ಡಾ. ರಾಜ್ ಕಿಡ್ನ್ಯಾಪ್ ಕೇಸ್; 9 ಆರೋಪಿಗಳನ್ನು ಆರೋಪ ಮುಕ್ತಗೊಳಿಸಿದ ಮದ್ರಾಸ್ ಹೈಕೋರ್ಟ್
ವರನಟ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣದಲ್ಲಿ ಬರೋಬ್ಬರಿ 25 ವರ್ಷಗಳ ಬಳಿಕ 9 ಆರೋಪಿಗಳನ್ನು ಮದ್ರಾಸ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿದೆ. 18 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದು 2018ರಲ್ಲಿ ಗೋಪಿಶೆಟ್ಟಿಪಾಳ್ಯದ 3ನೇ ಸೆಷನ್ಸ್ ನ್ಯಾಯಾಲಯ 9 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ ತಮಿಳುನಾಡು ಸರ್ಕಾರ 2019ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್‌ನಲ್ಲಿ ಕೂಡ ಹಿನ್ನಡೆಯಾಗಿದೆ.
26 ವರ್ಷಗಳ ಹಿಂದೆ ನಡೆದಿದ್ದ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. 30 ಜುಲೈ 2000 ರಂದು ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಅಪಹರಿಸಿ ಕಾಡಿಗೆ ಕರೆದುಕೊಂಡು ಹೋಗಿದ್ದ. 108 ದಿನಗಳ ಕಾಲ ಡಾ. ರಾಜ್ ಅಲ್ಲೇ ಆತನ ಜೊತೆ ಇರುವಂತಾಗಿತ್ತು. ಕಾಡು ಮೇಡು ಅಲೆಯುವಂತಾಗಿತ್ತು. ಆ ಬಳಿಕ ಬಿಡುಗಡೆ ಆಗಿ ವಾಪಸ್ ಬಂದಿದ್ದರು. ಈ ಪ್ರಕರಣದಲ್ಲಿ ವೀರಪ್ಪನ್ ಸೇರಿ 14 ಜನರನ್ನು ಆರೋಪಿಗಳಾಗಿ ತನಿಖಾಧಿಕಾರಿಗಳು ಹೆಸರಿಸಿದ್ದರು. ಚಾರ್ಜ್‌ಶೀಟ್ ಸಲ್ಲಿಸುವ ಮುನ್ನ ವೀರಪ್ಪನ್, ಸೇತುಕುಳಿ ಗೋವಿಂದನ್ ಹಾಗೂ ಚಂದ್ರಗೌಡ ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು.

ಪ್ರಕರಣದ ಒಬ್ಬ ಆರೋಪಿ ರಮೇಶ್ ತಲೆ ಮರೆಸಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಮೃತಪಟ್ಟಿದ್ದ. ಹಾಗಾಗಿ ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಮಾರನ್, ಸೆಲ್ವನ್, ಅಮೃಥಲಿಂಗಂ, ನಾಗರಾಜ್, ಪುಟ್ಟುಸ್ವಾಮಿ, ಕಲ್ಮಂಡಿ ರಾಮನ್ ಇದೀಗ ಆರೋಪ ಮುಕ್ತರಾಗಿದ್ದಾರೆ. ವೀರಪ್ಪನ್ ಸಹಚರರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ ಸೆಷನ್ ಕೋರ್ಟ್ ನೀಡಿದ್ದ ತೀರ್ಪನ್ನು ಇದೀಗ ಮದ್ರಾಸ್ ಹೈಕೋರ್ಟ್ ಅಂತಿಮಗೊಳಿಸಿ ಆದೇಶ ಹೊರಡಿಸಿದೆ.
ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರಿದ್ದ ದ್ವಿಸದಸ್ಯ ಪೀಠ ತಮಿಳುನಾಡು ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ. ಗಾಜನೂರು ಸಮೀಪದ ಈರೋಡ್ ಜಿಲ್ಲೆಯ ತಾಳವಾಡಿ ಬಳಿ ಇದ್ದ ತೋಟದ ಮನೆಯಲ್ಲಿ ಅಂದು ಅಣ್ಣಾವ್ರು ತಂಗಿದ್ದರು. ರಾತ್ರಿ ಸುಮಾರು 9:30 ರಿಂದ 10:00 ಗಂಟೆಯ ಸಮಯದಲ್ಲಿ ರಾತ್ರಿ ಸುಮಾರು 9:30 ರಿಂದ 10:00 ಗಂಟೆಯ ಸಮಯದಲ್ಲಿ ವೀರಪ್ಪನ್ ತನ್ನ ಸಹಚರರ ಜೊತೆ ಬಂದು ಅಣ್ಣಾವ್ರನ್ನು ಕರೆದುಕೊಂಡು ಹೋಗಿದ್ದ.
ಅಣ್ಣಾವ್ರ ಜೊತೆ ಅಂದು ಅವರ ಅಳಿಯ ಎಸ್‌ಎ ಗೋವಿಂದರಾಜ್, ಮತ್ತೊಬ್ಬ ಸಂಬಂಧಿ ನಾಗೇಶ್ ಹಾಗೂ ಸಹನಿರ್ದೆಶಕ ನಾಗಪ್ಪ ಮಾರಡಗಿ ಎಂಬುವರರನ್ನು ವೀರಪ್ಪನ್ ಅಪಹರಿಸಿದ್ದ. ತನ್ನ ಒಂದಷ್ಟು ಬೇಡಿಕೆಗಳಿವೆ. ಅದನ್ನು ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳು ಈಡೇರಿಸುವವರೆಗೂ ನೀವು ನಮ್ಮ ಜೊತೆ ಇರಬೇಕು ಎಂದು ವೀರಪ್ಪನ್ ಹೇಳಿ ಅಣ್ಣಾವ್ರನ್ನು ಕರೆದುಕೊಂಡಿದ್ದನು. ಆತನ ಮಾತಿಗೆ ಮರು ಮಾತನಾಡದೇ ಡಾ. ರಾಜ್ ಹೋಗಿದ್ದರು. ಆಗ ಅವರಿಗೆ 71 ವರ್ಷ ವಯಸ್ಸಾಗಿತ್ತು.
ಅಣ್ಣಾವ್ರ ಕಿಡ್ನ್ಯಾಪ್ ವಿಚಾರ ಇಡೀ ರಾಜ್ಯಕ್ಕೆ ಆಘಾತ ತಂದಿತ್ತು. ಆ ಸಮಯದಲ್ಲಿ ಚಿತ್ರರಂಗ ಕೂಡ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. 108 ದಿನಗಳ ಕಾಲ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಇಡೀ ರಾಜ್ಯವೇ ವರನಟ ಕ್ಷೇಮವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸಿತ್ತು. ಅಣ್ಣಾವ್ರು ಸುರಕ್ಷಿತವಾಗಿ ಬರಲಿ ಎಂದು ಅಭಿಮಾನಿಗಳು ನೋವು ನುಂಗಿಕೊಂಡು ಕಾಲ ಕಳೆದಿದ್ದರು.


Click it and Unblock the Notifications











