»   » ಮದುವೆ, ಮರುಮದುವೆ, ಮತ್ತೆ ಮದುವೆ

ಮದುವೆ, ಮರುಮದುವೆ, ಮತ್ತೆ ಮದುವೆ

Posted By: Staff
Subscribe to Filmibeat Kannada

ಬೆಂಗಳೂರು : ರೀಲು ತಿನ್ನುವ ನಿಧಾನಗತಿ ನಿರ್ದೇಶಕ ಎಂಬ ಟೈಟಲ್‌ ಹೊತ್ತುಕೊಂಡಿರುವ ನಿರ್ದೇಶಕ ಓಂ ಪ್ರಕಾಶ್‌ ಮತ್ತೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇದೇ ತಿಂಗಳ 13ರಂದು ಪ್ರಕಾಶ್‌ ಕೊಡಗಿನ ಬೆಡಗಿ ಭವ್ಯ ಪೆಮ್ಮಯ ಅವರನ್ನು ತಿರುಪತಿಯಲ್ಲಿ ವರಿಸಿದರು.

ಸ್ಯಾಂಡಲ್‌ವುಡ್‌ನಲ್ಲಿ ನಿಧಾನ ಗತಿಯ ನಿರ್ದೇಶಕ ಎನಿಸಿಕೊಂಡಿದ್ದರೂ, ಮದುವೆ ವಿಚಾರದಲ್ಲಿ ಅವರು ನಿಧಾನ ಮಾಡಿದ್ದಿಲ್ಲ. ಟಿ.ವಿ. ಸೀರಿಯಲ್‌ಗಳಲ್ಲಿ ನಟಿಸುವ ಆಸೆಯಿಂದ ಬೆಂಗಳೂರಿಗೆ ಬಂದ ಭವ್ಯಾ ಪೆಮ್ಮಯ ಅವರನ್ನು ಪ್ರೀತಿಸಿ ಓಂ ಪ್ರಕಾಶ್‌ ಮದುವೆ ಆಗಿದ್ದಾರೆ. ಈ ಹಿಂದೆ ಹಾಸ್ಯ ನಟಿ ರೇಖಾದಾಸ್‌ ಅವರನ್ನು ಮದುವೆಯಾಗಿದ್ದ ಓಂಪ್ರಕಾಶ್‌ ವಿವಾಹ ವಿಚ್ಛೇದನವನ್ನೂ ಪಡೆದಿದ್ದರು.

ಲಾಕಪ್‌ಡೆತ್‌, ಸಿಂಹದ ಮರಿ, ಎ.ಕೆ. 47, ವಂದೇಮಾತರಂ ಮುಂತಾದ ಬಿಗ್‌ ಬ್ಯಾನರ್‌ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಕಾಶ್‌ ಈಗ ನಿರ್ದೇಶಿಸುತ್ತಿರುವ ಚಿತ್ರ ಹುಚ್ಚ. ಸ್ಪರ್ಶ ಖ್ಯಾತಿಯ ಸುದೀಪ್‌ ಈ ಚಿತ್ರದ ನಾಯಕ. ಈ ನಾಯಕ ಕೂಡ ತಮ್ಮ ನಿರ್ದೇಶಕರ ಹಾದಿಯನ್ನೇ ಹಿಡಿದಿದ್ದಾರೆ. ಹುಚ್ಚ ಚಿತ್ರ ಬಿಡುಗಡೆಯಾಗುವ ಮೊದಲೇ ಸುದೀಪ್‌ ಕೂಡ ತಾವು ಮೆಚ್ಚಿದ ಹುಡುಗಿಯನ್ನು ವರಿಸುವ ಹಾದಿಯಲ್ಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಈಗಂತೂ ಬರಿ ಮದುವೆ, ಮರುಮದುವೆ, ತೊಟ್ಟಿಲಿನ ಸುದ್ದಿಗಳೇ, ನಿನ್ನೆ ಮೊನ್ನೆಯಷ್ಟೇ ನಿಂಬೆಹಣ್ಣಿನಂತ ಹುಡುಗಿ ಪ್ರೇಮಲೋಕದ ಜೂಹಿ ಮಗುವಿನ ತಾಯಿಯಾದರೆ, ರಣಧೀರನ ನಾಯಕಿ ಖುಷ್ಬೂ ತಮ್ಮ ಮೂರು ತಿಂಗಳ ಮಗುವಿನೊಂದಿಗೆ ಬೆಂಗಳೂರಲ್ಲಿ ಪ್ರತ್ಯಕ್ಷರಾಗಿದ್ದರು. ನಂಜುಂಡಿ ಕಲ್ಯಾಣದ ಮಾಲಾಶ್ರೀ ಸೀಮಂತ ಮಾಡಿಕೊಂಡು ಮಗುವನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಾ ಲಾಲಿ ಹಾಡುತ್ತಿದ್ದಾರೆ.

ಸುಧಾರಾಣಿ, ತಾರಾ, ಅವಿನಾಶ್‌, ಮಾಳವಿಕಾ, ಸುಮನ್‌ ನಗರ್‌ಕರ್‌, ವಾಣಿಶ್ರೀ ಮದುವೆಗಳ ಸರಣಿಯಲ್ಲಿ ಈಗ ಸುದೀಪ್‌ ಮದುವೆಯ ಸುದ್ದಿಯ ಮುಂಚೆಯೇ ಸುದೀಪ್‌ ನಟಿಸುತ್ತಿರುವ ಹುಚ್ಚ ಚಿತ್ರದ ನಿರ್ದೇಶಕರು ಮದುವೆ ಸುದ್ದಿ ಹೊರಬಿದ್ದಿದೆ.

English summary
Love and marriage and remarriage in Kannada tinsel town

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada