'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಪ್ರಿನ್ಸ್ ಮಹೇಶ್ ಅವರ 25ನೇ ಚಿತ್ರ ಇದಾಗಿದ್ದು, ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ.
ಆದ್ರೆ, ಇಷ್ಟು ದೊಡ್ಡ ಸಂಭ್ರಮದ ನಡುವೆಯೂ ಅನಾಹುತವೊಂದು ನಡೆದು ಹೋಗಿದೆ. ಹೌದು, ಮಹರ್ಷಿ ಸಿನಿಮಾ ರಿಲೀಸ್ ವೇಳೆ ಚಿತ್ರಮಂದಿರದ ಬಳಿ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದಾನೆ.
ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿಯಾಗಿದ್ದ ಯರ್ರಂಶೆಟ್ಟಿ, ಮಧ್ಯರಾತ್ರಿ ಥಿಯೇಟರ್ ಬಳಿ ಫ್ಲೆಕ್ಸ್ ಹಾಕಲು ಹೋದಾಗ, ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾನೆ.

27 ವರ್ಷದ ಯರ್ರಂಶೆಟ್ಟಿ ಹಾರ್ಲಿಕ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಹರ್ಷಿ ಸಿನಿಮಾ ಬಿಡುಗಡೆ ಹಿನ್ನಲೆ ಮುರಳಿ ಕೃಷ್ಣ ಚಿತ್ರಮಂದಿರದ ಬಳಿ ಸ್ನೇಹಿತನ ಜೊತೆ ಸೇರಿ ಫ್ಲೆಕ್ಸ್ ಹಾಕಲು ಹೋಗಿದ್ದರು. ಈ ವೇಳೆ ಪೋಸ್ಟರ್ ಕರೆಂಟ್ ವೈರ್ ತಾಗಿ ಶಾಕ್ ಹೊಡೆದಿದೆ.
ಕೂಡಲೇ ಆ ವ್ಯಕ್ತಿಯನ್ನ ರಾಜಮಂಡ್ರಿಯ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನಂತೆ. ಈ ದುರ್ಘಟನೆಗೆ ಮಹೇಶ್ ಬಾಬು ಫ್ಯಾನ್ಸ್ ವಿಷಾದ ವ್ಯಕ್ತಪಡಿಸಿದ್ದು, ಈ ಸುದ್ದಿ ಚಿತ್ರತಂಡದ ಅರಿವಿಗೆ ಬಂದಿದ್ಯಾ ಸದ್ಯಕ್ಕೆ ಗೊತ್ತಿಲ್ಲ.


Click it and Unblock the Notifications











