ಲವ್ ಮಾಕ್ಟೇಲ್ 3 ಸ್ಕ್ರಿಪ್ಟ್ ಸಮರ ಸುಖಾಂತ್ಯ ; ಮನಸ್ತಾಪ ಮರೆತು ಕೈಕುಲುಕಿದ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ
ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಚಿತ್ರಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಳ್ಳತನಕ್ಕೆ ಇಳಿಯುತ್ತಾರೆ. ಕೆಲವರು ಪ್ರೇರಣೆಯ ಗೀತೆಯನ್ನು ಹಾಡುತ್ತಾ ಬೇರೆ ಚಿತ್ರದ ಸನ್ನಿವೇಶಗಳನ್ನು ಯಥಾವತ್ತಾಗಿ ನಕಲು ಮಾಡಿದರೆ ಇನ್ನು ಹಲವರು ಯಾರ ಅಳುಕಿಲ್ಲದೇ ಬೇರೆಯವರ ಕೃತಿಯನ್ನು ಕದ್ದು ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಬಿಲ್ಡಪ್ಪು ಕೊಡುತ್ತಾರೆ.
ಹೀಗೆ ಕದಿಯುವ ಮನೋವ್ಯಾದಿ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಹಲವರು ಬೇರೆ ಭಾಷೆಯಲ್ಲಿ ಗಮನ ಸೆಳೆದ ಪೋಸ್ಟರ್‌ಗಳನ್ನು ಕೂಡ ತಮ್ಮದೇ ವಿನ್ಯಾಸವೆನ್ನುವಂತೆ ತೋರ್ಪಡಿಸುತ್ತಾರೆ. ಮತ್ತೂ ಕೆಲವರು ನಮ್ಮನ್ಯಾರು ಕೇಳ್ತಾರೆ ಎಂಬ ಮನೋಭಾವದಲ್ಲಿ ಕಥೆ ಹೇಳಿದವರ ಅಪ್ಪಣೆಯನ್ನು ಕೂಡ ಕೇಳದೇ ಯಥಾವತ್ತಾಗಿ ನಕಲು ಮಾಡುತ್ತಾರೆ.

ದುರಂತ ಅಂದರೆ ಈ ಸಾಲಿನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೂಡ ಇದ್ದಾರೆ ಎನ್ನುವ ಆರೋಪ ಮೊನ್ನೆ ಮೊನ್ನೆವರೆಗೆ ಕೇಳಿ ಬಂದಿತ್ತು. ''ಲವ್ ಮಾಕ್ಟೇಲ್ 3'' ಚಿತ್ರದ ಮೇಲೆ ಕೃತಿ ಚೌರ್ಯದ ಆರೋಪ ಮಾಡಲಾಗಿತ್ತು. ಆದರೆ. ಈಗ ಈ ವಿವಾದ ಕೂಡ ತಣ್ಣಗಾಗಿದೆ. ಮನಸ್ತಾಪದಿಂದ ದೂರವಾಗಿದ್ದ ಮನಸುಗಳು ಈಗ ಒಂದಾಗಿವೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ''ಲವ್ ಮಾಕ್ಟೇಲ್ 3'' ಬಿಡುಗಡೆಯ ನಂತರ ಕಥೆಯ ವಿಚಾರಕ್ಕೆ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ಮತ್ತು ಗುರು ದೇಶಪಾಂಡೆ- ರಾಘವೇಂದ್ರ ನಾಯಕ್ ನಡುವೆ ಕದನ ಶುರುವಾಗಿತ್ತು. ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಮೂಲಕ ನಡೆದ ಈ ಸಮರದಲ್ಲಿ ಇಬ್ಬರು ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದರು. ಪರಸ್ಪರ ಆರೋಪ-ಪ್ರತ್ಯಾರೋಪವನ್ನೆಲ್ಲ ಮಾಡುತ್ತಿದ್ದರು. ಇಷ್ಟೇ ಅಲ್ಲ ಈ ಮಾತುಗಳಲ್ಲಿ ವ್ಯಂಗ್ಯವೂ ಇತ್ತು. ಅಹಂಕಾರವೂ ಇತ್ತು.
ನ್ಯಾಯಾಲಯದ ಮೆಟ್ಟಿಲನ್ನೇರುವ ಮಾತುಗಳನ್ನು ಡಾರ್ಲಿಂಗ್ ಕೃಷ್ಣ ಹೇಳಿದ್ದರು. ಮತ್ತೊಂದು ಕಡೆ ಬೆಳೆದ ಮೇಲೆ ಕೀಳಾಗಿ ಮಾತನಾಡ್ತಾರೆ ಎಂದು ಗುರು ದೇಶಪಾಂಡೆ ಗುಡುಗಿದ್ದರು. ಪುಕ್ಸಟ್ಟೆ ಪ್ರಚಾರ ಬೇಡ ಎಂದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹೇಳಿದ್ದರೆ ಕಂಪ್ಲೀಟ್ಲಿ ಕಥೆ ನಂದು ಎಂದು ರಾಘವೇಂದ್ರ ನಾಯಕ್ ಹೇಳಿದ್ದರು. ಹೀಗೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದ ಈ ಜಂಟಿ ಜೋಡಿ ಈಗ ಹಮ್ ಸಾಥ್ ಸಾಥ್ ಹೈ ಎಂಬ ಸಂದೇಶವನ್ನು ರವಾನೆ ಮಾಡಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು (ಮಾರ್ಚ್ 27) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ, ನೂತನ ಅಧ್ಯಕ್ಷರಾದ ಜಯಮಾಲಾ ಅವರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ನಡೆದಿದ್ದು, ಸಂಧಾನ ಫಲಪ್ರದವಾಗಿದೆ. ಈ ಮೂಲಕ ಸಣ್ಣದೊಂದು ವಿರಸ ಈಗ ಸುಖಾಂತ್ಯ ಕಂಡಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಮತ್ತು ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ,ಎರಡು ಕಡೆಯವರು ವಾದ ಪ್ರತಿವಾದ ಮಂಡಿಸಿದ್ದು ಕಥೆಯ ಎಳೆಗಳಲ್ಲಿ ಕಂಡುಬಂದ ಸಾಮ್ಯತೆಯು ಉದ್ದೇಶಪೂರ್ವಕವಲ್ಲದ ಕೇವಲ ಕಾಕತಾಳೀಯ ಮತ್ತು ತಪ್ಪು ಗ್ರಹಿಕೆಗಳಿಂದ ಕೂಡಿದೆ ಎಂದು ಪರಸ್ಪರ ಒಪ್ಪಿಕೊಂಡಿದ್ದಾರೆ.
ಚಿತ್ರರಂಗ ಎಂಬುದು ಒಂದು ಕುಟುಂಬದಂತಿದ್ದು, ಇಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಎಂಬ ಹಿರಿಯರ ಮಾತಿಗೆ ಗೌರವ ನೀಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಮುಕ್ತಾಯಗೊಳಿಸಲು ಇಬ್ಬರೂ ಒಪ್ಪಿಕೊಂಡಿದ್ಧಾರೆ. ಹೀಗೆ ನಡೆದ ಈ ಯಶಸ್ವಿ ಸಂಧಾನ ಸಭೆಯಿಂದಾಗಿ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ತಮ್ಮ ದೂರನ್ನು ಹಿಂಪಡೆದರೆ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನ್ಯಾಯಾಲಯಕ್ಕೆ ಹೋಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಒಟ್ನಲ್ಲಿ ಸದ್ಯ ''ಲವ್ ಮಾಕ್ಟೇಲ್ 3'' ವಿವಾದ ಸುಖಾಂತ್ಯಗೊಂಡಿದ್ದು, ಕೃತಿ ಚೌರ್ಯದ ಕಳಂಕ ಇನ್ನೂ ''ಲವ್ ಮಾಕ್ಟೇಲ್ 3''ಗೆ ತಾಕುವುದಿಲ್ಲ. ಸದ್ಯ ''ಲವ್ ಮಾಕ್ಟೇಲ್ 3'' ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮತ್ತೊಂದು ಕಡೆ ಗುರು ದೇಶಪಾಂಡೆ ನಿರ್ಮಾಣದಡಿ ''ರಾಮರಸ'' ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.


Click it and Unblock the Notifications











