ಪ್ರಭಾಸ್ ಚಿತ್ರದಲ್ಲಿ ಮಹೇಶ್ ಬಾಬು, ಸೂರ್ಯ, ದುಲ್ಕರ್ ಸಲ್ಮಾನ್ ನಟನೆ!
ಪ್ರಭಾಸ್ ನಟನೆಯ ಹಾಗೂ ನಾಗ್ ಅಶ್ವಿನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕಲಿಯುಗ್ ಸದ್ಯ ಪ್ರಾಜೆಕ್ಟ್ ಕೆ ಎಂದೇ ಹೆಚ್ಚಾಗಿ ಕರೆಸಿಕೊಳ್ಳುತ್ತಿದೆ. ಪ್ರಾಜೆಕ್ಟ್ ಕೆ ಒಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಎನ್ನಲಾಗುತ್ತಿದ್ದು, ವೈಜಯಂತಿ ಮೂವೀಸ್ ನಿರ್ಮಾಣದಲ್ಲಿ ಮೂಡಿಬರಲಿದೆ. ಇನ್ನು ತೆಲುಗು, ತಮಿಳು ಹಾಗೂ ಹಿಂದಿ ಈ ಮೂರೂ ಭಾಷೆಗಳಲ್ಲಿಯೂ ಏಕಕಾಲಕ್ಕೆ ಚಿತ್ರೀಕರಣವಾಗಲಿರುವ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಕೂಡ ಇದ್ದಾರೆ.
ಇನ್ನು ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿ ತಮಿಳಿನ ಸೂರ್ಯ ಹಾಗೂ ಮಲಯಾಳಂನ ದುಲ್ಕರ್ ಸಲ್ಮಾನ್ ಇಬ್ಬರೂ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೊಂದು ದೊಡ್ಡ ಸುದ್ದಿ ಪ್ರಾಜೆಕ್ಟ್ ಕೆ ಕುರಿತಾಗಿ ಹೊರಬಿದ್ದಿದ್ದು ಈ ಸಿನಿಮಾದಲ್ಲಿ ಮಹೇಶ್ ಬಾಬು ಸಹ ನಟಿಸಲಿದ್ದಾರೆ ಎನ್ನಲಾಗಿದೆ. ಹೌದು, ವಿಕಿಪಿಡಿಯಾದಲ್ಲಿ ಪ್ರಾಜೆಕ್ಟ್ ಕೆ ಚಿತ್ರದ ತಾರಾಗಣದ ಪಟ್ಟಿಯಲ್ಲಿ ಮಹೇಶ್ ಬಾಬು ಹೆಸರೂ ಕೂಡ ಸೇರ್ಪಡೆಗೊಂಡಿದೆ.
ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಭಾಸ್, ಮಹೇಶ್ ಬಾಬು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮೀಮ್‌ಗಳು ಹರಿದಾಡಿವೆ. ಈ ವಿಷಯದ ಕುರಿತು ಇಬ್ಬರ ಅಣಿಮಾನಿಗಳಲ್ಲಿ ಸಂತಸವನ್ನು ಮೂಡಿಸಿದ್ದರೆ, ವಿಕಿಪಿಡಿಯಾವನ್ನು ಯಾರು ಬೇಕಾದರೂ ತಿದ್ದಬಹುದಾಗಿದ್ದು ಇದು ಯಾರೋ ತಿದ್ದಿರುವುದೇ ಹೊರತು ನಿಜ ಸುದ್ದಿಯಲ್ಲ, ಇದೆಲ್ಲಾ ಗಾಸಿಪ್ ಅಷ್ಟೇ ಎಂದು ಕೆಲವರು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಇನ್ನು ಮೊನ್ನೆಯಷ್ಟೇ ದುಲ್ಕರ್ ಸಲ್ಮಾನ್ ಹಾಗೂ ಸೂರ್ಯ ಹೆಸರು ಮತ್ತು ಇದೀಗ ಮಹೇಶ್ ಬಾಬು ಹೆಸರು ಪ್ರಾಜೆಕ್ಟ್ ಕೆ ಜತೆ ತಳುಕು ಹಾಕಿಕೊಂಡಿದ್ದು ಅಭಿಮಾನಿಗಳಲ್ಲಿ ಗೊಂದಲವೂ ಕೂಡ ನಿರ್ಮಾಣವಾಗಿದೆ. ಈ ಗೊಂದಲ ಶಮನವಾಗಬೇಕೆಂದರೆ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಈ ಸುದ್ದಿ ನಿಜಾನಾ ಅಥವಾ ಇಲ್ಲವಾ ಎಂಬುದನ್ನು ತಿಳಿಸಬೇಕಿದೆ.

ಪ್ರಾಜೆಕ್ಟ್ ಕೆ 2023ರ ಅಕ್ಟೋಬರ್ 18ರಂದು ಬಿಡುಗಡೆಯಾಗಲಿದ್ದು, ನಾಯಕಿಯರಾಗಿ ದೀಪಿಕಾ ಪಡುಕೋಣೆ ಹಾಗೂ ದಿಶಾ ಪಟಾನಿ ನಟಿಸುತ್ತಿದ್ದಾರೆ ಹಾಗೂ ಚಿತ್ರವು ಸುಮಾರು 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ.


Click it and Unblock the Notifications











