ಕಲಾವಿದರಿಗೆ ಸ್ಮಾರಕ ಬೇಡ, ಅದರ ಬದಲು ಹೀಗೆ ಮಾಡಿ
Recommended Video

ಸಿನಿಮಾ ಕಲಾವಿದರಿಗೆ ಸ್ಮಾರಕ ಬೇಕು ಅಂತ ಒತ್ತಾಯ ಮಾಡುವ ಅಭಿಮಾನಿ ಬಳಗ ಒಂದು ಕಡೆ. ಅಂತಹ ಕಲಾವಿದರಿಗೆ ಸ್ಮಾರಕ ಕಟ್ಟಿ ಮರೆಯೋದು ಬೇಡ. ಅಂತವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳು ಆಗಬೇಕು ಎಂದು ಹೇಳುವ ಕಲಾವಿದರು ಮತ್ತೊಂದು ಕಡೆ.
ದೇಶಕ್ಕಾಗಿ ಹೋರಾಡಿದ ವೀರರಿಗೆ ಸ್ಮಾರಕ ಇಲ್ಲ. ಸಿನಿಮಾ ನಟರಿಗೆ ಯಾಕೆ ಸ್ಮಾರಕ ಎಂದು ಕೇಳುವ ಜನರೂ ಕೂಡ ಇದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಕನ್ನಡ ಚಿತ್ರರಂಗದವರೇ ಆಗಿರುವ ಕೆಲವು ಯುವ ಕಲಾವಿದರು, ಸ್ಮಾರಕ ಬೇಡ, ಅದರ ಬದಲು ಹೀಗೆ ಮಾಡಬಹುದು ಎಂದು ಸಲಹೆ ಕೊಡ್ತಿದ್ದಾರೆ. ಈ ಸಲಹೆಗಳನ್ನ ಆಳವಾಗಿ ಗಮನಿಸಿದ್ರೆ, ಇಂಡಸ್ಟ್ರಿಗೆ ಕೊಡುಗೆ ನೀಡಿದ ಕಲಾವಿದರನ್ನ ಹೀಗೂ ಗೌರವಿಸುವುದು ಒಳ್ಳೆಯ ಯೋಚನೆ ಎನ್ನಬಹುದು. ಹಾಗಿದ್ರೆ, ಯಾರು ಯಾವ ಐಡಿಯಾ ಕೊಡ್ತಿದ್ದಾರೆ. ಮುಂದೆ ಓದಿ....

'ಗಂಧದಗುಡಿ' ಮಲ್ಟಿಫ್ಲೆಕ್ಸ್ ಕಟ್ಟಿ
ಕನ್ನಡ ಚಿತ್ರರಂಗಕ್ಕೆ ಚಿತ್ರಮಂದಿರಗಳ ಕೊರತೆ ಇದೆ. ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಕ್ತಿಲ್ಲ. ರಾಜ್ಯದ ಬಹುತೇಕ ಕಡೆ ಕನ್ನಡ ಸಿನಿಮಾಗಳಿಗಿಂತ ಬೇರೆ ಭಾಷೆಯ ಸಿನಿಮಾಗಳೇ ಪ್ರದರ್ಶನವಾಗ್ತಿದೆ. ಹಾಗಾಗಿ, ಸರ್ಕಾರದವರು ಒಂದು ಮಲ್ಟಿಫ್ಲೆಕ್ಸ್ ಕಟ್ಟಿಸಿ, ಅದಕ್ಕೆ "ಗಂಧದಗುಡಿ" ಅಂತ ಹೆಸರಿಡಿ'' ಎಂದು ನಿರ್ದೇಶಕ ರೋಹಿತ್ ಪದಕಿ ಸಲಹೆ ನೀಡಿದ್ದಾರೆ.

ರಾಜ್, ವಿಷ್ಣು, ಶಂಕರ್, ಅಂಬಿ ಸ್ಕ್ರೀನ್ಸ
ಆ ಮಲ್ಟಿಫ್ಲೆಕ್ಸ್ ನಲ್ಲಿ ರಾಜ್, ವಿಷ್ಣು, ಶಂಕರ್, ಅಂಬಿ ಅವರ ಹೆಸರಿನಲ್ಲಿ ನಾಲ್ಕು ಸ್ಕ್ರೀನ್ ಗಳು ಇರಲಿ. ಈ ಮಲ್ಟಿಫ್ಲೆಕ್ಸ್ ನಲ್ಲಿ ಒಂದು ಟಿಕೆಟ್ ಬೆಲೆ 120ರೂ ಇರಲಿ. ಬರಿ ಕನ್ನಡ ಚಿತ್ರಗಳು ಮಾತ್ರ ಪ್ರದರ್ಶನವಾಗ್ಬೇಕು ಎಂಬ ವಿಶೇಷವಾದ ಆಲೋಚನೆಯನ್ನ ವ್ಯಕ್ತಪಡಿಸಿದ್ದಾರೆ.

ಸ್ಮಾರಕಕ್ಕಾಗಿ ದುಡಿದವರಲ್ಲಾ, ಚಿತ್ರ ರಂಗಕ್ಕಾಗಿ
ಅಂದ್ಹಾಗೆ, ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅಂತಹ ಕಲಾವಿದರು ಯಾವತ್ತೂ ಸ್ಮಾರಕಕ್ಕಾಗಿ ದುಡಿದವರಲ್ಲಾ. ಅವರು ಕೊಡುಗೆ ನೀಡಿದ್ದು ಚಿತ್ರರಂಗಕ್ಕೆ. ಹಾಗಾಗಿ ಧೀಮಂತರು ಯಾವುದಕ್ಕೆ ಜೀವ ಮುಡಿಪಾಗಿ ಇಟ್ಟಿದ್ದರೋ, ನಾವು ಅದಕ್ಕೇ ಅವರನ್ನು ಸ್ಮರಿಸೋಣ. ದಿನನಿತ್ಯ ಕನ್ನಡ ಚಿತ್ರಗಳನ್ನು ವೀಕ್ಷಿಸುವ ಕನ್ನಡ ಸಿನಿ ರಸಿಕರು ತುಂಬಲಿ. ಈ ಮೂಲಕ ಅವರನ್ನು ಜೀವಂತವಾಗಿ ಇಡೋಣ. ಸಿನೆಮಾ ಬೆಳೆಸೋಣ'' ಎಂಬ ಅಭಿಲಾಷೆಯನ್ನ ರೋಹಿತ್ ಪದಕಿ ಹೊರಹಾಕಿದ್ದಾರೆ.

ಮಂಸೋರೆ ಹೇಳೋದು ಇದೆ
''ಸ್ಮಾರಕಗಳ ನಿರ್ಮಾಣ ಮಾಡಲು ಕೋಟಿಗಟ್ಟಲೆ ಹಣ ಖರ್ಚು ಮಾಡುವುದಕ್ಕಿಂತ, ಅದೇ ಹಣದಲ್ಲಿ ಆಯಾ ನಾಯಕರ ಹೆಸರಲ್ಲಿ ಅತ್ಯಾಧುನಿಕ ಚಿತ್ರಮಂದಿರಗಳನ್ನು ನಿರ್ಮಿಸಿ, ಅಲ್ಲಿ ಆಯಾ ನಟರು ವೃತ್ತಿ ಜೀವನದಲ್ಲಿ ಕಾಪಾಡಿಕೊಂಡು ಬಂದಿದ್ದ ಮೌಲ್ಯಗಳನ್ನು ಪ್ರತಿಪಾದಿಸುವ ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಡುವುದು ಆಯಾ ನಟರಿಗೆ ನೀಡುವ ನಿಜವಾದ ಗೌರವ. ಈ ರೀತಿಯ ಚಿತ್ರಮಂದಿರಗಳನ್ನು ನಿರ್ಮಿಸುವುದರಿಂದ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಅನಾವಶ್ಯಕವಾಗಿ ಮಲ್ಟಿಫ್ಲೆಕ್ಸ್ನವರಿಗೆ ನೀಡುವ ಲಕ್ಷಾಂತರ ರೂಪಾಯಿಗಳ ಹಣವನ್ನೂ ಉಳಿಸಬಹುದು'' ಎಂದು ನಿರ್ದೇಶಕ ಮಂಸೋರೆ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











