'ಲವ್ ಆನ್ ಎನ್ಎಚ್ 4' ನಾಯಕಿಗೆ ಕೋಟಿ ಬಹುಮಾನ
'ಬಿಗ್ ಬಾಸ್' ಟೈಟಲ್ ಗೆದ್ದ ನಂತರ ಅಕುಲ್ ಬಾಲಾಜಿ ಮುಖ್ಯಭೂಮಿಕೆಯಲ್ಲಿರುವ ಚಿತ್ರಗಳಿಗೆ ಬಹಳ ಡಿಮ್ಯಾಂಡ್ ಸೃಷ್ಟಿಯಾಗಿದೆ. ಅಕುಲ್ ಅಭಿನಯಿಸುತ್ತಿರುವ ಲವ್ ಆನ್ ಎನ್ಎಚ್ 4 ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ.
ಈ ಚಿತ್ರ ಹಲವಾರು ವಿಶೇಷಗಳಿಂದ ಕೂಡಿದ್ದು ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷಿಸುವಂತಾಗಿದೆ. ಮಾಜಿ ಸಚಿವ ಎಸ್ ಎ ರಾಮದಾಸ್ ಮೇಲೆ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದಾರೆಂಬ ಆರೋಪ ಮಾಡಿರುವ ಪ್ರೇಮಾಕುಮಾರಿ ಈ ಚಿತ್ರದಲ್ಲಿ ಬಣ್ಣಹಚ್ಚಿರುವುದು ಒಂದು ವಿಶೇಷ. [ಸ್ಯಾಂಡಲ್ ವುಡ್ ಚಿತ್ರಕ್ಕೆ ಪ್ರೇಮಕುಮಾರಿ ಎಂಟ್ರಿ]

ಶ್ರೀಗುರು ಮಂತ್ರಾಲಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲಯನ್ ಶೃಂಗಾರ್ ಎಂ.ಸಂಜೀವ್ ಶೆಟ್ಟಿ ಹಾಗೂ ಲಯನ್ ಎಸ್. ವೆಂಕಟೇಶ್ ಅವರು ನಿರ್ಮಿಸುತ್ತಿರುವ ಚಿತ್ರ ಇದು. ಈ ಚಿತ್ರದ ನಾಯಕಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲುತ್ತಾಳೆ. ಈ ಸನ್ನಿವೇಶವನ್ನು ರಾಕ್ ಲೈನ್ ಸ್ಟುಡಿಯೋದಲ್ಲಿ ಚಿತ್ರಿಸಿಕೊಳ್ಳಲಾಯಿತು.
ಅಕುಲ್ ಬಾಲಾಜಿ, ತಿಲಕ್, ಮಾಧುರಿ ಹಾಗೂ ಮಾಡಲ್ಸ್ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅತಿಥಿಪಾತ್ರದಲ್ಲಿ ಶ್ರೀನಗರ ಕಿಟ್ಟಿ, ವಿ.ಮನೋಹರ್, ಚಿತ್ರಾ ಶೆಣೈ ಅಭಿನಯಿಸಿದ್ದಾರೆ. ನಿರ್ಮಾಪಕ ಲಯನ್ ಎಂ.ಸಂಜೀವ ಶೆಟ್ಟಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹತ್ತು ದಿನಗಳ ಚಿತ್ರೀಕರಣ ಬಾಕಿಯಿದೆ. ಡಿಸಂಬರ್ 24ರಿಂದ 31ರವರೆಗೂ ಹೈದರಾಬಾದ್ ನ ರಾಮೋಜಿ ಫಿಲಂಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ.
ಪತ್ರಕರ್ತ ಪಿ.ಎನ್.ಶ್ರೀನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ನಿರ್ದೇಶನವಿದೆ. ನಿರಂಜನ್ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಫೈವ್ ಸ್ಟಾರ್ ಗಣೇಶ್, ಇಮ್ರಾನ್, ಕಪಿಲ್, ಜಗ್ಗಿ ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಕುಲ್ ಬಾಲಾಜಿ, ತಿಲಕ್, ಮಾಧುರಿ, ಬುಲೆಟ್ ಪ್ರಕಾಶ್, ಮಂಡ್ಯ ರಮೇಶ್, ನಯನಕೃಷ್ಣ, ನರ್ಸ್ ಜಯಲಕ್ಷ್ಮೀ, ಮೈತ್ರೇಯ ಗೌಡ, ರ್ಯಾಪಿಡ್ ರಶ್ಮಿ, ರಾಕ್ ಸ್ಟಾರ್ ರೋಹಿತ್ ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











