ಗಾಂಧಿನಗರದಲ್ಲಿರುವ ಮಹೇಶ್ ಬಾಬು ಎಎಂಬಿ ಸಿನಿಮಾಸ್ ಕಪಾಲಿ ಥಿಯೇಟರ್ ಹೇಗಿದೆ? ಇಲ್ಲಿದೆ ಫೋಟೊಸ್
ತೆಲುಗು ನಟ ಮಹೇಶ್ ಬಾಬು ಬೆಂಗಳೂರಿನಲ್ಲಿ ಹೊಸ ಸಿನಿಮಾ ಥಿಯೇಟರ್ ಮಾಲ್ ಆರಂಭಿಸಿದ್ದಾರೆ. ಎಎಂಬಿ ಸಿನಿಮಾಸ್ (AMB Cinemas), ತನ್ನ ನೂತನ ಶಾಖೆಯನ್ನು ಜನವರಿ 16, 2026 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಸರ್ಕಲ್‌ನಲ್ಲಿದ್ದ ಕಪಾಲಿ ಚಿತ್ರಮಂದಿರವನ್ನು ಕೆಡವಿ ಅಲ್ಲಿ ಈ ಹೊಸ ಸಿನಿಮಾ ಥಿಯೇಟರ್ ನಿರ್ಮಿಸಲಾಗಿದೆ.
ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಸರಪಳಿಯಾದ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್‌ನಲ್ಲಿ ಚಿತ್ರಮಂದಿರ ನಿರ್ಮಿಸಿ ಗೆದ್ದಿದೆ. ಅದೇ ವೈಭವವನ್ನು ಉದ್ಯಾನ ನಗರಿ ಬೆಂಗಳೂರಿಗೂ ತಂದಿದ್ದಾರೆ. 5 ಅಂತಸ್ತುಗಳಲ್ಲಿ ಒಟ್ಟು ಒಂಭತ್ತು ಸ್ಕ್ರೀನ್ಸ್ ಇದೆ. ಸ್ಕ್ರೀನ್ 1, 2, 3, 4, 5, 7, 8 ಮತ್ತು 9 ರಲ್ಲಿ ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಬಾರ್ಕೋ ಲೇಸರ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಎಎಂಬಿ ಸಿನಿಮಾಸ್‌ನಲ್ಲಿ ಅಳವಡಿಸಲಾಗಿದೆ.

ಇನ್ನು ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಡಾಲ್ಬಿ ಸಿನಿಮಾ ಪದರೆ ಅಳವಡಿಸಲಾಗಿದೆ. ಹಾಗಾಗಿ ಎಎಂಬಿ ಸಿನಿಮಾಸ್ ಕಪಾಲಿ ಚಿತ್ರಮಂದಿರದ 6ನೇ ಸ್ಕ್ರೀನ್ ಬಹಳ ವಿಶೇಷ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದ್ದು ಸಿನಿಮಾ ನೋಡುವ ಅದ್ಭುತ ಅನುಭವ ನೀಡಲಿದೆ.
ಇನ್ನು 'ಎಂ-ಲೌಂಜ್' ಎಂಬ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಪ್ರೇಕ್ಷಕರಿಗೆ ರುಚಿಕರ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇಲ್ಲಿದೆ. ನಟ ಮಹೇಶ್ ಬಾಬು ಕೂಡ ಚಿತ್ರಮಂದಿರದ ಉದ್ಘಾಟನೆಗೆ ಆಗಮಿಸುವ ಸಾಧ್ಯತೆಯಿದೆ. ಚಿತ್ರಮಂದಿರದ ಒಳಾಂಗಣ ವಿನ್ಯಾಸದ ಫೋಟೊಗಳು, ಆಸನ ವ್ಯವಸ್ಥೆ ಹೇಗಿದೆ ಎನ್ನುವ ಫೋಟೊಗಳು ವೈರಲ್ ಆಗ್ತಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲೇ ಎಎಂಬಿ ಸಿನಿಮಾಸ್ ಕಪಾಲಿ ಥಿಯೇಟರ್ ಮಲ್ಟಿಪ್ಲೆಕ್ಸ್ ಶುಭಾರಂಭ ಮಾಡಲಿದೆ. ಈಗಾಗಲೇ ಬುಕ್‌ಮೈ ಶೋನಲ್ಲಿ ಮೊದಲ ದಿನದ ಪ್ರದರ್ಶನಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ.
ಚಿರಂಜೀವಿ ಹಾಗೂ ನಯನತಾರಾ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಹಾಗೂ ಹಾಲಿವುಡ್ ಸಿನಿಮಾ 'ಅವತಾರ್: ಫೈರ್ & ಆಷ್' ಸಿನಿಮಾಗಳು ಮೊದಲಿಗೆ ಎಎಂಬಿ ಸಿನಿಮಾಸ್ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಸಂಕ್ರಾಂತಿಗೆ ಯಾವುದೇ ದೊಡ್ಡ ಕನ್ನಡ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಾಗಿ ಬಹುತೇಕ ಶೋಗಳು ಪರಭಾಷಾ ಚಿತ್ರಗಳಿಗೆ ಸಿಕ್ಕಿದೆ.
ರವಿತೇಜಾ ನಟನೆಯ 'ಭರ್ತ ಮಹಾಶಯಲಕು ವಿಜ್ಞಪ್ತಿ', ಪ್ರಭಾಸ್ ನಟನೆಯ 'ದಿ ರಾಜಾಸಾಬ್', ಬಾಲಿವುಡ್ ಸಿನಿಮಾ 'ಧುರಂಧರ್' ಸೇರಿ ಕೆಲ ಸಿನಿಮಾಗಳು ನಾಳೆ(ಜನವರಿ 16)ಯಿಂದ ಎಎಂಬಿ ಸಿನಿಮಾ ಕಪಾಲಿಯಲ್ಲಿ ಪ್ರದರ್ಶನ ಆರಂಭಿಸಲಿವೆ. ಸುದೀಪ್ ನಟನೆಯ 'ಮಾರ್ಕ್' ಹಾಗೂ 'ಸೂರ್ಯ' ಎಂಬ ಮತ್ತೊಂದು ಕನ್ನಡ ಚಿತ್ರಕ್ಕೆ ತಲಾ ಒಂದು ಶೋ ಸಿಕ್ಕಿದೆ.
ಏಷ್ಯಾದಲ್ಲೇ ಬಹಳ ದೊಡ್ಡ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಎನಿಸಿಕೊಂಡಿದ್ದ ಕಪಾಲಿ ಚಿತ್ರಮಂದಿರವನ್ನು 2017ರಲ್ಲಿ ನೆಲಸಮ ಮಾಡಲಾಗಿತ್ತು. ಬಳಿಕ ಅಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ತೆಲುಗು ನಟ ಮಹೇಶ್ ಬಾಬು ಏಷಿಯನ್ ಸಿನಿಮಾಸ್ ಜೊತೆ ಸೇರಿ ಎಎಂಬಿ ಸಿನಿಮಾಸ್ ಕಪಾಲಿ ಎಂಬ ಥಿಯೇಟರ್ ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ.
ಗಾಂಧಿನಗರದಲ್ಲಿ ನಾಲ್ಕೈದು ಚಿತ್ರಮಂದಿರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದೀಗ ಎಎಂಬಿ ಸಿನಿಮಾಸ್ ಕಪಾಲಿ ಕೂಡ ಆ ಸಾಲಿಗೆ ಸೇರಿಕೊಂಡಿದೆ. 9 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ದೊಡ್ಡ ಸ್ಕ್ರೀನ್‌ಗಳು, ಚಿಕ್ಕ ಸ್ಕ್ರೀನ್‌ಗಳು ಅದರಲ್ಲಿದೆ. ಡಾಲ್ಬಿ ಸ್ಕ್ರೀನ್(ಸ್ಕ್ರೀನ್ ನಂ. 6) ಹೈಲೆಟ್ ಎನಿಸಿಕೊಳ್ಳಲಿದೆ.


Click it and Unblock the Notifications











