ಬೆಟ್ಟಿಂಗ್ ಆಪ್ ಪ್ರಕರಣ: ವಿಚಾರಣೆಗೆ ಹಾಜರಾಗಲಿರುವ ಶ್ರದ್ಧಾ ಕಪೂರ್, ಸಮಯ ಕೇಳಿದ ರಣಬೀರ್ ಕಪೂರ್!
ಮಹದೇವ್ ಗೇಮಿಂಗ್ ಆ್ಯಪ್ ಪ್ರಕರಣ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾಲಿವುಡ್ ಹಿರಿತೆರೆ ಮತ್ತು ಕಿರುತೆರೆ ನಟ, ನಟಿಯರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಪ್ರಕರಣದಲ್ಲಿ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರಿಗೆ ಶುಕ್ರವಾರ (ಅಕ್ಟೋಬರ್ 06) ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ಅಕ್ರಮ ಬೆಟ್ಟಿಂಗ್‌ಗೆ ವೇದಿಕೆ ಒದಗಿಸಿದ ಮಹದೇವ್ ಆ್ಯಪ್ ಕುರಿತು ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಜೊತೆಗೆ ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ, ಹುಮಾ ಖುರೇಷಿ, ಹಿನಾ ಖಾನ್ ಅವರಿಗೂ ಸಮನ್ಸ್ ನೀಡಲಾಗಿದೆ. ಪ್ರಕರಣದಲ್ಲಿ ರಣಬೀರ್ ಕಪೂರ್ ಕೇಂದ್ರೀಯ ಸಂಸ್ಥೆಯ ಮುಂದೆ ಹಾಜರಾಗಲು ಎರಡು ವಾರಗಳ ಕಾಲಾವಕಾಶವನ್ನು ಕೋರಿದ್ದಾರೆ. ಇವತ್ತು ಶ್ರದ್ಧಾ ಕಪೂರ್ ವಿಚಾರನೆಗೆ ಹಾಜರಾಗಬೇಕಿದೆ. ಆದರೆ ಅವರು ಬರುತ್ತಾರೋ ಇಲ್ಲವೋ ಇನ್ನೂ ಗೊತ್ತಿಲ್ಲ.

ಎರಡು ವಾರಗಳ ಕಾಲಾವಕಾಶ ಕೇಳಿದ ಕಪಿಲ್ ಶರ್ಮಾ, ಹುಮಾ ಖುರೇಷಿ, ಹಿನಾ ಖಾನ್
ಮಹಾದೇವ್ ಆ್ಯಪ್ ಪ್ರಕರಣದಲ್ಲಿ ನಟ ಕಪಿಲ್ ಶರ್ಮಾ, ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರಿಗೂ ಬೇರೆ ಬೇರೆ ದಿನಾಂಕಗಳಲ್ಲಿ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಕೂಡ ಏಜೆನ್ಸಿಯ ಮುಂದೆ ಹಾಜರಾಗಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಈ ಸೆಲೆಬ್ರಿಟಿಗಳನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿಲ್ಲ. ಆದರೆ ಆ್ಯಪ್‌ನ ಪಾವತಿಯ ವಿಧಾನ ಮತ್ತು ಈ ಆಪ್ ಬಗ್ಗೆ ಇವರಿಗೆ ಏನು ತಿಳಿದಿದೆ ಎಂದು ವಿಚಾರಣೆ ಮಾಡಲಾಗುತ್ತದೆ.
ರಣಬೀರ್ ಕಪೂರ್ ಮಹದೇವ್ ಆ್ಯಪ್ ಅನ್ನು ಪ್ರಚಾರ ಮಾಡುವ ಹಲವಾರು ಜಾಹೀರಾತುಗಳನ್ನು ಮಾಡಿದ್ದಾರೆ. ಈ ಜಾಹೀರಾತಿನ ಆದಾಯದಿಂದ ದೊಡ್ಡ ಮೊತ್ತದ ಹಣವನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಮಹಾದೇವ್ ಆಪ್ ವಿರುದ್ಧ ಆರೋಪ
ಮಹಾದೇವ್ ಆ್ಯಪ್ ಒಂದು ಅಂಬ್ರೆಲಾ ಸಿಂಡಿಕೇಟ್ ಆಗಿದ್ದು, ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸುತ್ತದೆ. ಬಳಕೆದಾರರ ಐಡಿಗಳನ್ನು ರಚಿಸಿ, ಬೇನಾಮಿ ಬ್ಯಾಂಕ್ ಖಾತೆಗಳ ವೆಬ್ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡುತ್ತದೆ ಎಂದು ಇಡಿ ಆರೋಪಿಸಿದೆ.
ಬೆಟ್ಟಿಂಗ್ ನಿಷೇಧಿಸುವ ಇತ್ತೀಚಿನ ಆನ್‌ಲೈನ್ ಗೇಮಿಂಗ್ ನಿಯಮಗಳು!
ಮಹಾದೇವ್ ಕಂಪನಿಯ ಮಾಲೀಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಛತ್ತೀಸ್‌ಗಢದ ಭಿಲಾಯ್‌ನವರು. ದುಬೈನಿಂದ ತಮ್ಮ ಕೆಲಸಗಳನ್ನು ನಡೆಸುತ್ತಿದ್ದಾರೆ. ಇವರು ಇಂತಹದ್ದೇ ನಾಲ್ಕೈದು ಅಪ್ಲಿಕೇಶನ್‌ಗಳ ಮೂಲಕ ದಿನಕ್ಕೆ ಸುಮಾರು 200 ಕೋಟಿ ರೂಪಾಯಿ ಗಳಿಸುತ್ತಾರೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.
ಹೊಸ ಬಳಕೆದಾರರು ಮತ್ತು ಫ್ರಾಂಚೈಸ್ ಹುಡುಕುವವರನ್ನು ಆಕರ್ಷಿಸಲು ಬೆಟ್ಟಿಂಗ್ ವೆಬ್‌ಸೈಟ್‌ಗಳ ಜಾಹೀರಾತಿಗಾಗಿ ಅವರು ಭಾರತದಲ್ಲಿ ನಗದು ರೂಪದಲ್ಲಿ ದೊಡ್ಡ ವೆಚ್ಚವನ್ನೇ ಮಾಡುತ್ತಾರೆ ಎಂದು ಇಡಿ ಹೇಳಿದೆ. ಕಳೆದ ತಿಂಗಳು ಮಹಾದೇವ್ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದಂತೆ ಮುಂಬೈ, ಕೋಲ್ಕತ್ತಾ ಮತ್ತು ಭೋಪಾಲ್‌ನ 39 ಸ್ಥಳಗಳಲ್ಲಿ ದಾಳಿ ನಡೆಸಿ 417 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ಸೌರಭ್ ಚಂದ್ರಕರ್ ಈ ವರ್ಷ ಫೆಬ್ರವರಿಯಲ್ಲಿ ಯುಎಇಯಲ್ಲಿ ಅದ್ಧೂರಿಯಾಗಿ ವಿವಾಹವಾದರು. ಈ ಮದುವೆಗೆ ರೂ.200 ಕೋಟಿ ಖರ್ಚು ಮಾಡಲಾಗಿತ್ತು. ಈ ಪೂರ್ತಿ ಹಣವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ. ಇದಾದ ನಂತರವೇ ಮಹಾದೇವ್ ಆ್ಯಪ್ ಬಗ್ಗೆ ಇಡಿ ತನಿಖೆ ಆರಂಭಿಸಿದೆ.


Click it and Unblock the Notifications











