'ಕಾಟೇರ' ಕಲಿಗಳಿಗೆ ಬಿಗ್ ಸರ್ಪ್ರೈಸ್; ಮೂವರಿಗೆ ಉಡುಗೊರೆಯಾಗಿ ಸಿಕ್ತು ಕಾರುಗಳು
ಕಷ್ಟಕ್ಕೆ ಫಲ ಸಿಗಬೇಕು, ಲಾಭದಲ್ಲಿ ಪಾಲು ಕೊಡಲೇಬೇಕು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ದಾಖಲೆಯ ಗೆಲುವು ಕಂಡಿತ್ತು. ಚಿತ್ರದ ಪ್ರತಿ ವಿಭಾಗದ ಶ್ರಮ ತೆರೆಮೇಲೆ ಬಂದು ಸಿನಿಮಾ ಪ್ರೇಕ್ಷಕರ ಮನ ತಣಿಸಿತ್ತು. ಇದೀಗ 'ಕಾಟೇರ' ಚಿತ್ರದ ಯಶಸ್ಸಿಗೆ ಹೆಗಲು ಕೊಟ್ಟ ಮೂವರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ.
ಹೌದು. ಇತ್ತೀಚೆಗೆ 'ಕಾಟೇರ' ಸಿನಿಮಾ ಶತದಿನೋತ್ಸವ ಆಚರಿಸಿತ್ತು. 40 ದಿನಕ್ಕೆ ಓಟಿಟಿಗೆ ಬಂದರೂ ಸಿನಿಮಾ ಚಿತ್ರಮಂದಿರಗಳಲ್ಲಿ 100 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ, ಛಾಯಾಗ್ರಹಣ, ಕಲಾ ನಿರ್ದೇಶನ, ಸಂಗೀತ, ನಟನೆ ಹೀಗೆ ಎಲ್ಲಾ ವಿಭಾಗಗಳಲ್ಲಿ ಚಿತ್ರ ಒಳ್ಳೆ ಸ್ಕೋರ್ ಮಾಡಿದ್ದು ಗೊತ್ತೇಯಿದೆ.

ಕನ್ನಡ ಸಿನಿಮಾಗಳಲ್ಲಿ ಒಳ್ಳೆ ಕಥೆಗಳು ಇರಲ್ಲ, ಕಥೆಗಾರರನ್ನು ಯಾರು ಬೆಳೆಸಲ್ಲ. ಒಳ್ಳೆ ಕಥೆ ಇಲ್ಲದೇ ಉತ್ತಮ ಸಿನಿಮಾ ಬರಲ್ಲ ಎಂದು ಗೊಣಗುವವರೇ ಹೆಚ್ಚು. ತರುಣ್ ಸುಧೀರ್ ಹಾಗೂ ಜಡೇಶ್ ಸೇರಿ ಕನ್ನಡ ಮಣ್ಣಿನ ಕಥೆಯನ್ನೇ ಕಟ್ಟಿದ್ದರು. ಹೊಲೆಮಾರಿ, ಉಳುವವನೆ ಭೂಮಿಯೆ ಒಡೆಯ ಕಾಯ್ದೆಯ ಸುತ್ತಾ ಸೊಗಸಾಗಿ 'ಕಾಟೇರ' ಕಥೆ ಕಟ್ಟಿದ್ದರು. ಅದನ್ನು ಅಷ್ಟೇ ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು.
'ಕಾಟೇರ' ಚಿತ್ರದ ಸಂಭಾಷಣೆ ಬಗ್ಗೆ ಮಾತನಾಡಲೇಬೇಕು. ಇದೀಗ ಚಿತ್ರದ ಜೀವಾಳ ಮಾಸ್ತಿ ಬರೆದ ಡೈಲಾಗ್ಸ್. ನಾಯಕ 'ಕಾಟೇರ'ನಿಗೆ ಮಾತ್ರ ಅಂತ ಎಲ್ಲಾ ಚಿತ್ರದ ಎಲ್ಲಾ ಕಲಾವಿದರಿಗೆ ಒಳ್ಳೆ ಸಂಭಾಷಣೆಯನ್ನು ಮಾಸ್ತಿ ಬರೆದಿದ್ದರು. ಯಾವುದೇ ಡೈಲಾಗ್ ಕಥೆಯಿಂದ ಹೊರಗೆ ಹೋಗದಂತೆ, 50 ವರ್ಷಗಳ ಹಿಂದಿನ ಕಥೆಗೆ ಬೇಕಾದಂತೆ ಪದಗಳನ್ನು ಕಟ್ಟಿಕೊಟ್ಟು ಗಮನ ಸೆಳೆದಿದ್ದರು. ಅದು ಉದ್ದುದ್ದ ಸಾಲುಗಳೇ ಇರಲಿ, ಒನ್ ಲೈನರ್‌ಗಳೇ ಇರಲಿ ಎಲ್ಲದರಲ್ಲೂ ಮಾಸ್ತಿ ಮಾಂಜಾ ಇತ್ತು.
"ಎಲ್ಲಾ ಹಾವುಗಳೂ ತಲೆ ಎತ್ತುತಾವೆ , ಕಾಳಿಂಗ ಸರ್ಪ ಮಾತ್ರಾನೇ ಹೆಡೆ ಎತ್ತೋದು". "ಗಂಡಸಾದವ್ನು ಬೆವರು ಸುರಿಸ್ಬೇಕೇ ಹೊರತು ಜೊಲ್ಲು ಸುರಿಸಬಾರದು". "ಮಷಾಣ ಕಾಯೋವ್ನಿಗೆ ಎಲುಬು ಹೊಸದಾ? ಕುಲುಮೇಲಿ ಕಾಯ್ಸೋನಿಗೆ ಮಚ್ಚು ಹೊಸದಾ ?".. "ಅನ್ನಾನ ದ್ಯಾವರು ಅಂತಾರೆ ಅಂತ ದ್ಯಾವರನ್ನ ಸೃಷ್ಟಿ ಮಾಡೋವ್ನು ರೈತ ಮಾತ್ರ".. ಹೀಗೆ ಮಾಸ್, ಕ್ಲಾಸ್ ಎನ್ನದೇ ಎಲ್ಲರೂ ಒಪ್ಪುವಂತಹ ಸಂಭಾಷಣೆ ಬರೆದು ಸಂಭಾಷಣೆಕಾರ ಮಾಸ್ತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮುಖ್ಯವಾಗಿ ನಿರ್ದೇಶಕ ತರುಣ್ ಸುಧೀರ್ ಜೊತೆ ಸೇರಿ ಜಡೇಶ್ ಹಂಪಿ ರಚಿಸಿದ ಕಥೆ, ಚಿತ್ರಕಥೆ ಹಾಗೂ ಮಾಸ್ತಿ ಸಂಭಾಷಣೆ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ಇವರಿಬ್ಬರ ಶ್ರಮದ ಬಗ್ಗೆ ಮಾತನಾಡಿದ್ದರು. ಇನ್ನು ನಟ ಸೂರಜ್ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್, ನೋವಿನ ನಡುವೆಯೂ ಕ್ಲೈಮ್ಯಾಕ್ಸ್‌ನಲ್ಲಿ ನಟಿಸಿದ್ದರು. ಸದ್ಯ ಮೂವರಿಗೆ ನಿರ್ಮಾಪಕರ ರಾಕ್‌ಲೈನ್ ವೆಂಕಟೇಶ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕೆಲವೊಮ್ಮೆ ಸಿನಿಮಾ ಸಕ್ಸಸ್ ಬಳಿಕ ಚಿತ್ರದ ನಾಯಕ ಅಥವಾ ನಿರ್ದೇಶಕರಿಗೆ ನಿರ್ಮಾಪಕರು ಕಾರುಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ನೋಡಿದ್ದೇವೆ. ಆದರೆ ತಂತ್ರಜ್ಞರನ್ನು, ಸಹ ನಟನ ಕೆಲಸವನ್ನು ಗುರ್ತಿಸಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕಾರುಗಳನ್ನು ನೀಡಿದ್ದಾರೆ. ದಿಢೀರನೆ ಸುದ್ದಿಗೋಷ್ಠಿ ನಡೆಸಿ ಮೂವರಿಗೂ ಖುದ್ದು ನಟ ದರ್ಶನ್ ಕಾರುಗಳನ್ನು ಹಸ್ತಾಂತರಿಸಿದ್ದಾರೆ.
ಮೂವರಿಗೂ 10 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರುಗಳನ್ನು ನಿರ್ಮಾಪಕರ ರಾಕ್‌ಲೈನ್ ವೆಂಕಟೇಶ್ ಉಡುಗೊರೆಯಾಗಿ ನೀಡಿದ್ದಾರೆ. ಮಾಸ್ತಿ, ಜಡೇಶ್, ಸೂರಜ್ ಮೂವರಿಗೆ ಇದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಸರ್‌ಪ್ರೈಸ್ ಆಗಿ ಕಾರುಗಳನ್ನು ನಿರ್ಮಾಪಕರು ನೀಡಿದ್ದಾರೆ. ಆ ಮೂಲಕ ಕಷ್ಟಪಟ್ಟು ಕೆಲಸ ಮಾಡಿದ ಎಲ್ಲರಿಗೂ ಲಾಭವನ್ನು ಹಂಚಬೇಕು ಎನ್ನುವುದನ್ನು ಸಾರಿ ಹೇಳಿದ್ದಾರೆ.


Click it and Unblock the Notifications











