'ಧೂಮಮ್' ಕನ್ನಡ ವರ್ಷನ್ ಈ ವಾರ ರಿಲೀಸ್ ಆಗಲ್ವಾ? ಹೊಂಬಾಳೆ ಸಂಸ್ಥೆ ಸೈಲೆಂಟ್ ಆಗಿರೋದ್ಯಾಕೆ?
ಲೂಸಿಯಾ ಪವನ್ ಕುಮಾರ್ ನಿರ್ದೇಶನದ 'ಧೂಮಮ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ವಾರವೇ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಆದರೆ ಕನ್ನಡದಲ್ಲಿ ಸದ್ಯಕ್ಕೆ ರಿಲೀಸ್ ಆಗಲ್ಲ ಎನ್ನುವ ಗುಸು ಗುಸು ಆರಂಭವಾಗಿದೆ. ಈ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಹಾಗೂ ಅಪರ್ಣಾ ಬಾಲಮುರಳಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿದೆ.
ಮಲಯಾಳಂನಲ್ಲಿ ನಿರ್ಮಾಣವಾಗಿರುವ 'ಧೂಮಮ್' ಚಿತ್ರವನ್ನು ಕನ್ನಡ, ತೆಲುಗು, ತಮಿಳಿಗೂ ಡಬ್ ಮಾಡಲಾಗಿದೆ. ಈಗಾಗಲೇ 4 ಭಾಷೆಗಳಲ್ಲಿ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಆದರೆ ಈ ವಾರ ಕನ್ನಡ ವರ್ಷನ್ ಸಿನಿಮಾ ತೆರೆಗೆ ಬರಲ್ಲ, ಬರೀ ಮಲಯಾಳಂ ವರ್ಷನ್ ಮಾತ್ರ ಬರುತ್ತೆ ಎನ್ನುವ ಊಹಾಪೋಹಕ್ಕೆ ಚಿತ್ರತಂಡ ತಂಡ ತೆರೆ ಎಳೆದಿದೆ. ಸಿನಿಮಾ ರಿಲೀಸ್‌ಗೆ 3 ದಿನ ಮಾತ್ರ ಬಾಕಿಯಿದೆ. ಆದರೂ ಕನ್ನಡದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಯಾವುದೇ ಪ್ರಮೋಷನ್ ಮಾಡ್ತಿಲ್ಲ. ಹಾಗಾಗಿ ಸದ್ಯಕ್ಕೆ ಕನ್ನಡ ವರ್ಷನ್ ಬರಲ್ಲ ಎನ್ನುವ ಅನುಮಾನ ಕೆಲವರನ್ನು ಕಾಡ್ತಿತ್ತು.

ಹೊಂಬಾಳೆ ಸಂಸ್ಥೆ ಈಗ ಅಕ್ಕ ಪಕ್ಕದ ಇಂಡಸ್ಟ್ರಿಗಳಿಗೂ ಎಂಟ್ರಿ ಕೊಟ್ಟಿದೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವುದರಿಂದ ಒಂದೇ ಭಾಷೆಯಲ್ಲಿ ನಿರ್ಮಾಣ ಮಾಡಿದ ಸಿನಿಮಾವನ್ನು ಮತ್ತೊಂದು ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಬಹುದು. ಅದೇ ರೀತಿ 'ಧೂಮಮ್' ಚಿತ್ರವನ್ನು ಏಕಕಾಲಕ್ಕೆ ತೆರೆಗೆ ತರಲಾಗುತ್ತಿದೆ.
ಸ್ಪಷ್ಟನೆ ನೀಡಿದ ಹೊಂಬಾಳೆ ಸಂಸ್ಥೆ
ಹೊಂಬಾಳೆ ಸಂಸ್ಥೆ ನಿರ್ಮಾಣದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಆದರೆ ಮೊದಲು ಈ ಚಿತ್ರವನ್ನು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ನಂತರ ಬೇಡಿಕೆ ತಕ್ಕಂತೆ ಬೇರೆ ಭಾಷೆಗಳಿಗೆ ಡಬ್ ಮಾಡಿ ತೆರೆಗರ ತರಲಾಗಿತ್ತು. ಈ ಐಡಿಯಾ ವರ್ಕೌಟ್ ಆಗಿತ್ತು. 'ಧೂಮಮ್' ವಿಚಾರದಲ್ಲೂ ಇದೇ ಲೆಕ್ಕಾಚಾರದಲ್ಲಿ ಹೊಂಬಾಳೆ ಸಂಸ್ಥೆ ಇದೆ ಎನ್ನಲಾಗಿತ್ತು. ಆದರೆ ಟೈಟಲ್ ಲಿರಿಕಲ್ ಸಾಂಗ್ ರಿಲೀಸ್ ಮಾಡಿರುವ ಸಂಸ್ಥೆ ಜೂನ್ 23ಕ್ಕೆ ಕನ್ನಡ ವರ್ಷನ್ ಕೂಡ ತೆರೆಗೆ ತರುವುದಾಗಿ ಮಾಹಿತಿ ನೀಡಿದೆ.
'ಧೂಮಮ್'ಗೆ ಪೃಥ್ವಿರಾಜ್ ಬಲ
ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳನ್ನು ಮಲಯಾಳಂ ನಟ ಪೃಥ್ವಿರಾಜ್ ಕೇರಳದಲ್ಲಿ ವಿತರಣೆ ಮಾಡಿದ್ದರು. 'ಧೂಮಮ್' ಮಲಯಾಲಂ ವಿತರಣೆ ಹಕ್ಕು ಕೂಡ ಪೃಥ್ವಿರಾಜ್ ಪಾಲಾಗಿದೆ. ಮ್ಯಾಜಿಕ್ ಫ್ರೇಮ್ಸ್ ಸಂಸ್ಥೆ ಜೊತೆ ಸೇರಿ ಪೃಥ್ವಿರಾಜ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಪೃಥ್ವಿರಾಜ್ ನಿರ್ದೇಶಿಸಿ, ನಟಿಸುತ್ತಿರುವ 'ಟೈಸನ್' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ.

'ಧೂಮಮ್' ಕಥೆ
ಪ್ರತಿಬಾರಿ ಪವನ್ ಕುಮಾರ್ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಾರೆ. ಈ ಬಾರಿಯೂ ಅಂಥದ್ದೆ ಪ್ರಯತ್ನ ಮಾಡಿದ್ದಾರೆ. ಸ್ಯಾಂಪಲ್‌ಗಳಲ್ಲಿ ಕಥೆ ಬಗ್ಗೆ ಅಷ್ಟಾಗಿ ಸುಳಿವು ಸಿಗುತ್ತಿಲ್ಲ. ಹಣದ ಆಸೆಗೆ ಬಿದ್ದ ನಾಯಕ ಏನೇನೋ ಕಸರತ್ತು ಮಾಡುತ್ತಿರುತ್ತಾನೆ. ಇದೇ ಹಾದಿಯಲ್ಲಿ ಏನೋ ಮಾಡಲು ಹೋಗಿ ತಾನೇ ಟ್ರ್ಯಾಪ್ ಆಗುವಂತೆ ಕಾಣುತ್ತದೆ. ಅಲ್ಲಿಂದ ಮುಂದೆ ಏನೆಲ್ಲಾ ಆಗುತ್ತದೆ ಅನ್ನೋದು ಸಿನಿಮಾ ಕಥೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ.
ಅಮೇಜಾನ್ ಪ್ರೈಂನಲ್ಲಿ 'ಧೂಮಮ್'
ಈಗ ಥ್ರಿಯೇಟ್ರಿಕಲ್ ಬ್ಯುಸಿನೆಸ್‌ನಷ್ಟೇ ಡಿಜಿಟಲ್ ಬ್ಯುಸಿನೆಸ್ ಕೂಡ ಮುಖ್ಯವಾಗುತ್ತದೆ. 'ಧೂಮಮ್' ಚಿತ್ರದ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂ ಪಾಲಾಗಿದೆ. ಆಗಸ್ಟ್ ವೇಳೆಗೆ ಸಿನಿಮಾ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಅದಕ್ಕಿಂತ ಮುಂಚೆ ಬಂದರೂ ಅಚ್ಚರಿ ಪಡಬೇಕಿಲ್ಲ. ರೋಷನ್ ಮ್ಯಾಥ್ಯೂವ್, ವಿನೀತ್ ರಾಧಾಕೃಷ್ಣನ್, ಅನು ಮೋಹನ್ ಹಾಗೂ ಅಚ್ಯುತ್ ಕುಮಾರ್ 'ಧೂಮಮ್' ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications











