ದರ್ಶನ್ ''ಡೆವಿಲ್''ಗಾಗಿ ''ಮುಂಬೈ''ನಿಂದ ಬಂದ ನಟ ; ಅಕ್ಟೋಬರ್ ನಲ್ಲಿ ತೆರೆಗೆ ಬರುತ್ತಾ ಸಿನಿಮಾ..?
ಏನಾದರೂ ಮಾಡಿ ಧಮ್ ಕಟ್ಟಿಯಾದರೂ ಕೆಲಸ ಮಾಡೋಣ.. ಒಟ್ನಲ್ಲಿ ಡೆವಿಲ್ ಚಿತ್ರವನ್ನ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡೋಣ.. ಎಂದು ದರ್ಶನ್ ಈ ಹಿಂದೆ ಕಾಟೇರ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಹೇಳಿದ್ದರು. ಆದರೆ ಇದು ಸಾಧ್ಯನಾ..? ಇಂತಹದ್ದೊಂದು ಪ್ರಶ್ನೆ ಕೆಲ ದಿನಗಳಿಂದ ದರ್ಶನ್ ಅವರ ಅಭಿಮಾನಿಗಳನ್ನ ಕಾಡ್ತಿದೆ. ಅದಕ್ಕೆ ಕಾರಣ.. ದರ್ಶನ್ ಅವರಿಗೆ ಆದ ಶಸ್ತ್ರ ಚಿಕಿತ್ಸೆ.
ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಪೆಟ್ಟು ಮಾಡಿಕೊಂಡ ದರ್ಶನ್, ಸದ್ಯಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನೂ ವೈದ್ಯರು ಕಡ್ಡಾಯವಾಗಿ ಒಂದು ತಿಂಗಳು ವಿಶ್ರಾಂತಿಯನ್ನ ಪಡೆಯಬೇಕು ಎಂದು ದರ್ಶನ್ ಅವರಿಗೆ ಹೇಳಿದ್ದಾರೆ. ಹೀಗಾಗಿಯೇ ಡೆವಿಲ್ ಅಕ್ಟೋಬರ್ ಗೆ ಬಂದೇ ಬರುತ್ತೆ ಎಂದು ಈಗ ಹೇಳಲು ಅಸಾಧ್ಯ. ದರ್ಶನ್ ಚಿತ್ರೀಕರಣದ ಅಖಾಡಕ್ಕೆ ರೀ ಎಂಟ್ರಿ ಕೊಟ್ಟ ದಿನದಂದೇ ಡೆವಿಲ್ ಚಿತ್ರದ ಬಿಡುಗಡೆಯ ವಿಚಾರದಲ್ಲಿ ಸ್ಪಷ್ಟತೆ ಸಿಗಲಿದೆ.

ಸಂದರ್ಭ ಹಾಗೂ ಸನ್ನಿವೇಶ ಹೀಗಿರುವಾಗ ಡೆವಿಲ್ ನ ಅಂಗಳಕ್ಕೆ ಬಾಲಿವುಡ್ ನ ಖ್ಯಾತನಾಮ ನಟನ ಎಂಟ್ರಿಯಾಗಿದೆ. ಆ ನಟ ಬೇರೆ ಯಾರು ಅಲ್ಲ ಬದಲಿಗೆ ಮಹೇಶ್ ಮಂಜ್ರೇಕರ್ ಅನ್ನುವುದು ಈ ಕ್ಷಣದ ವಿಶೇಷ.
ಹೌದು, ಮಹೇಶ್ ಮಂಜ್ರೇಕರ್.. ಖ್ಯಾತ ನಟ.. ನಿರ್ಮಾಪಕ ಹಾಗೂ ನಿರ್ದೇಶಕ. ಮರಾಠಿ ಹಾಗೂ ಹಿಂದಿ ಚಿತ್ರರಂಗದ ದೊಡ್ಡ ಹೆಸರು. ಎಂಥಾ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬಬಲ್ಲ ಮಹೇಶ್ ಮಂಜ್ರೇಕರ್ ಹೆಚ್ಚು ಹೆಸರುವಾಸಿಯಾಗಿದ್ದು ಖಳನಾಯಕನ ಪಾತ್ರಗಳಿಂದ. ಹಿಂದಿ..ಮರಾಠಿ ಜೊತೆ ತೆಲುಗು, ಬೆಂಗಾಲಿ ಹಾಗೂ ಭೋಜಪುರಿ ಸಿನಿಮಾದಲ್ಲಿಯೂ ನಟಿಸಿರುವ ಮಹೇಶ್ 19 ವರ್ಷಗಳ ಹಿಂದೆ ಅಂದರೆ 2005ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಎನ್ ಕೌಂಟರ್ ದಯಾನಾಯಕ್ ಚಿತ್ರದಲ್ಲಿ ನಟಿಸಿದ್ದರು. ಆದರೆ.. ಆ ನಂತರ ಮಹೇಶ್ ಮಂಜ್ರೇಕರ್ ಮತ್ತೆ ಈ ಕಡೆ ಬರಲಿಲ್ಲ. ಕಾರಣ ಅವರಿಗೆ ಗೊತ್ತು. ಆದರೆ ಈಗ 19 ವರ್ಷದ ನಂತರ ಮಹೇಶ್ ಮಂಜ್ರೇಕರ್ ಮರಳಿ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಇನ್ನೂ ಮಹೇಶ್ ಮಂಜ್ರೇಕರ್ ಕನ್ನಡಕ್ಕೆ ಬರುತ್ತಿದ್ದಾರೆ ಎಂದ ಮೇಲೆ, ಅವರು ಡೆವಿಲ್ ಚಿತ್ರದ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲು ಬರುತ್ತಿರಬಹುದು ಅನ್ನುವ ಅನುಮಾನ ಮೂಡುವುದು ಸಹಜ. ಈ ಅನುಮಾನವನ್ನ ಬಗೆಹರಿಸುವ ಪ್ರಯತ್ನವನ್ನ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಮಾಡಿಲ್ಲ. ಬದಲಿಗೆ ಗೌಪ್ಯತೆಯ ನೀತಿ ಹಾಗೂ ನಿಯಮಗಳನ್ನ ಪಾಲಿಸುತ್ತಿದ್ದಾರೆ. ಈ ಕಾರಣಕ್ಕೆ ಮಹೇಶ್ ಮಂಜ್ರೇಕರ್ ಪಾತ್ರದ ಬಗ್ಗೆ ಚರ್ಚೆ ಮಾಡ್ತಿರುವ ಗಾಂಧಿನಗರ, ಈವರೆಗೂ ಎಲ್ಲೂ ಕಾಣಿಸಿಕೊಳ್ಳದಂತಹ ವಿಭಿನ್ನ ಪಾತ್ರಕ್ಕೆ ಮಹೇಶ್ ಬಣ್ಣ ಹಚ್ಚಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದೆ

ಉಳಿದಂತೆ ಡೆವಿಲ್ ಚಿತ್ರದ ನಾಯಕಿ ಯಾರು ಅನ್ನುವ ಗುಟ್ಟು ಇನ್ನೂ ರಟ್ಟಾಗಿಲ್ಲ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ ಅನ್ನುವುದು ಸದ್ಯದ ಇನ್ನೊಂದು ತಾಜಾ ಸುದ್ದಿ.
ಅಜನೀಶ್ ಲೋಕನಾಥ್ ಸಂಗೀತ.. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ ಅನ್ನುವ ವಿಚಾರ ನಿಮಗೆ ಗೊತ್ತೇ ಇರಬೇಕು. ಇನ್ನೂ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಡೆವಿಲ್ ಚಿತ್ರದ ಫಸ್ಟ್ ಲುಕ್ ಟೀಸರ್, ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರವನ್ನು ಜೈ ಮಠ ಕಂಬೈನ್ಸ್ ಪ್ರಸ್ತುತಪಡಿಸುತ್ತಿದ್ದು, ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಣ್ಣ ಮತ್ತು ಪ್ರಕಾಶ್ ವೀರ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ
ಒಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೆವಿಲ್ ಅಂಗಳಕ್ಕೆ ಚಾಲೆಂಜಿಂಗ್ ಆದ ಪಾತ್ರವೊಂದನ್ನ ನಿರ್ವಹಿಸಲು, ಮಹೇಶ್ ಮಂಜ್ರೇಕರ್ ಕನ್ನಡಕ್ಕೆ ಮರಳಿ ಬರುತ್ತಿದ್ದಾರೆ. ದರ್ಶನ್ ಹಾಗೂ ಮಹೇಶ್ ಮಂಜ್ರೇಕರ್ ಅವರ ಜುಗಲಬಂದಿ ಚಿತ್ರದಲ್ಲಿ ಹೇಗಿರಲಿದೆ ಅನ್ನುವುದಕ್ಕೆ ಉತ್ತರ ಸಿಗಲು ಇನ್ನೂ ಸಮಯ ಇದೆ. ಡೆವಿಲ್ ಗೆಟಪ್ಪಿನಲ್ಲಿ ದರ್ಶನ್ ಅಖಾಡಕ್ಕೆ ಮತ್ತೆ ಯಾವಾಗ ಧುಮುಕಲಿದ್ದಾರೆ ಅನ್ನುವ ಪ್ರಶ್ನೆ ಸದ್ಯಕ್ಕೆ ಅನೇಕರನ್ನ ಕಾಡ್ತಿದೆ. ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ.


Click it and Unblock the Notifications











