ಮಹಾ ಕುಂಭಮೇಳದಲ್ಲಿ ಮಿಂದೆದ್ದ ರಾಜ್ ಬಿ ಶೆಟ್ಟಿ, ಅನುಶ್ರೀ, ಕಿರಣ್ ರಾಜ್
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮುಂದುವರೆದಿದೆ. ಪ್ರತಿದಿನ ಲಕ್ಷಾಂತರ ಜನ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡುತ್ತಿದ್ದಾರೆ. ಸಿನಿಮಾ ತಾರೆಯರು, ಉದ್ಯಮಿಗಳು ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ನಿರ್ದೇಶಕ- ನಟ ರಾಜ್ ಬಿ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್, ನಿರೂಪಕಿ ಅನುಶ್ರೀ ಕೂಡ ಕುಂಭಮೇಳದಲ್ಲಿ ಭಾಗಿ ಆಗಿದ್ದಾರೆ.
ಇತ್ತೀಚೆಗೆ 'ಗೂಗ್ಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಕೂಡ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರು. ಇದೀಗ ಅನುಶ್ರೀ ಸ್ನೇಹಿತರ ಜೊತೆ ಕುಂಭ ಮೇಳದಲ್ಲಿ ಭಾಗಿ ಆಗಿರುವ ವಿಚಾರವನ್ನು ಫೋಟೊ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

"ಸಂಗಮದಲ್ಲಿ ಮಿಂದು... ಕಣ್ಣುಗಳು ನೆಂದು .. ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು ... ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು. ಕೋಟಿ ಜನ ಸೇರೋ ಜಾಗ .. ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ.. 29/01/2025 ಮೌನಿ ಅಮಾವಾಸ್ಯೆ. ಹರ ಹರ ಮಹದೇವ್" ಎಂದು ಅನುಶ್ರೀ ಬರೆದುಕೊಂಡಿದ್ದಾರೆ.
ಈಗಾಗಲೇ 20 ಕೋಟಿಗೂ ಹೆಚ್ಚು ಜನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಬಗ್ಗೆ ಸರ್ಕಾರವೇ ತಿಳಿಸಿದೆ. ಇನ್ನು ಮೌನಿ ಅಮಾವಾಸ್ಯೆಯ ದಿನವಾದ ಮಂಗಳವಾರ(ಜನವರಿ 28) 5 ಕೋಟಿಗೂ ಅಧಿಕ ಮಂದಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದರು. ಪ್ರಯಾಗ್ ರಾಜ್‌ನಲ್ಲಿ ಎಲ್ಲಿ ನೋಡಿದರೂ ಜನಸಾಗರವೇ ಹರಿದು ಬರ್ತಿದೆ. ಕಾಳಿ ಮಾರ್ಗ, ಝೂಸಿ ರೋಡ್, ನಾಗ್ ವಾಸುಕಿ ರೋಡ್, ಸಂಗಮ್ ಬೌಡ್ ರೋಡ್, ತ್ರಿವೇಣಿ ಮಾರ್ಗದ ರಸ್ತೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.

ಫೆಬ್ರವರಿ 26ರವರೆಗೆ ಮಹಾ ಕುಂಭಮೇಳ ಮುಂದುವರೆಯಲಿದೆ. ಕೋಟ್ಯಂತರ ಜನ ಭಾಗಿ ಆಗಿ ಪವಿತ್ರಾ ಸ್ನಾನ ಮಾಡಲಿದ್ದಾರೆ. 40 ಕೋಟಿಗೂ ಅಧಿಕ ಮಂದಿ ಈ ಬಾರಿ ಮಹಾ ಕುಂಭಮೇಳದಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ. ಬಾಲಿವುಡ್ ಹಿರಿಯನ ನಟ ಅನುಪಮ್ ಖೇರ್, ಡ್ಯಾನ್ಸ್ ಮಾಸ್ಟರ್ ರೆಮ ಡಿಸೋಜಾ, ಮಾಜಿ ನಟಿ ಮಮತಾ ಕುಲಕರ್ಣಿ, ಗಾಯಕ ಗುರು ರಾಂಧವ, ಉದ್ಯಮಿ ಗೌತಮ್ ಅದಾನಿ ಕೂಡ ಕುಂಭಮೇಳದಲ್ಲಿ ಭಾಗಿ ಆಗಿದ್ದರು.
ಗಾಯಕರಾದ ಕೈಲಾಶ್ ಖೇರ್ ಹಾಗೂ ಶಂಕರ್ ಮಹಾದೇವನ್ ಸಹ ಬಾರಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ಇನ್ನು 25 ದಿನ ಕುಂಭಮೇಳ ನಡೆಯಲಿದ್ದು ಸಾಕಷ್ಟು ತಾರೆಯರು ಕೂಡ ಹೋಗುವ ನಿರೀಕ್ಷೆಯಿದೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದ ಬಳಿಕ ಅನುಶ್ರೀ, ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ಅಯೋಧ್ಯೆ ರಾಮ ಮಂದಿರಕ್ಕೂ ಭೇಟಿ ನೀಡಲು ಮುಂದಾಗಿದ್ದಾರೆ. ಒಟ್ಟು 5 ದಿನಗಳ ಪ್ರವಾಸದಲ್ಲಿ ವಾರಣಾಸಿಗೂ ಹೋಗಲು ನಿರ್ಧರಿಸಿದ್ದಾರೆ.


Click it and Unblock the Notifications











