ಒಂದಕ್ಕಿಂತ ಒಂದು ಸಖತ್ ಮಾಸ್: ಅಬ್ಬಬ್ಬಾ ಪ್ರಜ್ಜು ಕೈಯಲ್ಲಿವೆ ಅರ್ಧ ಡಜನ್ ಚಿತ್ರಗಳು
ಸೋಲು ಗೆಲುವಿನ ಲೆಕ್ಕ ಹಾಕದೇ ನಟ ಪ್ರಜ್ವಲ್ ದೇವರಾಜ್ ಸಿನಿಮಾ ಮಾಡುತ್ತಾ ಸಾಗುತ್ತಿದ್ದಾರೆ. ಸದ್ಯ ಡೈನಾಮಿಕ್ ಪ್ರಿನ್ಸ್ ಕೈಯಲ್ಲಿ ಒಂದಲ್ಲ ಎರಡಲ್ಲ 6 ಸಿನಿಮಾಗಳಿವೆ. ಒಂದಕ್ಕಿಂತ ಒಂದು ವಿಭಿನ್ನ ಟೈಟಲ್ ಹಾಗೂ ಸ್ಟೋರಿಲೈನ್‌ನಿಂದ ಕುತೂಹಲ ಮೂಡಿಸಿವೆ. ನಿಧಾನವಾಗಿ ಒಂದೊಂದೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
'ಜಂಟಲ್‌ಮನ್' ಬಳಿಕ ಪ್ರಜ್ವಲ್ ದೇವರಾಜ್ ನಟಿಸಿದ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. 'ಇನ್ಸ್‌ಪೆಕ್ಟರ್ ವಿಕ್ರಂ' ಕೊಂಚಮಟ್ಟಿಗೆ ಕುತೂಹಲ ಮೂಡಿಸಿದ್ದರು ದೊಡ್ಡ ಮಟ್ಟದ ಗೆಲುವು ಸಿಗಲಿಲ್ಲ. ಇದೀಗ 'ಮಾಫಿಯಾ', 'ಚೀತಾ', 'ಜಾತರ', 'ಗಣ', 'ಕರಾವಳಿ', 'ರಾಕ್ಷಸ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಪ್ರಜ್ಜು ನಟಿಸುತ್ತಿದ್ದಾರೆ. ಎಲ್ಲವೂ ಮಾಸ್ ಸಿನಿಮಾಗಳೇ.

1. ಗಣ
ಹರಿಪ್ರಸಾದ್ ಜಕ್ಕ ನಿರ್ದೇಶನದ 'ಗಣ' ಸಿನಿಮಾ ಟೀಸರ್, ಸಾಂಗ್ಸ್ ಈಗಾಗಲೇ ರಿಲೀಸ್ ಆಗಿದೆ. ಚಿತ್ರಕ್ಕೆ ಪ್ರಜ್ವಲ್ ಜೋಡಿಯಾಗಿ ಯಶಾ ಶಿವಕುಮಾರ್ ನಟಿಸುತ್ತಿದ್ದಾರೆ. ತೆಲುಗು ನಿರ್ದೇಶಕ ಸುಕುಮಾರ್ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಒಂದು ವಿಭಿನ್ ಕಥೆಯನ್ನು ಹೇಳಲು ಬರುತ್ತಿದ್ದಾರೆ.
2. ಮಾಫಿಯಾ
ಪ್ರಜ್ವಲ್ ದೇವರಾಜ್ ಹಾಗೂ ಅದಿತಿ ಪ್ರಭುದೇವ ಜೋಡಿಯ 'ಮಾಫಿಯಾ' ಸಿನಿಮಾ ಟೈಟಲ್‌ನಿಂದಲೇ ಸದ್ದು ಮಾಡ್ತಿದೆ. ಲೋಹಿತ್ ಹೆಚ್. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು, ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಅನೂಪ್ ಸೀಳಿನ್ ಸಂಗೀತ, ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.
3. ಕರಾವಳಿ
ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕರಾವಳಿ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಪ್ರಜ್ಜು ಕೋಣ ಏರಿ ಬರುವ ಝಲಕ್ ಸಖತ್ ವೈರಲ್ ಆಗಿತ್ತು. ಪ್ರಾಣಿ ಮತ್ತು ಮನುಷ್ಯನ ಸಂಘರ್ಷದ ಕಥೆ ಈ ಚಿತ್ರದಲ್ಲಿದೆ. ಸಚಿನ್ ಬಸ್ರೂರು ಸಂಗೀತ, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣ ಶುರುವಾಗುವುದಕ್ಕೂ ಮುನ್ನೆ ಅಕ್ಕ ಪಕ್ಕದ ಇಂಡಸ್ಟ್ರಿ ಮಂದಿ ಚಿತ್ರದ ಡಬ್ಬಿಂಗ್ ರೈಟ್ಸ್ ಕೇಳಿದ್ದಾರಂತೆ.

4. ಜಾತರ
ಉದಯ ನಂದನವನಂ ನಿರ್ದೇಶನದ 'ಜಾತರ' ಎನ್ನುವ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಡೈನಾಮಿಕ್ ಪ್ರಿನ್ಸ್ ನಟಿಸುತ್ತಿದ್ದಾರೆ. ಗೋವರ್ಧನ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದ್ದು ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಪ್ರಪಂಚಕ್ಕೆ ಪ್ರಜ್ವಲ್ ಎಂಟ್ರಿ ಕೊಡಲಿದ್ದಾರೆ. ಬಳ್ಳಾರಿ ಹಾಗೂ ಹೈದರಾಬಾದ್‌ನಲ್ಲಿ 'ಜಾತರ' ಸಿನಿಮಾ ಚಿತ್ರೀಕರಣ ನಡೆಯಲಿದೆ.
5. ಚೀತಾ
ರಾಜ ಕಲೈ ಕುಮಾರ್ ನಿರ್ದೇಶನದ 'ಚೀತಾ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮಾರುಕಟ್ಟೆಯಲ್ಲೇ ಹುಟ್ಟಿಬೆಳೆದ ಹುಡುಗನೊಬ್ಬನ ಕಥೆ ಚಿತ್ರದಲ್ಲಿದ್ದು ಅಲ್ಲಿನ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಡುವ ನಾಯಕನಾಗಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ದೊಡ್ಡ ಮಾರ್ಕೆಟ್ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಮೇಘಾ ಶೆಟ್ಟಿ ಚಿತ್ರದಲ್ಲಿ ಪ್ರಜ್ವಲ್‌ಗೆ ಜೋಡಿಯಾಗಿದ್ದಾರೆ.
6. ರಾಕ್ಷಸ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಬಹಳ ಹಿಂದೆ 'ರಾಕ್ಷಸ' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಅದೇ ಟೈಟಲ್‌ನಲ್ಲಿ ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಘೋಷಣೆ ಆಗಿದೆ. 'ಮಮ್ಮಿ' ಸಿನಿಮಾ ಖ್ಯಾತಿ ಲೋಹಿತ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಪ್ರಜ್ವಲ್ ದೇವರಾಜ್ ಗನ್ ಹಿಡಿದಿದ್ದಾರೆ. ಪುಟ್ಟ ಮಗು ಪ್ರಜ್ವಲ್ ಕೈ ಬೆರಳನ್ನು ಹಿಡಿದಿದ್ದಾರೆ. ಇನ್ನೂ ಕೈಯಲ್ಲಿ ಇರುವ ಟ್ಯಾಟೂ ಗಮನ ಸೆಳೆಯುತ್ತಿದೆ.


Click it and Unblock the Notifications











