twitter
    For Quick Alerts
    ALLOW NOTIFICATIONS  
    For Daily Alerts

    'ಮದಗಜ' ಸಿನಿಮಾ ಹಕ್ಕುಗಳನ್ನು ಒಳ್ಳೆಯ ಬೆಲೆಗೆ ಮಾರಿದ್ದೇನೆ: ಉಮಾಪತಿ ಶ್ರೀನಿವಾಸ್‌ಗೌಡ

    |

    ಚಂದನವನದ ಮಹಾತ್ವಾಕಾಂಕ್ಷಿ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ಸಿನಿಮಾದ ಜೊತೆ-ಜೊತೆಗೆ ಈಗ ರಾಜಕೀಯಕ್ಕೂ ಪದಾರ್ಪಣೆ ಮಾಡಿದ್ದಾರೆ. ಉಮಾಪತಿ ಶ್ರೀನಿವಾಸ್‌ಗೌಡ ಅವರು ಒಕ್ಕಲಿಗರ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

    ಉಮಾಪತಿ ಶ್ರೀನಿವಾಸ್‌ಗೌಡ ನಿರ್ಮಿಸಿರುವ 'ಮದಗಜ' ಸಿನಿಮಾ ಡಿಸೆಂಬರ್ 03ರಂದು ಬಿಡುಗಡೆ ಆಗಲಿದೆ. ಆದರೆ ಈ ನಡುವೆ ಉಮಾಪತಿ ಶ್ರೀನಿವಾಸ್‌ಗೌಡ ಅವರು ಒಕ್ಕಲಿಗರ ಸಂಘದ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜೊತೆಗೆ ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದಾರೆ.

    ಒಕ್ಕಲಿಗರ ಸಂಘದ ಚುನಾವಣೆ ಪ್ರಚಾರಕ್ಕೆಂದು ರಾಮನಗರಕ್ಕೆ ಆಗಮಿಸಿದ್ದ ಉಮಾಪತಿ ಶ್ರೀನಿವಾಸ್‌ಗೌಡ, ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ಸಿನಿಮಾ ನನಗೆ ಅನ್ನ, ಕೀರ್ತಿ, ಹಣ ಎಲ್ಲವನ್ನೂ ಕೊಟ್ಟಿದೆ ಹಾಗಾಗಿ ಸಿನಿಮಾ ಮತ್ತು ರಾಜಕೀಯ ಎರಡೂ ನನಗೆ ಎರಡು ಕಣ್ಣುಗಳಿದ್ದಂತೆ. ಎರಡನ್ನೂ ಸಮಾನವಾಗಿ ನಿರ್ವಹಿಸಿಕೊಂಡು ಹೋಗುವ ಕಾರ್ಯ ಮಾಡುತ್ತೇನೆ'' ಎಂದಿದ್ದಾರೆ.

    'ಮದಗಜ' ಸಿನಿಮಾ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟ

    'ಮದಗಜ' ಸಿನಿಮಾ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟ

    ''ಮದಗಜ' ಸಿನಿಮಾ ಡಿಸೆಂಬರ್ 03ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಅಗತ್ಯವಾಗಿ ಏನು ಬೇಕೊ ಎಲ್ಲವನ್ನೂ ಮಾಡಿದ್ದೇನೆ. ಇನ್ನು ಈ ಚುನಾವಣೆ ಸಹ ನನಗೆ ಅದರಷ್ಟೆ ಮುಖ್ಯವಾದುದು ಹಾಗಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೇನೆ. 'ಮದಗಜ' ಸಿನಿಮಾದ ಹಕ್ಕುಗಳನ್ನು ಬಹಳ ಒಳ್ಳೆಯ ಮೊತ್ತಕ್ಕೆ ಮಾರಾಟ ಮಾಡಿದ್ದೇನೆ. ಸಿನಿಮಾ ಬಗ್ಗೆ ಖುಷಿ ಇದೆ ನನಗೆ. ಸಿನಿಮಾ ಸಹ ಚೆನ್ನಾಗಿ ಓಡಲಿದೆ ಎಂಬ ವಿಶ್ವಾಸವಿದೆ'' ಎಂದಿದ್ದಾರೆ ಉಮಾಪತಿ ಶ್ರೀನಿವಾಸ್‌ಗೌಡ.

    ಡಿಸೆಂಬರ್‌ನಲ್ಲಿ ಇನ್ನಷ್ಟು ಒಳ್ಳೆಯ ಸುದ್ದಿ ಕೊಡಲಿದ್ದೇನೆ: ಉಮಾಪತಿ

    ಡಿಸೆಂಬರ್‌ನಲ್ಲಿ ಇನ್ನಷ್ಟು ಒಳ್ಳೆಯ ಸುದ್ದಿ ಕೊಡಲಿದ್ದೇನೆ: ಉಮಾಪತಿ

    ''ಸಿನಿಮಾ ಚೆನ್ನಾಗಿ ಆಗಿರುವ ಕಾರಣಕ್ಕೆ ನಾನು ಇಲ್ಲಿಗೆ (ಪ್ರಚಾರಕ್ಕೆ) ಬಂದಿದ್ದೇನೆ. ಡಿಸೆಂಬರ್‌ ನನಗೆ ವೈಯಕ್ತಿಕವಾಗಿ ಅದೃಷ್ಟದ ತಿಂಗಳು. ಇನ್ನು ಮುಂದಿನ ಹತ್ತು-ಹದಿನೈದು ದಿನಗಳಲ್ಲಿ ಸಾಕಷ್ಟು ಒಳ್ಳೆಯ ಸುದ್ದಿಗಳನ್ನು ನೀಡಲಿದ್ದೇನೆ'' ಎಂದ ಉಮಾಪತಿ, ರಾಜಕೀಯದಲ್ಲಿ ಮುಂದುವರೆಯುವಿರಾ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ''ಖಂಡಿತವಾಗಿಯೂ ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ. ನನಗೆ ನಾನು ಬೇಲಿ ಏಕೆ ಹಾಕಿಕೊಳ್ಳಲಿ. ರಾಜಕೀಯದಲ್ಲಿ ನನಗೆ ಆಸಕ್ತಿ ಇದೆ, ನಾನು ರಾಜಕೀಯ ಮಾಡುತ್ತೇನೆ, ಸಿನಿಮಾದಲ್ಲಿ ಯಶಸ್ಸು ಸಿಕ್ಕಂತೆ ರಾಜಕೀಯದಲ್ಲಿಯೂ ಯಶಸ್ವಿಯಾಗುತ್ತೇನೆ'' ಎಂದರು.

    ಸ್ವಂತ ಹಣದಲ್ಲಿ ಆಸ್ಪತ್ರೆ ನಿರ್ಮಿಸುವೆ: ಉಮಾಪತಿ

    ಸ್ವಂತ ಹಣದಲ್ಲಿ ಆಸ್ಪತ್ರೆ ನಿರ್ಮಿಸುವೆ: ಉಮಾಪತಿ

    ಚುನಾವಣೆ ಬಗ್ಗೆ ಮಾತನಾಡಿದ ಉಮಾಪತಿ ಶ್ರೀನಿವಾಸ್‌ಗೌಡ, ''ನನಗೆ ಹಾಗೂ ನಮ್ಮ ತಂಡಕ್ಕೆ ಮತ ಹಾಕಲು ಸಾಕಷ್ಟು ಕಾರಣಗಳನ್ನು ನಾವು ನೀಡಿದ್ದೇನೆ. ನಾನು ಸಹ ವೈಯಕ್ತಿಕವಾಗಿ ನನ್ನ ಹಣದಿಂದ ಏನು ಮಾಡಬಲ್ಲೆ ಎಂಬುದನ್ನಷ್ಟೆ ಆಶ್ವಾಸನೆಯಾಗಿ ನೀಡುತ್ತಿದ್ದೇನೆ. ಸಂಘದ ಹಣದಲ್ಲಿ ಏನು ಮಾಡುತ್ತೇನೆ ಎಂಬ ಭರವಸೆಯನ್ನು ನಾನು ನೀಡಿಲ್ಲ. ನಾನು ಗೆದ್ದರೆ 12 ಹೋಬಳಿಗಳಲ್ಲಿ ನನ್ನ ಸ್ವಂತ ಹಣದಲ್ಲಿ ಜನಾರ್ಧನ ಆಸ್ಪತ್ರೆಗಳನ್ನು ನಿರ್ಮಿಸುತ್ತೇನೆ. ಸಂಘದ ಹಣಕ್ಕೆ ನಾನೊಬ್ಬನೇ ವಾರಸುದಾರನಲ್ಲ, ಗೆದ್ದ ಮೇಲೆ ಎಲ್ಲ ಒಟ್ಟಿಗೆ ಸೇರಿ ತೀರ್ಮಾನ ಮಾಡಬೇಕಾದ ವಿಷಯವದು, ಹಾಗಾಗಿ ನಾನು ನನ್ನ ಹಣದಲ್ಲಿ ಏನು ಮಾಡಬಲ್ಲೆ ಎಂಬುದನ್ನಷ್ಟೆ ಹೇಳುತ್ತಿದ್ದೇನೆ'' ಎಂದು ಭರವಸೆ ನೀಡಿದರು.

    ಚುನಾವಣೆ ಎಂಬುದು ಗೆರಿಲ್ಲಾ ಯುದ್ಧದಂತೆ: ಉಮಾಪತಿ

    ಚುನಾವಣೆ ಎಂಬುದು ಗೆರಿಲ್ಲಾ ಯುದ್ಧದಂತೆ: ಉಮಾಪತಿ

    ರಾಜಕೀಯವು ಸಿನಿಮಾ ವೃತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಲ್ಲವೆ? ಎಂಬ ಪ್ರಶ್ನೆಗೆ ಉತ್ತರಿಸಿದ ಉಮಾಪತಿ ಶ್ರೀನಿವಾಸ್, ''ಚುನಾವಣೆ ಎಂಬುದು ಗೆರಿಲ್ಲಾ ಯುದ್ಧವಿದ್ದಂತೆ ಮರೆಯಲ್ಲಿ ನಿಂತು ಆಯುಧ ಎಸೆಯುವವರೆ ಎಲ್ಲ. ಕಲ್ಲು ಬೀಳಬಹುದು, ಬಂದೂಕಿನ ಗುಂಡೂ ಬೀಳಬಹುದು ಅದನ್ನೆಲ್ಲ ಎದುರಿಸಿ ನಿಂತರಷ್ಟೆ ನಾಯಕನಾಗಲು ಸಾಧ್ಯ. ಸಿನಿಮಾದಲ್ಲಿಯೂ ಸಹ ಯಶಸ್ಸು ಸುಲಭವಾಗೇನೂ ಇಲ್ಲ. ನಾನು ಕಡಿಮೆ ಅವಧಿಯಲ್ಲಿ ಯಶಸ್ಸು ಗಳಿಸಿದೆ ಎಂದು ಹೇಳುತ್ತಾರೆ. ಆದರೆ ಅದಕ್ಕಾಗಿ ನಾನು ಸಾಕಷ್ಟು ಶ್ರಮ ಮಟ್ಟಿದ್ದೇನೆ. ದಿನದ 24ಗಂಟೆಯೂ ನಿಲ್ಲದೆ ಕೆಲಸ ಮಾಡಿದ ದಿನಗಳು ಸಹ ಇವೆ'' ಎಂದರು ಉಮಾಪತಿ ಶ್ರೀನಿವಾಸ್‌ ಗೌಡ.

    English summary
    Producer Umapathy Shrinivas Gowda said Madagaja movie rights sold to very good amount. He is contested in Okkaliga election, he is in campaign.
    Wednesday, December 1, 2021, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X