ಸ್ಫೂರ್ತಿಯಾಯ್ತು 'ಮಹರ್ಷಿ' ಚಿತ್ರದ 'ವಾರಾಂತ್ಯದ ವ್ಯವಸಾಯ' ಕಾನ್ಸೆಪ್ಟ್
ಸಿನಿಮಾ ಎನ್ನುವುದು ಅತಿ ದೊಡ್ಡ ಮಾಧ್ಯಮ. ಅಂತಹ ಮಾಧ್ಯಮದಲ್ಲಿ ಒಂದು ಒಳ್ಳೆಯ ವಿಷಯ ಹೇಳಿದರೆ ಒಂದಷ್ಟು ಕಿವಿಗಳು ಅದನ್ನು ಕೇಳಿಸಿಕೊಳ್ಳುತ್ತದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಮನರಂಜನೆ ಜೊತೆಗೆ ಸಂದೇಶ ಇದ್ದರೆ ಅದು ಅತಿ ಹೆಚ್ಚು ಜನರಿಗೆ ತಲುಪುತ್ತದೆ.
ಈ ರೀತಿ ಒಂದು ಒಳ್ಳೆಯ ವಿಷಯದೊಂದಿಗೆ ಇತ್ತೀಚಿಗೆ ಬಂದ ಸಿನಿಮಾ 'ಮಹರ್ಷಿ'. ಕಳೆದ ವಾರ ಬಿಡುಗಡೆಯಾದ ಈ ಸಿನಿಮಾ 'ವಾರಾಂತ್ಯದ ವ್ಯವಸಾಯ' ಎನ್ನುವ ಹೊಸ ಕಾನ್ಸೆಪ್ಟ್ ಅನ್ನು ಹೇಳಿತ್ತು.
''ವ್ಯವಸಾಯ ಎನ್ನುವುದು ಭೂಮಿ ಮತ್ತು ಮನುಷ್ಯನ ನಡುವೆ ಇರುವ ಅದ್ಬುತ ಸಂಬಂಧ'' ಎಂಬ ಮಾತುಗಳ ಮೂಲಕ ಈ ಸಿನಿಮಾ ಅದೆಷ್ಟೋ ಜನರಿಗೆ ಸ್ಫೂರ್ತಿ ನೀಡಿದೆ.
'ಮಹರ್ಷಿ' ಸಿನಿಮಾದಲ್ಲಿ ನಾಯಕ ಓದಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ವಿದೇಶದಲ್ಲಿ ಕೆಲಸ ಮಾಡುತ್ತಾ ಸಿಕ್ಕಾಪಟ್ಟೆ ಸಂಬಳ ಪಡೆಯುತ್ತಿರುತ್ತಾನೆ. ಹೀಗಿದ್ದ ಕೊನೆಗೆ ತನ್ನ ಸ್ನೇಹಿತನಿಗಾಗಿ ಆತನ ಹಳ್ಳಿಗೆ ಬಂದು ವ್ಯವಸಾಯ ಮಾಡಲು ಮುಂದಾಗುತ್ತಾನೆ. ಸಿನಿಮಾದ ಈ ವಿಷಯ ಈಗ ಅನೇಕರಿಗೆ ನಿಜ ಜೀವನದಲ್ಲಿ ಸ್ಫೂರ್ತಿ ನೀಡುತ್ತಿದೆ...

ಸಿನಿಮಾದಲ್ಲಿ ಹೇಳಿದ್ದ ಅದ್ಭುತ ಸಂದೇಶ
''ನಮಗೂ ವ್ಯವಸಾಯಕ್ಕೂ ಏನು ಸಂಬಂಧ?, ಅದು ನಮ್ಮ ಕೆಲಸ ಅಲ್ಲ. ವ್ಯವಸಾಯ ರೈತನ ಕೆಲಸ.'' ಎಂದು ಭಾವಿಸಿದ್ದ ಅನೇಕರಿಗೆ 'ಮಹರ್ಷಿ' ಸಿನಿಮಾ ಒಂದು ಸಂದೇಶ ನೀಡಿದೆ. ''ವ್ಯವಸಾಯ ಬರೀ ರೈತನ ಕೆಲಸ ಅಲ್ಲ. ಅದು ಭೂಮಿ ಮೇಲೆ ಇರುವ ಪ್ರತಿಯೊಬ್ಬರ ಕರ್ತವ್ಯ'' ಎಂದು ತಿಳಿಸಿದೆ. ''ವ್ಯವಸಾಯ ಎನ್ನುವುದು ಭೂಮಿ ಮತ್ತು ಮನುಷ್ಯನ ನಡುವೆ ಇರುವ ಅದ್ಬುತ ಸಂಬಂಧ'' ಎನ್ನುವುದು ಸಿನಿಮಾದ ಸಂದೇಶವಾಗಿದೆ.

ಏನಿದು 'ವಾರಾಂತ್ಯದ ವ್ಯವಸಾಯ' ಕಾನ್ಸೆಪ್ಟ್?
ಸಿಟಿ ಜನ ವೀಕೆಂಡ್ ಬಂತು ಅಂದರೆ ಮೋಜು, ಮಸ್ತಿ, ಪಬ್, ಕ್ಲಾಬ್, ಪ್ರವಾಸ ಹೀಗೆ ಏಂಜಾಯ್ ಮಾಡುತ್ತಾರೆ. ಆದರೆ, ಅದರ ಬದಲು ವೀಕೆಂಡ್ ನಲ್ಲಿ ಹಳ್ಳಿಗೆ ಹೋಗಿ ವ್ಯವಸಾಯ ಮಾಡಿ, ರೈತರಿಗೆ ಸಹಾಯ ಮಾಡಿ ಎಂದು ಸಿನಿಮಾ ಹೇಳಿತ್ತು. ಅದೇ 'ವಾರಾಂತ್ಯದ ವ್ಯವಸಾಯ' (ವೀಕೆಂಡ್ ಫಾರ್ಮಿಂಗ್). ಈ ಕಾನ್ಸೆಪ್ಟ್ ಈಗ ಅನೇಕರಿಗೆ ಸ್ಫೂರ್ತಿ ನೀಡುತ್ತಿದೆ.
WeekendFarming ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್
ಸಿನಿಮಾದಲ್ಲಿ ಹೇಳಿದ್ದ 'ವಾರಾಂತ್ಯದ ವ್ಯವಸಾಯ' ಕಾನ್ಸೆಪ್ಟ್ ಸಾಕಷ್ಟು ಜನರಿಗೆ ಸ್ಫೂರ್ತಿ ನೀಡುತ್ತಿದೆ. ಟ್ವಿಟ್ಟರ್ ನಲ್ಲಿ WeekendFarming ಹ್ಯಾಶ್ ಟ್ಯಾಗ್ ಬಳಸಿ ಸಾಕಷ್ಟು ಜನರು ತಮ್ಮ ವ್ಯವಸಾಯದ ಫೋಟೋಗಳನ್ನು ಹಾಕುತ್ತಿದ್ದಾರೆ. ಸ್ಕೂಲ್ ಮಕ್ಕಳು, ಐಟಿ ಕಂಪನಿ ಉದ್ಯೋಗಿಗಳು, ಕಾಲೇಜು ಹುಡುಗರು ಹೀಗೆ ಸಾಕಷ್ಟು ಜನರು 'ವಾರಾಂತ್ಯದ ವ್ಯವಸಾಯ'ದಲ್ಲಿ ಭಾಗಿಯಾಗಿದ್ದಾರೆ.
ನಟ ಮಹೇಶ್ ಬಾಬು ಸಂತಸ
ಟ್ವಿಟ್ಟರ್ ನಲ್ಲಿ WeekendFarming ಟ್ರೆಂಡ್ ಶುರುವಾಗಿದೆ. ಸಿನಿಮಾದ ಸಂದೇಶವನ್ನು ಜನ ಅಳವಡಿಸಿಕೊಂಡಿರುವುದು ನಟ ಮಹೇಶ್ ಬಾಬುಗೆ ಸಹ ಸಂತಸ ಮೂಡಿಸಿದೆ. ಜನರ ಈ ಪ್ರತಿಕ್ರಿಯೆಗೆ ಅವರು ಧನ್ಯವಾದ ತಿಳಿಸಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್, ದಾಖಲೆ ಇವೆಲ್ಲದಕ್ಕಿಂತ ಹೆಚ್ಚಾಗಿ ಇದು ಸಿನಿಮಾದ ನಿಜವಾದ ಗೆಲುವಾಗಿದೆ.
'ಬಂಗಾರದ ಮನುಷ್ಯ' ಸಹ ಇದೇ ಕೆಲಸ ಮಾಡಿತ್ತು
ಈ ಹಿಂದೆ ಡಾ ರಾಜ್ ಕುಮಾರ್ ನಟನೆಯ 'ಬಂಗಾರದ ಮನುಷ್ಯ' ಸಿನಿಮಾ ಕೂಡ ಇದೇ ರೀತಿಯ ಬದಲಾವಣೆ ಮೂಡಿಸಿತ್ತು. ಸಿನಿಮಾದಲ್ಲಿ ನಾಯಕ ಎಲ್ಲವನ್ನು ಬಿಟ್ಟು ಬೇಸಾಯ ಮಾಡುತ್ತಾನೆ. ಅದೇ ರೀತಿ ಅಂದು ದೊಡ್ಡ ದೊಡ್ಡ ಕೆಲಸದಲ್ಲಿ ಇದ್ದ ವ್ಯಕ್ತಿಗಳು ಅದನ್ನು ಬಿಟ್ಟು ಹಳ್ಳಿಗೆ ಬಂದು ವ್ಯವಸಾಯ ಮಾಡಿದ್ದರು. 'ಬಂಗಾರದ ಮನುಷ್ಯ' ಒಂದು ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿತ್ತು.


Click it and Unblock the Notifications











