»   » ಕ್ಲೈಮಾಕ್ಸ್‌ ಬದಲಾಯಿಸಿದರೆ ಒಂದು ಲಕ್ಷ

ಕ್ಲೈಮಾಕ್ಸ್‌ ಬದಲಾಯಿಸಿದರೆ ಒಂದು ಲಕ್ಷ

Posted By: Staff
Subscribe to Filmibeat Kannada

ದ್ವಾರಕೀಶ್‌ ಹತಾಶರಾಗಿದ್ದಾರೆ. ಒಂದೂವರೆ ವರ್ಷ ಡಬ್ಬದಲ್ಲೇ ಉಳಿದಿದ್ದ 'ಮಜ್ನೂ" ಚಿತ್ರವನ್ನು ಊರೆಲ್ಲಾ ಸಾಲ ಮಾಡಿ ಬಿಡುಗಡೆ ಮಾಡಿದರೂ, ಆರಂಭದ ಪ್ರತಿಕ್ರಿಯೆ ಸುಮಾರಾಗಿದೆ. ನವನಾಯಕನ ಚಿತ್ರಕ್ಕೆ ನರ್ತಕಿಯಂಥ ದೈತ್ಯ ಚಿತ್ರಮಂದಿರವನ್ನು ಆಯ್ಕೆ ಮಾಡಿದ್ದೇ ಅವರು ಮಾಡಿದ ಮೊದಲ ತಪ್ಪು. ಇತ್ತೀಚಿನ ದಿನಗಳಲ್ಲಿ ಶಿವರಾಜ್‌ ನಾಯಕನಾಗಿರುವ ಚಿತ್ರ ಕೂಡ ನರ್ತಕಿಯಲ್ಲಿ ಹೌಸ್‌ಫುಲ್‌ ಕಾಣೋದು ಕಷ್ಟ. ಹಾಗಿರುವಾಗ 'ಮಜ್ನೂ" ಚಿತ್ರಕ್ಕೆ ಅರ್ಧ ಚಿತ್ರಮಂದಿರವಷ್ಟೇ ತುಂಬಿದ್ದರಲ್ಲಿ ಆಶ್ಚರ್ಯವೇನಿಲ್ಲ.

ದ್ವಾರ್ಕಿ ನಿರೀಕ್ಷೆ ಬೇರೆಯೇ ಇತ್ತು. ತಮ್ಮ ಹೆಸರಿನ ಮೌಲ್ಯದಿಂದಾದರೂ ಮೊದಲ ಒಂದು ವಾರ ಪ್ರೇಕ್ಷಕರು ಕಿಕ್ಕಿರಿಯ ಬಹುದು ಎಂದು ಅವರು ಅಂದುಕೊಂಡಿದ್ದರು. ಆದರೆ ಕಾಲ ಬದಲಾಗಿದೆ, ಜನ ಇಂಥಾ ಸೆಂಟಿಮೆಂಟ್‌ಗಳನ್ನು ಮರೆತಿದ್ದಾರೆ. ರಾಮು ನಿರ್ಮಾಣದ 'ಭಾವ ಬಾಮೈದ" ಚಿತ್ರಕ್ಕೆ ಓಪನಿಂಗ್‌ ಸಿಕ್ಕಿಲ್ಲ, ಅಂದಮೇಲೆ ಗಿರಿಯಂಥಾ ಹೊಸಬನ ಚಿತ್ರವನ್ನು ಸ್ವಾಗತಿಸುವ ಮಾತು ದೂರವೇ ಉಳಿಯುತ್ತದೆ ಅನ್ನುತ್ತದೆ ಗಾಂಧಿನಗರ. ಹಾಗಿದ್ದರೆ, 'ಚಿತ್ರ", 'ನನ್ನ ಪ್ರೀತಿಯ ಹುಡುಗಿ" ಚಿತ್ರಗಳು ಹೊಸಬರ ಚಿತ್ರಗಳೇಅಲ್ಲವೇ ? ಅಲ್ಲಿ ಕತೆ ಚೆನ್ನಾಗಿತ್ತು ಸ್ವಾಮಿ ಅನ್ನುತ್ತಿದೆ ಗಾಂಧಿನಗರ.

ಅದೇನೇ ಇರಲಿ, ಮಜ್ನೂ ಚಿತ್ರಕ್ಕೆ ಜನರನ್ನು ಸೆಳೆಯುವ ಸಲುವಾಗಿ ದ್ವಾರ್ಕಿ ಹೊಸ ತಂತ್ರಕ್ಕೆ ಶರಣಾಗಿದ್ದಾರೆ.ಚಿತ್ರದ ಕ್ಲೈಮಾಕ್ಸು ವಿಭಿನ್ನವಾಗಿದ್ದರೂ, ಅದು ಸಾಲದು ಅನ್ನುತ್ತಿದ್ದಾರಂತೆ ನೋಡಿದವರು. ಕ್ಲೈಮಾಕ್ಸ್‌ ಅಂದ ಮೇಲೆ ಧರೆಯೋ ಅಥವಾ ಮರವೋ ಹತ್ತಿ ಉರಿಯಲೇ ಬೇಕು ತಾನೆ . ಇಲ್ಲಿ ಬರೀ ಭಾಷಣವಿದೆ. ಜನಾದೇಶಕ್ಕೆ ತಲೆಬಾಗಿರುವ ಕುಳ್ಳ ಈಗ ಒಂದು ಜಾಹಿರಾತು ಕೊಟ್ಟಿದ್ದಾರೆ. ಮಜ್ನೂ ಚಿತ್ರಕ್ಕೆ ಬೇರೆ ರೀತಿಯ ಕ್ಲೈಮ್ಯಾಕ್ಸು ಸೂಚಿಸಿರಿ. ನೀವು ಸೂಚಿಸಿದ ಕ್ಲೈಮ್ಯಾಕ್ಸ್‌ ದ್ವಾರಕೀಶ್‌ ಹೃದಯಕ್ಕೆ ಹತ್ತಿರವಾದರೆ ಲಕ್ಷ ರೂಪಾಯಿ ಬಹುಮಾನ.

ಮಜ್ನೂ ನೋಡದೇ ಇರುವವರು ಲಕ್ಷ ಗೆಲ್ಲುವ ಆಸೆಯಿಂದಾದರೂ ಚಿತ್ರ ನೋಡಬಹುದು ಅನ್ನೋದು ದ್ವಾರ್ಕಿ ಪ್ಲಾನ್‌. ಆದರೆ ಪ್ರೇಕ್ಷಕರಿಗೆ ಬಹುಮಾನದ ಆಮಿಷ ತೋರಿಸುವ ತಂತ್ರಗಳು ಈಗ ಸ್ಟೇಲ್‌ ಆಗಿವೆ. ಅಂದು ಗುಲ್ಜಾರ್‌ ಖಾನ್‌ ಅಲ್ಯೂಮಿನಿಯಂ ಡಬ್ಬ ಕೊಟ್ಟಿದ್ದರು. ಮೊನ್ನೆ ಪ್ರವೀಣ್‌ ನಾಯಕ್‌ ವಾಚ್‌ ಕೊಟ್ಟಿದ್ದರು. ಆದರೆ ಜನ ಥಿಯೇಟರ್‌ ಕಡೆ ಸುಳಿಯಲಿಲ್ಲ. ಈ ಬಾರಿ ಕ್ಯಾಶ್‌ ಪ್ರೆೃಸ್‌.

English summary
Dwarkeeshs Majnu fails to run with house full board in Bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada