ವಿಜಯಪ್ರಸಾದ್ 'ಪರಿಮಳ ಲಾಡ್ಜ್'ಗೆ ಲೂಸ್ ಮಾದ ನಾಯಕ
ನೀರ್‌ದೋಸೆ ಖ್ಯಾತಿಯ ವಿಜಯಪ್ರಸಾದ್ ಎರಡು ಚಿತ್ರಗಳ ಶೂಟಿಂಗ್ ಮುಗಿಸಿದ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಭಾಗ 1 ಮತ್ತು ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್ ಚಿತ್ರಗಳ ರಿಲೀಸ್‌ಗೆ ಲೆಕ್ಕಾಚಾರ ಮಾಡ್ತಿದ್ದಾರೆ.
ಈ ಎರಡು ಪ್ರಾಜೆಕ್ಟ್ ಮುಗಿಸಿರುವ ವಿಜಯಪ್ರಸಾದ್ ಈಗ ಪರಿಮಳ ಲಾಡ್ಜ್‌ಗೆ ಹೋಗ್ತಿದ್ದಾರೆ. ಎರಡು ವರ್ಷದ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಪರಿಮಳ ಲಾಡ್ಜ್ ಸಿನಿಮಾ ಘೋಷಣೆ ಮಾಡಿದ್ದರು. ನೀರ್‌ದೋಸೆ ನಿರ್ಮಾಪಕ ಪ್ರಸನ್ನ ಈ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದರು. 2019ರ ಆಗಸ್ಟ್ ತಿಂಗಳಲ್ಲಿ ಪರಿಮಳ ಲಾಡ್ಜ್ ಟೀಸರ್ ಸಹ ಬಂತು.
ಸತೀಶ್ ನೀನಾಸಂ, ಲೂಸ್ ಮಾದ ಯೋಗೇಶ್, ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಕಾಣಿಸಿಕೊಂಡಿದ್ದ ಈ ಟೀಸರ್ ಭಾರಿ ಸದ್ದು ಮಾಡಿತ್ತು. ಇದೀಗ, ಎರಡು ವರ್ಷದ ನಂತರ ಪರಿಮಳ ಲಾಡ್ಜ್ ಮತ್ತೆ ಸುದ್ದಿಯಾಗಿದೆ. ಮುಂದೆ ಓದಿ...

ಪರಿಮಳ ಲಾಡ್ಜ್ ಬಿಟ್ಟು ಹೋದ ಸತೀಶ್
ಪರಿಮಳ ಲಾಡ್ಜ್ ಸಿನಿಮಾದಲ್ಲಿ ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಔಟ್ ಅಂಡ್ ಔಟ್ ಕಾಮಿಡಿ ಜಾನರ್‌ನಲ್ಲಿ ತಯಾರಾಗುತ್ತಿದ್ದ ಈ ಚಿತ್ರ ಸತೀಶ್ ಅವರಿಗೆ ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆ ಇತ್ತು. ಆದ್ರೀಗ, ಪರಿಮಳ ಲಾಡ್ಜ್ ಪ್ರಾಜೆಕ್ಟ್‌ನಿಂದ ಸತೀಶ್ ನೀನಾಸಂ ಹಿಂದಕ್ಕೆ ಸರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಲೂಸ್ ಮಾದ ಯೋಗೇಶ್ ನಾಯಕ
ಪರಿಮಳ ಲಾಡ್ಜ್ ಚಿತ್ರದಲ್ಲಿ ಸತೀಶ್ ನೀನಾಸಂ ಇರುವುದಿಲ್ಲ ಎಂದು ಸ್ವತಃ ವಿಜಯಪ್ರಸಾದ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈಗ ಪರಿಮಳ ಲಾಡ್ಜ್ ಚಿತ್ರಕ್ಕೆ ಲೂಸ್ ಮಾದ ಯೋಗೇಶ್ ನಾಯಕನಾಗಿ ಮುಂದುವರಿಯಲಿದ್ದಾರೆ.

ಹೀರೋಯಿನ್ ಹುಡುಕಾಟ
ಈ ಹಿಂದಿನಂತೆ ಹಿರಿಯ ನಟಿ ಸುಮನ್ ರಂಗನಾಥ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡ್ತಿದ್ದಾರೆ. ನಾಯಕಿಯ ಆಯ್ಕೆ ಅಂತಿಮವಾಗಿಲ್ಲ. ಹೀರೋಯಿನ್ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಿದೆ. ಇನ್ನು ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಹ ಅಭಿನಯಿಸಿದ್ದರು. ಈಗ ಅವರ ಪಾತ್ರದಲ್ಲಿ ನಟಿಸಲು ಮತ್ತೊಬ್ಬ ಕಲಾವಿದನನ್ನು ಸಹ ಚಿತ್ರತಂಡ ಹುಡಕುತ್ತಿದೆ ಎಂಬ ಮಾಹಿತಿ ಇದೆ.

ವಿವಾದ ಸೃಷ್ಟಿಸಿದ್ದ ಪರಿಮಳ ಲಾಡ್ಜ್
ಪರಿಮಳ ಲಾಡ್ಜ್ ಬಂದಾಗ ವ್ಯಾಪಕ ಟೀಕೆಗೆ ಗುರಿಯಾಯಿತು. ಅಶ್ಲೀಲ ಪದಗಳು ಮತ್ತು ಸಂಭಾಷಣೆ ಹೆಚ್ಚಿದೆ. ಈ ಚಿತ್ರ ವಿರೋಧಿಸಿದ ದಿವಂಗತ ಪತ್ರಕರ್ತ ರವಿ ಬೆಳಗೆರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ''ಪರಿಮಳ ಲಾಡ್ಜ್ ಸಿನಿಮಾ ಏನಾದರೂ ಬಿಡುಗಡೆ ಮಾಡಿದ್ರೆ ನಾನೇ ಅವರ ವಿರುದ್ಧ ಕೇಸ್ ಹಾಕುತ್ತೇನೆ. ಅವರನ್ನ ಜೈಲಿಗೆ ಕಳುಹಿಸುತ್ತೇನೆ. ಏನ್ರಿ ಅದು ಡಬಲ್ ಮೀನಿಂಗ್....ತ್ರಿಬಲ್ ಮೀನಿಂಗ್. ಇದು ಸಮಾಜಕ್ಕೆ ಮಾರಕ. ಥೂ ಹೊಲಸು. ಮನಸ್ಸಿಗೆ ಬಂದಂತೆ ಬರೆಯುತ್ತೀರಾ'' ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿದ್ಲಿಂಗು 2 ಸಾಧ್ಯತೆ?
ಈ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಮತ್ತು ಲೂಸ್ ಮಾದ ಯೋಗೇಶ್ ಕಾಂಬಿನೇಷನ್‌ನಲ್ಲಿ 'ಸಿದ್ಲಿಂಗು' ಸಿನಿಮಾ ಬಂದಿತ್ತು. ಈ ಚಿತ್ರದ ಸೀಕ್ವೆಲ್ ಮಾಡುವ ಯೋಜನೆಯಿದ್ದು, ಮುಂದಿನ ವರ್ಷದಲ್ಲಿ ಈ ಚಿತ್ರಕ್ಕೆ ಚಾಲನೆ ಕೊಡುವ ನಿರೀಕ್ಷೆಯಿದೆ. ಇನ್ನು ಸತೀಶ್ ನೀನಾಸಂ ಜೊತೆಗಿನ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಸಂಪೂರ್ಣವಾಗಿದೆ. ಈ ಚಿತ್ರಕ್ಕೆ ಹರಿಪ್ರಿಯಾ ನಾಯಕಿ. ಈ ಕಡೆ ಜಗ್ಗೇಶ್ ಜೊತೆ ಮಾಡುತ್ತಿರುವ ತೋತಾಪುರಿ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ.


Click it and Unblock the Notifications











