ಇಂದು ಬಿಡುಗಡೆ ಆಗುತ್ತಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ: ನಿಮ್ಮ ಆಯ್ಕೆ ಯಾವುದು?
ಮತ್ತೊಂದು ಶುಕ್ರವಾರ ಸಿನಿ ಪ್ರೇಮಿಗಳಿಗಾಗಿ ಬಂದಿದೆ. ಹಲವಾರು ಸಿನಿಮಾಗಳನ್ನು ಹೊತ್ತು ತಂದಿದೆ. ಈ ಶುಕ್ರವಾರವಂತೂ ತುಸು ಹೆಚ್ಚೇ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
Recommended Video
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿನ ಕೆಲವು ಸ್ಟಾರ್ ನಟ-ನಟಿಯರ ಕೆಲವು ಉತ್ತಮ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ. ಹಲವು ಭಾಷೆಗಳ ಸಹಬಾಳ್ವೆಯಿರುವ ಬೆಂಗಳೂರಿನಲ್ಲಿ ವಿವಿಧ ಭಾಷೆಯ ಸಿನಿಮಾಗಳು ಶುಕ್ರವಾರದಂದು ಬಿಡುಗಡೆ ಆಗುವುದು ಸಾಮಾನ್ಯ. ಈ ಬಾರಿಯೂ ಅದು ಮುಂದುವರೆದಿದೆ.
ಕನ್ನಡದ ಪೆಟ್ರೋಮ್ಯಾಕ್ಸ್ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಹಲವು ಸಿನಿಮಾಗಳು ಈ ವಾರ ತೆರೆಗೆ ಬರುತ್ತಿದ್ದು, ಈ ವಾರ ತೆರೆಗೆ ಬರುತ್ತಿರುವ ವಿವಿಧ ಭಾಷೆಗಳ ಮುಖ್ಯ ಸಿನಿಮಾಗಳ ಪಟ್ಟಿ ಇಲ್ಲಿದೆ.

'ಪೆಟ್ರೊಮ್ಯಾಕ್ಸ್', 'ಬೆಂಕಿ' ಹಾಗೂ ಇತರೆ
ಕನ್ನಡದಲ್ಲಿ ಸತೀಶ್ ನೀನಾಸಂ, ಕಾರುಣ್ಯ ರಾಮ್, ಹರಿಪ್ರಿಯ, ನಾಗಭೂಷಣ್, ಅಚ್ಯುತ್ ಕುಮಾರ್ ಸೇರಿ ಹಲವರು ನಟಿಸಿರುವ 'ಪೆಟ್ರೊಮ್ಯಾಕ್ಸ್' ಸಿನಿಮಾ ಜುಲೈ 15ರ ಶುಕ್ರವಾರ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ 'ಬೆಂಕಿ', 'ಚೇಸ್', 'ಕರ್ಮಣ್ಯೆ ವಾಧಿಕಾರಸ್ತೆ', 'ಪದ್ಮಾವತಿ', 'ಓಹ್ ಮೈ ಲವ್' ಇನ್ನಿತರೆ ಕನ್ನಡ ಸಿನಿಮಾಗಳು ಇದೇ ಶುಕ್ರವಾರ ತೆರೆಗೆ ಬರುತ್ತಿವೆ.

ಸಾಯಿ ಪಲ್ಲವಿಯ 'ಗಾರ್ಗಿ'
ಸಾಯಿ ಪಲ್ಲವಿ ನಟನೆಯ ಮಹಿಳಾ ಪ್ರಧಾನ ಸಿನಿಮಾ 'ಗಾರ್ಗಿ' ಶುಕ್ರವಾರ ಜುಲೈ 15 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾವು ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಗೌತಮ್ ರಾಮಚಂದ್ರನ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ವಿಮರ್ಶಕರು ಬಹಳ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾರ 'ಅಮ್ಮಾಯಿ'
ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಅಮ್ಮಾಯಿ' ಸಿನಿಮಾ ಸಹ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಶುಕ್ರವಾರದಂದೇ ಬಿಡುಗಡೆ ಆಗುತ್ತಿದೆ. ಜೊತೆಗೆ ರಾಮ್ ಪೋತಿನೇನಿ ನಟನೆಯ 'ದಿ ವಾರಿಯರ್' ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಗುರುವಾರ (ಜುಲೈ 14)ರಂದು ಬಿಡುಗಡೆ ಆಗಿದೆ.

ಎರಡು ಪ್ರಮುಖ ಹಿಂದಿ ಸಿನಿಮಾ
ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಜೀವನ ಆಧರಿಸಿದ ಸಿನಿಮಾ 'ಶಭಾಷ್ ಮಿತು' ಹಿಂದಿ ಸಿನಿಮಾ ಜುಲೈ 15ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ತಾಪ್ಸಿ ಪನ್ನು ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗಿನ 'ಹಿಟ್' ಸಿನಿಮಾದ ಹಿಂದಿ ರೀಮೇಕ್ 'ಹಿಟ್' ಸಹ ಜುಲೈ 15 ರಂದೇ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ 'ಜುದಾ ಹೋಕೆ ಬೀ' ಹೆಸರಿನ ಮತ್ತೊಂದು ಸಿನಿಮಾ ಸಹ ಇಂದೇ ತೆರೆಗೆ ಬರುತ್ತಿದೆ.

ತಮಿಳಿನ ಎರಡು ಸಿನಿಮಾಗಳು
ಆರ್.ಪಾರ್ತಿಭನ್ ನಿರ್ದೇಶನದ ವಿಭಿನ್ನ ಕಥಾವಸ್ತು ಹಾಗೂ ವಿಭಿನ್ನ ಮಾದರಿಯಲ್ಲಿ ಚಿತ್ರೀಕರಣ ಮಾಡಿರುವ 'ಇರವಿನ್ ನಿಳಲ್' ಸಿನಿಮಾ ಇಂದು ಜುಲೈ 15 ರಂದು ತೆರೆಗೆ ಬರಲಿದೆ. ನಾನ್ ಲೀನಿಯರ್ ಮಾದರಿಯ ಕತಾ ವಸ್ತು ಹೊಂದಿರುವ ಈ ಸಿನಿಮಾ ಸಿಂಗಲ್ ಶಾಟ್ ಸಿನಿಮಾ ಆಗಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಜೊತೆಗೆ ಪ್ರಭುದೇವ ನಟನೆಯ ಮಕ್ಕಳ ಸಿನಿಮಾ 'ಮೈ ಡಿಯರ್ ಭೂತಂ' ಸಹ ಜುಲೈ 15 ರಂದೇ ಬಿಡುಗಡೆ ಆಗುತ್ತಿದೆ.

ಮಲಯಾಳಂನಿಂದ ಎರಡು ಸಿನಿಮಾ
ಜನಪ್ರಿಯ ನಟ ಶೋಬಿನ್ ಶಾಹಿರ್ ನಟನೆಯ 'ಇಲವೀಳಪೂಂಚಿರಾ' ಮಲಯಾಳಂ ಸಿನಿಮಾ ಜುಲೈ 15ರಂದು ತೆರೆಗೆ ಬರುತ್ತಿದೆ. ಶಾಹಿ ಕಬೀರ್ ನಿರ್ದೇಶನದ ಈ ಸಿನಿಮಾ ಬಹಳ ಭಿನ್ನ ಕತೆಯನ್ನು ಹೊಂದಿದ್ದು, ಪ್ರವಾಸಿ ತಾಣವೊಂದರ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಕಾನ್ಸ್‌ಟೇಬಲ್ ಕುರಿತ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದೆ. ಜೊತೆಗೆ 'ಪದ್ಮಾ' ಹೆಸರಿನ ಹಾಸ್ಯಮಯ ಸಿನಿಮಾ ಒಂದು ಸಹ ಬಿಡುಗಡೆ ಆಗುತ್ತಿದೆ.


Click it and Unblock the Notifications











