ ಲೂಸ್ ಮಾದ ಯೋಗಿಯ 50ನೇ ಸಿನಿಮಾ!
ಲೂಸ್ ಮಾದ ಯೋಗಿ ಹಾಗೂ ಡಾಲಿ ಧನಂಜಯ್ ಇಬ್ಬರೂ ಕುಚಿಕು ಗೆಳೆಯರು ಅನ್ನೋದು ಗೊತ್ತೇ ಇದೆ. ಧನಂಜಯ್ ನಿರ್ಮಾಣದ 'ಹೆಡ್ ಬುಷ್' ಸಿನಿಮಾ ಲೂಸ್ ಮಾದ ಯೋಗಿ ನಟಿಸಿದ್ದರು. ಈಗ ಲೂಸ್ ಮಾದ ಯೋಗಿಯ ಸಿನಿಮಾಗೆ ಡಾಲಿ ಧನಂಜಯ್ ಬೆನ್ನೆಲುಬಾಗಿ ನಿಂತಿದ್ದಾರೆ.
'ದುನಿಯಾ' ಸಿನಿಮಾ ಮೂಲಕ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಯೋಗಿ ಸ್ಯಾಂಡಲ್‌ವುಡ್‌ನಲ್ಲಿ ಲೂಸ್ ಮಾದನಾಗಿ ಫೇಮಸ್ ಆಗ್ಬಿಟ್ರು. ಒಂದಿಷ್ಟು ಸಕ್ಸಸ್.. ಒಂದಿಷ್ಟು ಫೆಲ್ಯೂರ್‌ಗಳನ್ನು ಕಂಡಿರೋ ಯೋಗಿ 50ನೇ ಸಿನಿಮಾವರೆಗೂ ಬಂದಿದ್ದಾರೆ. ಹೌದು, ಲೂಸ್ ಮಾದ ಯೋಗಿ ಅಭಿನಯದ 50ನೇ ಸಿನಿಮಾ ಗ್ರ್ಯಾಂಡ್ ಆಗಿ ಸೆಟ್ಟೇರಿದೆ. ಅದುವೇ 'ರೋಜಿ'.

'ರೋಜಿ' ಸಿನಿಮಾವನ್ನು ವಿಶೇಷವಾಗಿ ಸೆಟ್ಟೇರಿಸಲಾಯಿತು. ಸಾಮಾನ್ಯವಾಗಿ ಮುಹೂರ್ತ ಅಂದರೆ, ದೇವಸ್ಥಾನಗಳಲ್ಲಿ ಇಲ್ಲವೇ ಸ್ಟಾರ್ ಹೊಟೇಲ್‌ಗಳಲ್ಲಿ ಹಮ್ಮಿಕೊಂಡಿರುತ್ತಾರೆ. ಆದರೆ, ಈ ತಂಡ ನವರಂಗ್ ಚಿತ್ರಮಂದಿರದಲ್ಲಿ ಸಿನಿಮಾದ ಟೈಟಲ್ ಹಾಗೂ ಮುಹೂರ್ತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಡಾಲಿ ಧನಂಜಯ್ 'ರೋಜಿ' ಟೈಟಲ್ ಲಾಂಚ್ ಮಾಡಿದ್ರು. ಈ ಸಿನಿಮಾವನ್ನು 'ಹೆಡ್ ಬುಷ್' ಖ್ಯಾತಿಯ ಶೂನ್ಯ ನಿರ್ದೇಶನ ಮಾಡಿದ್ದಾರೆ.
'ರೋಜಿ' ಫಸ್ಟ್ ಸೀನ್‌ಗೆ ಕ್ಲಾಪ್ ಮಾಡಿದ ಡಾಲಿ ಧನಂಜಯ್ ತಂಡಕ್ಕೆ ಶುಭ ಹಾರೈಸಿದ್ರು. " ಯೋಗಿ ನನ್ನ ಆತ್ಮೀಯ ಗೆಳೆಯ. 'ರೋಜಿ' ಯೋಗಿ ಅಭಿನಯದ 50ನೇ ಸಿನಿಮಾ. ಇದು ನನಗೆ ಖುಷಿಕೊಟ್ಟಿದೆ. ನಿರ್ದೇಶಕ ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ 'ಹೆಡ್ ಬುಷ್' ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಭರ್ಜರಿ ಯಶಸ್ಸು ಕಾಣಲಿ" ಎಂದು ಡಾಲಿ ಹಾರೈಸಿದ್ದಾರೆ.
ಲೂಸ್ ಮಾದ ಯೋಗಿ 50ನೇ ಸಿನಿಮಾ ಸೆಟ್ಟೇರಿದ ಖುಷಿಯಲ್ಲಿ ಇದ್ದಾರೆ. ಅದರಲ್ಲೂ ಗೆಳೆಯ ಡಾಲಿ ಧನಂಜಯ್ ಈ ಸಿನಿಮಾಗೆ ಚಾಲನೆ ನೀಡಿದ್ದು ಯೋಗಿಗೆ ಖುಷಿಕೊಟ್ಟಿದೆ. " ಇದು ನನ್ನ ಐವತ್ತನೇ ಸಿನಿಮಾ. ನಾನು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ನಟಿಸುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಇದು ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ಸ್ನೇಹಿತ ಡಾಲಿ ಧನಂಜಯಗೆ ಧನ್ಯವಾದ" ಎಂದಿದ್ದಾರೆ ಯೋಗಿ.

'ಹೆಡ್ ಬುಷ್' ಬಳಿಕ ಶೂನ್ಯ ಎರಡನೇ ಸಿನಿಮಾಗೆ ಕೈ ಹಾಕಿದ್ದಾರೆ. ಇದು ಕೂಡ ಗ್ಯಾಂಗ್‌ಸ್ಟರ್ ಸಿನಿಮಾ. "ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ಚಿರಋಣಿ. ಈಗ ನನ್ನ ನಿರ್ದೇಶನದ ಎರಡನೇ ಸಿನಿಮಾ 'ರೋಜಿ'ಗೆ ಚಾಲನೆ ಸಿಕ್ಕಿದೆ. ಸಿನಿಮಾದಲ್ಲಿ ಯೋಗಿ ಹೆಸರೇ 'ರೋಜಿ'. ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ. ಈ ಕಾರಣಕ್ಕಾಗಿಯೇ ನಮ್ಮ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಆರಂಭ ಮಾಡುತ್ತಿದ್ದೇನೆ. ಮೇ ತಿಂಗಳಿನಿಂದ ಶೂಟಿಂಗ್ ಶುರುವಾಗುತ್ತೆ" ಎಂದು ಶೂನ್ಯ ಹೇಳಿದ್ದಾರೆ.


Click it and Unblock the Notifications











