ಆಗಸ್ಟ್ 10 ರಂದು 'ಲೌಡ್ ಸ್ಪೀಕರ್' ಆನ್ ಆಗುತ್ತೆ
ಈ ಹಿಂದೆ 'ಮಳೆ' ಹಾಗೂ 'ಧೈರ್ಯಂ' ಸಿನಿಮಾ ಮಾಡಿದ್ದ ನಿರ್ದೇಶಕ ಶಿವ ತೇಜಸ್ ಈಗ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ ನಿರ್ದೇಶನದ ಹೊಸ ಸಿನಿಮಾ 'ಲೌಡ್ ಸ್ಪೀಕರ್' ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ.
'ಲೌಡ್ ಸ್ಪೀಕರ್' ಇಂದಿನ ದಿನನಿತ್ಯದ ಜೀವನಕ್ಕೆ ಹತ್ತಿರದ ಸಿನಿಮಾವಾಗಿದೆ. ಹೇಗೆ ಇಂದು ಎಲ್ಲರೂ ಮೊಬೈಲ್ ಗೆ ಅಂಟಿಕೊಂಡಿದ್ದಾರೆ, ಇಂದು ಸಂಬಂಧಗಳಿಗಿಂತ ಮೊಬೈಲ್ ಜಾಸ್ತಿ ಆಗಿದೆ, 'ನಾವು ಮೊಬೈಲ್ ಅನ್ನು ಉಪಯೋಗಿಸುತ್ತಿಲ್ಲ, ಮೊಬೈಲೇ ನಮ್ಮನ್ನು ಉಪಯೋಗಿಸುತ್ತಿದೆ' ಎಂಬ ವಿಷಯಗಳನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಲಾಗಿದೆ.

ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು ಹಾಗೂ ದತ್ತಣ್ಣ ಕಾಣಿಸಿಕೊಂಡಿದ್ದಾರೆ. ಲೀಡ್ ರೋಲ್ ನಲ್ಲಿ ಸುಮಂತ್ ಭಟ್, ಕಾರ್ತಿಕ್ ರಾವ್, ನೀನಾಸಂ ಭಾಸ್ಕರ್, ಕಾವ್ಯಾ ಶಾ, ಅನುಷಾ, ದಿಶಾ ನಟಿಸಿದ್ದಾರೆ. ಚಿತ್ರದ ಪ್ರತಿ ಪಾತ್ರಗಳು ಮುಖ್ಯವಾಗಿದ್ದು, ಇಲ್ಲಿ ಕಥೆಯೇ ಹೀರೋ ಎನ್ನುತ್ತಾರೆ ನಿರ್ದೇಶಕರು.

ಹಂಸಲೇಖ ಅವರ ಶಿಷ್ಯ ಹರ್ಷವರ್ಧನ್ ಸಿನಿಮಾಗೆ ಸಂಗೀತ ನೀಡಿದ್ದಾರೆ, ಡಾ.ಕೆ.ಆರ್ ರಾಜು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದರೆ, ಆಗಸ್ಟ್ 10 ರಂದೇ ಸಿನಿಮಾ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಸಹ ತೆರೆಗೆ ಬರಲಿದೆ.


Click it and Unblock the Notifications











