ಎಲ್ಲರ ಲೆಕ್ಕಾಚಾರ ನಿಜ ಆಯ್ತು; ಯುವ 2ನೇ ಸಿನಿಮಾ ಅಪ್‌ಡೇಟ್ ಬಂದೇಬಿಡ್ತು
ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಈಗಾಗಲೇ 'ಯುವ' ಚಿತ್ರದಲ್ಲಿ ಪವರ್‌ಫುಲ್ ಪರ್ಫಾರ್ಮನ್ಸ್ ಮೂಲಕ ಅಣ್ಣಾವ್ರ ಮೊಮ್ಮಗ ಗೆದ್ದಿದ್ದು ಆಗಿದೆ. ಇದೀಗ 2ನೇ ಸಿನಿಮಾ ಸೆಟ್ಟೇರುತ್ತಿದೆ. ಆಯುಧ ಪೂಜೆ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಲಿದೆ.
ಯುವ ರಾಜ್‌ಕುಮಾರ್ 2ನೇ ಚಿತ್ರದಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆಗೆ ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಕೈ ಜೋಡಿಸುತ್ತಿವೆ. ಇತ್ತೀಚೆಗೆ ಇಂಟ್ರೆಸ್ಟಿಂಗ್ ಫೋಟೊ ಬಿಟ್ಟು ಈ ಬಗ್ಗೆ ಕುತೂಹಲ ಕೆರಳುವಂತೆ ಮಾಡಲಾಗಿತ್ತು. ಇದೀಗ ಅಧಿಕೃತವಾಗಿ ಜಯಣ್ಣ ಫಿಲ್ಮ್ಸ್ ಸಂಸ್ಥೆಯಿಂದ ಅಪ್‌ಡೇಟ್ ಬಂದಿದೆ. ಆಯುಧ ಪೂಜೆ ಸಂಭ್ರಮದಲ್ಲಿ ಅಕ್ಟೋಬರ್ 11(ಶುಕ್ರವಾರ)ಬೆಳಗ್ಗೆ 9 ಗಂಟೆ 59 ನಿಮಿಷಕ್ಕೆ ಅನೌನ್ಸ್‌ಮೆಂಟ್ ಎಂದು ಹೇಳಲಾಗಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಯ ಅಧಿಕೃತ ಪೇಜ್‌ಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ. ಮೂರು ಸಂಸ್ಥೆಗಳು ಸೇರಿ ದೊಡ್ಡ ಚಿತ್ರಕ್ಕೆ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತಿದೆ. 'ರತ್ನನ್ ಪ್ರಪಂಚ' ಸಿನಿಮಾ ಖ್ಯಾತಿಯ ರೋಹಿತ್ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಧನಂಜಯ ಹೀರೊ ಆಗಿ 'ಉತ್ತರಕಾಂಡ' ಎನ್ನುವ ಚಿತ್ರವನ್ನು ರೋಹಿತ್ ಪದಕಿ ಆರಂಭಿಸಿದ್ದರು. ಕೆಆರ್‌ಜಿ ಸಂಸ್ಥೆಯೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಲ್ಲಿಸಿ ಯುವ 2ನೇ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ. ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸಂಸ್ಥೆಗಳು ದೊಡ್ಡದೊಂದು ಹಿಟ್ ಸಿನಿಮಾ ಕೊಟ್ಟು ಬಹಳ ದಿನಗಳಾಯಿತು. ಈ ಬಾರಿ ಅಂತಾದೊಂದು ಸಿನಿಮಾ ಮಾಡುವ ಪ್ರಯತ್ನ ನಡೀತಿದೆ.
ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದು. ಹಾಗಾಗಿ ಬಹಳ ನಿರೀಕ್ಷೆ ಮೂಡಿದೆ. ಇನ್ನು ಚಿತ್ರಕ್ಕೆ 'ಎಕ್ಕ ರಾಜ ರಾಣಿ' ಎನ್ನುವ ಟೈಟಲ್ ಫೈನಲ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಪ್ಪು ನಟನೆಯ 'ಜಾಕಿ' ಚಿತ್ರದಲ್ಲಿ 'ಎಕ್ಕ ರಾಜ ರಾಣಿ' ಎಂದು ಶುರುವಾಗುವ ಹಾಡು ಸೂಪರ್ ಹಿಟ್ ಆಗಿತ್ತು.
ಟೈಟಲ್‌ನಿಂದಲೇ ಯುವ 2ನೇ ಸಿನಿಮಾ ಕುತೂಹಲ ಮೂಡಿಸಿದೆ. ಬಹಳ ಕ್ಯಾಚಿ ಆಗಿರುವ ಟೈಟಲ್ ಅಭಿಮಾನಿಗಳ ಮನಗೆದ್ದಿದೆ. ಇದನ್ನು ಅಧಿಕೃತವಾಗಿ ಕನ್ಫರ್ಮ್ ಮಾಡಬೇಕಿದೆ ಅಷ್ಟೆ. ಇನ್ನು ಸಿನಿಮಾ ಯಾವಾಗ ಸೆಟ್ಟೇರುತ್ತದೆ? ಯಾವಾಗ ಚಿತ್ರೀಕರಣ? ಯಾವಾಗ ರಿಲೀಸ್? ಎನ್ನುವುದನ್ನು ಕಾದು ನೋಡಬೇಕಿದೆ. ಯುವ ರಾಜ್‌ಕುಮಾರ್ 2ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಹಲವರು ಪ್ರಯತ್ನಿಸಿದ್ದರು. ಕೊನೆಗೆ ಆ ಅವಕಾಶ ರೋಹಿತ್ ಪದಕಿ ಪಾಲಾಗಿದೆ.
ಇದೇ ವರ್ಷ ಮಾರ್ಚ್ 29ಕ್ಕೆ ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾ ತೆರೆಗೆ ಬಂದಿತ್ತು. ಸಂತೋಷ್ ಆನಂದ್ ರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿತ್ತು. ಡ್ಯಾನ್ಸ್ ಮತ್ತು ಭರ್ಜರಿ ಆಕ್ಷನ್ ಮೂಲಕ ಯುವ ರಾಜ್‌ಕುಮಾರ್ ಪ್ರೇಕ್ಷಕರನ್ನು ರಂಜಿಸಿದ್ದರು. ಆದರೂ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ.
ಭಾರೀ ಬಜೆಟ್‌ನಲ್ಲಿ ಅದ್ಧೂರಿ ತಾರಾಗಣದೊಂದಿಗೆ 'ಎಕ್ಕ ರಾಜ ರಾಣಿ' ಸಿನಿಮಾ ನಿರ್ಮಾಣವಾಗಲಿದೆ. ಮೂರು ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು ಜೊತೆಯಾಗಿರುವುದು ಸಹಜವಾಗಿಯೇ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಯುವ 2ನೇ ಸಿನಿಮಾ ಕೂಡ ದೊಡ್ಡದಾಗಿ ಸೌಂಡ್ ಮಾಡುವ ಸುಳಿವು ಸಿಗುತ್ತಿದೆ.


Click it and Unblock the Notifications











