»   » ಬಾಲಿವುಡ್‌ಗೆ ಮಾಜಿಗಳಾಗುವ ಹೊಸ್ತಿಲಲ್ಲಿರುವ ಮಾಧುರಿ

ಬಾಲಿವುಡ್‌ಗೆ ಮಾಜಿಗಳಾಗುವ ಹೊಸ್ತಿಲಲ್ಲಿರುವ ಮಾಧುರಿ

Posted By: Super
Subscribe to Filmibeat Kannada

ಬಾಲಿವುಡ್‌ನಲ್ಲಿ ಬೇಡಿಕೆ ಕಳಕೊಂಡಿರುವ ಮಾಧುರಿ ದೀಕ್ಷಿತ್‌ ಮತ್ತು ನಟನೆಗೆ ಹೆಸರಾಗಿದ್ದರೂ, ಕೇವಲ ಎರಡೇ ಚಿತ್ರಗಳ ಕೆಲಸದಲ್ಲಿ ತೊಡಗಿರುವ ತಬು ಕನ್ನಡಕ್ಕೆ ಬರುತ್ತಿದ್ದಾರೆ. ತರುತ್ತಿರುವವರು ಭಕ್ತಿ ರಸವನ್ನು ಮನದಲ್ಲಿ ತುಂಬಿಕೊಂಡಿರುವ ಜಯಶ್ರೀ ದೇವಿ.

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಶ್ರೀ ಮಂಜುನಾಥ ಚಿತ್ರವನ್ನು ತೆರೆಗೆ ತಂದ ಜಯಶ್ರೀದೇವಿ ಅವರಿಗೆ ಕಾಸು ಗಿಟ್ಟಿದೆ ಅಂತ ತೋರುತ್ತದೆ. ಅದಕ್ಕೇ ಅದೇ ರೀತಿಯ ಇನ್ನೊಂದು ಯತ್ನವಾಗಿ 'ಜಗಜ್ಜನನಿ" ಸಿದ್ಧವಾಗುತ್ತಿದೆ. ಇದರಲ್ಲೂ ಹಿಂಡುಗಟ್ಟಲೆ ತಾರೆಗಳಿದ್ದಾರೆ. ರಾಮ್‌ಕುಮಾರ್‌, ಅನು ಪ್ರಭಾಕರ್‌ ತಾರಾಗಣದಲ್ಲಿದ್ದಾರೆ. ಮೀನು ಕಣ್ಣಿನ ಮೀನಾ ಆಕರ್ಷಣೆಯೂ ಇರಲಿದೆ.

ನಮ್ಮೂರಿನ ತಾರಾಬಳಗ ಈ ಚಿತ್ರದಲ್ಲಿ ನಟಿಸುತ್ತಿರುವುದು ಗಾಂಧಿನಗರಿಗಳಿಗೆ ಗೊತ್ತಿತ್ತು. ಆದರೆ ಈ ಚಿತ್ರಕ್ಕೆ ಮಾಧುರಿ ಹಾಗೂ ತಬು ಯಾಕೆ ? ಮಾಧುರಿ ಮಾಡುತ್ತಿರುವ ಪಾತ್ರ ಜೈ ಸಂತೋಷಿ ಮಾತೆಯದು. ಉತ್ತರ ಭಾರತದಲ್ಲಿ ಸಂತೋಷಿ ಮಾ ಕುರಿತ ಕೆಸೆಟ್ಟುಗಳೇ ಗಲ್ಲಾ ತುಂಬಿಸುತ್ತಿರುವಾಗ, ಮಾಧುರಿಯೇ ಆ ದೇವಿಯಾದರೆ?! ಬಹುಶಃ ಜಗಜ್ಜನನಿ ಹಿಂದಿಯಲ್ಲೂ ಡಬ್ಬೋ ರೀಮೇಕೋ ಆಗುವ ಸಾಧ್ಯತೆ ಇಲ್ಲದಿಲ್ಲ .

ದೇವಿಯವರ ಈ ದೇವೀ ವರಸೆ ಕಂಡು ಬಾಯ ಮೇಲೆ ಬೆರಳಿಟ್ಟುಕೊಂಡವರಲ್ಲಿ ಪ್ರಮುಖರು ಉಪೇಂದ್ರ. ಯಾಕೆಂದರೆ ಮಾಧುರಿಯನ್ನು ಕರೆ ತರುವ ವಿಫಲ ಯತ್ನ ಮಾಡಿದವರಲ್ಲಿ ಇವರೂ ಒಬ್ಬರು.

ಮಾಧುರಿ ಯಾಕೆ ಒಪ್ಪಿರಬಹುದು?

ಬಾಲಿವುಡ್‌ನಲ್ಲಿ ಮದುವೆಯಾದ ನಟಿಯರಿಗೆಲ್ಲಾ ಈಗ ಲತ್ತೆ. ಮೊನ್ನೆ ಬಿಡುಗಡೆಯಾದ 'ಯೇ ಹೈ ರಾಸ್ತೆ ಪ್ಯಾರ್‌ ಕೇ" ತೋಪಾಗುವ ಮೂಲಕ ಜ್ಯೂಹಿಗೆ ಒದಗಿರುವ ಸ್ಥಿತಿಯೇ ಮಾಧುರಿಗೂ ಸಂದಿದೆ. ಕರೀನಾ ಅಲೆಯಲ್ಲಿ ಕೊಚ್ಚಿ ಹೋಗಿರುವವರ ಪೈಕಿ ತಬು ಕೂಡ ಒಬ್ಬರಾಗಿದ್ದಾರೆ. ಈ ಕಾರಣಕ್ಕೇ ಕೆಲವು ಚಿತ್ರಕತೆ ರಚನಕಾರರು ಅತ್ತ ಅಮ್ಮನ ಪಾತ್ರಕ್ಕೆ ತೀರಾ ಚಿಕ್ಕವರಾದ, ಬಿಂದಾಸ್‌ ನಾಯಕಿಯಾಗಿ ಮಾಜಿಯಾಗಿರುವ ಮಾಧುರಿಗಾಗಿಯೇ ವಿಶೇಷ ಕತೆ ಬರೆಯುತ್ತಿದ್ದಾರಂತೆ. ಇನ್ನು ತಬು ಕೈಲಿರುವುದು ಎರಡೇ ಚಿತ್ರಗಳು. ಅವುಗಳ ಕೆಲಸವೂ ಹೆಚ್ಚೂ ಕಮ್ಮಿ ಮುಗಿದಿದೆ. ದಕ್ಷಿಣ ಭಾರತದವರೂ ತಬುಗೆ ಸದ್ಯಕ್ಕೆ ಬುಲಾವು ಕೊಟ್ಟಿಲ್ಲ.

ಈ ಹಿನ್ನೆಲೆಯಲ್ಲಿ ಜಯಶ್ರೀದೇವಿ ಕರೆಗೆ ಈ ಇಬ್ಬರೂ ಓಗೊಟ್ಟಿರುವುದು ಅಷ್ಟೇನೂ ಅಚ್ಚರಿಯಲ್ಲದಿದ್ದರೂ, ಕನ್ನಡಿಗರೇ ಈ ಕೆಲಸ ಮಾಡಲಾಗಲಿಲ್ಲವಲ್ಲ ಎಂದು ಸ್ಯಾಂಡಲ್‌ವುಡ್‌ನ ಕೆಲವರು ಕೈ ಹಿಸುಕಿಕೊಳ್ಳುತ್ತಿರುವುದಂತೂ ನಿಜ. ಮಂಜುನಾಥನಿಗಿಂತ ಒಂದು ಬೊಗಸೆ ಜಾಸ್ತಿ ಗ್ರಾಫಿಕ್‌ ತಂತ್ರ ಜಗಜ್ಜನನಿಯಲ್ಲಿ ಕಾಣಲಿದೆ. ಮಾಧುರಿ ದೇವತೆಯಾಗಿ ನಟಿಸುತ್ತಿರುವುದರಿಂದ ಮಳೆ ಹಾಡಿನಲ್ಲಿ ಆಕೆ ನೆನೆಯುವುದಿಲ್ಲ ಎಂದಿಟ್ಟುಕೊಳ್ಳಬಹುದು. ಈ ಕಾರಣಕ್ಕಾಗಿ ಇತರೆ ಬಾಲಿವುಡ್‌ ನಟಿಯರಿಗಿಂತ ಸ್ಯಾಂಡಲ್‌ವುಡ್‌ಗೆ ಇದು ವಿಶಿಷ್ಟ ಎಂಟ್ರಿ. 

English summary
Jayasridevi introduces madhuri tabu to Kannada silver screen

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada