ಐಪಿಎಲ್ ಸ್ಟಾರ್‌ಗೆ ಮನ ಸೋತ ಕನ್ನಡದ ಖ್ಯಾತ ನಟಿ, ಸದ್ದಿಲ್ಲದೇ ಎಂಗೇಜ್ ಆದ ಚೆಲುವೆ..!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ - ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ
ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ಈಗ ಕನ್ನಡದ ಚೆಲುವೆ ಅರ್ಚನಾ ಕೊಟ್ಟಿಗೆ ಕೂಡ ಸೇರಿಕೊಂಡಿದ್ದಾರೆ.

ಹೌದು, ಅರಣ್ಯಕಾಂಡ, ವಾಸು ನಾನ್ ಪಕ್ಕಾ ಕಮರ್ಷಿಯಲ್,ಡಿಯರ್ ಸತ್ಯಾ, ಯೆಲ್ಲೋ ಗ್ಯಾಂಗ್ಸ್, ಹೊಂದಿಸಿ ಬರೆಯಿರಿ, ಹೀಗೆ ಹಲವು ಚಿತ್ರಗಳ ಮೂಲಕ ಅನೇಕ ಕನ್ನಡ ಚಿತ್ರಪ್ರೇಮಿಗಳ ಹೃದಯವನ್ನು ಗೆದ್ದ ಅರ್ಚನಾ ಕೊಟ್ಟಿಗೆ ಸದ್ದಿಲ್ಲದೇ ಬಿ.ಆರ್.ಶರತ್ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.
ಇನ್ನು ಬಿ.ಆರ್.ಶರತ್ ವೃತ್ತಿಯಲ್ಲಿ ಕ್ರಿಕೆಟರ್. ಕರ್ನಾಟಕದ ರಣಜಿ ತಂಡದಲ್ಲಿ ಮಿಂಚಿರುವ ಶರತ್ ಐಪಿಎಲ್‌ನಲ್ಲಿ ಕೂಡ ಆಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದಾರೆ. ಕಳೆದ ವರ್ಷ ಜಾರ್ಖಂಡ್‌ನ ರಾಬಿನ್ ಮಿಂಜ್ ಗಾಯದ ಕಾರಣದಿಂದ ಹೊರ ಬಿದ್ದಾಗ ಬಿಆರ್ ಶರತ್ ಅವರಿಗೆ ಗುಜರಾತ್ ಟೈಟನ್ಸ್ ಕಡೆಯಿಂದ ಬುಲಾವ್ ಬಂದಿತ್ತು.
ರಣಜಿಯಲ್ಲಿ 20 ಪಂದ್ಯಗಳಲ್ಲಿ 616 ರನ್ ಬಾರಿಸಿರುವ ಶರತ್ ಒಂದು ಶತಕವನ್ನು ಕೂಡ ಸಿಡಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿ ಗುರುತಿಸಿಕೊಂಡಿರುವ ಇವರು T 20ಯಲ್ಲಿ ಇಲ್ಲಿಯವರೆಗೆ 29 ಪಂದ್ಯಗಳನ್ನು ಆಡಿದ್ದಾರೆ. ಒಂದು ಅರ್ಧ ಶತಕವನ್ನೊಳಗೊಂಡಂತೆ 330 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಬಿಜಾಪುರ್ ಬುಲ್ಸ್, ಮಂಗಳೂರ್ ಡ್ರ್ಯಾಗನ್ಸ್, ಶಿವಮೊಗ್ಗ ಸ್ಟ್ರೈಕರ್ಸ್ ತಂಡಗಳ ಪರವಾಗಿ ಆಡಿದ ಅನುಭವ ಇವರಿಗಿದೆ.
ಇಂಥಾ ಬಿ.ಆರ್.ಶರತ್ ಜೊತೆ ಇದೀಗ ಅರ್ಚನಾ ಕೊಟ್ಟಿಗೆ ಹೊಸ ಬದುಕಿಗೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ. ಇನ್ನು ಅರ್ಚನಾ ಮತ್ತು ಶರತ್ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್. ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ಸ್ನೇಹಿತರಾಗಿದ್ದರು. ವಿಶೇಷ ಅಂದರೆ ಶರತ್ ಕಾಲೇಜ್‌ನಲ್ಲಿ ಅರ್ಚನಾ ಅವರ ಸೀನಿಯರ್ ಆಗಿದ್ದರು.
ಹೆಚ್ಚು ಕಡಿಮೆ 8 ವರ್ಷಗಳಿಂದ ಜೊತೆಯಲ್ಲಿದ್ದ ಇಬ್ಬರು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಸುಖ ದುಖಗಳಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಇದೀಗ ತಮ್ಮ ಈ ಸಂಬಂಧಕ್ಕೆ ಮದುವೆಯ ಮುದ್ರೆ ಹಾಕಲು ಇಬ್ಬರು ಮುಂದಾಗಿದ್ದು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡು ಸದ್ಯ ಸದ್ದು ಮಾಡುತ್ತಿದ್ದಾರೆ. ಸುದ್ದಿಯಾಗುತ್ತಿದ್ದಾರೆ.
ಇನ್ನುಳಿದಂತೆ ಚಿತ್ರರಂಗಕ್ಕೆ ಬಂದ ಈ ಏಳು ವರ್ಷಗಳಲ್ಲಿ ಅರ್ಚನಾ ಹದಿಮೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ ಅಲಂಕಾರ್ ವಿದ್ಯಾರ್ಥಿ, ಶಬರಿ ಸರ್ಚಿಂಗ್ ಫಾರ್ ರಾವಣ, ರಕ್ತಾಕ್ಷ ಚಿತ್ರಗಳು ತೆರೆಗೆ ಬರಬೇಕಿವೆ.
ಹೀಗೆ ಕೈ ತುಂಬಾ ಅವಕಾಶಗಳನ್ನು ಹೊಂದಿರುವ ಅರ್ಚನಾ ಕೊಟ್ಟಿಗೆ, ಸದ್ಯ ನಿಶ್ಚಿತಾರ್ಥ ಮಾಡಿಕೊಂಡ ಹಿನ್ನೆಲೆ ಮುಂಬರುವ ದಿನಗಳಲ್ಲಿ ಅರ್ಚನಾ ಚಿತ್ರಗಳಲ್ಲಿ ಅಭಿನಯಿಸುತ್ತಾರಾ ಇಲ್ಲವಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಮದುವೆಯಾದ ನಂತರ ಅನೇಕರು ಮನೆ ಗಂಡ ಸಂಸಾರ ಎಂದು ಬ್ಯುಸಿಯಾಗುತ್ತಾರೆ. ಅರ್ಚನಾ ಈ ಸಾಲಿಗೆ ಸೇರುತ್ತಾರಾ ಅಥವಾ ಮದುವೆಯಾದ ನಂತರ ಕೂಡ ಅಭಿನಯಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಮದುವೆಯ ದಿನಾಂಕ ಮತ್ತು ತಮ್ಮ ಲವ್ ಸ್ಟೋರಿಯನ್ನು ಕೂಡ ಅರ್ಚನಾ ಇನ್ನು ಹಂಚಿಕೊಳ್ಳಬೇಕಿದೆ.


Click it and Unblock the Notifications










